ಹೈಲೈಟ್ಸ್:
- ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕು ಬೀಚನಹಳ್ಳಿಯ ಕಬಿನಿ ತೋಟಗಾರಿಕೆ ಕ್ಷೇತ್ರದಲ್ಲಿ ಸಂಸ್ಕರಣಾ ಘಟಕ ಪ್ರಾರಂಭವಾಗುತ್ತಿದೆ
- ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಭಾಗದ ಬೆಳೆಗಾರರಿಗೆ ಅನುಕೂಲ
- ಆಂಧ್ರಪ್ರದೇಶದ ರೈತರು ವೈಜ್ಞಾನಿಕ ಮತ್ತು ಕ್ರಮಬದ್ಧ ಕೃಷಿ ಪದ್ಧತಿ ಅನುಸರಿಸುತ್ತಿರುವುದರಿಂದ ಅತ್ಯಧಿಕ ಇಳುವರಿ ಹಾಗೂ ಲಾಭ ಪಡೆಯುತ್ತಿದ್ದಾರೆ
ಮೈಸೂರು: ಆಧುನಿಕ ಕಲ್ಪವೃಕ್ಷ ತಾಳೆ ಹಣ್ಣು ಸಂಸ್ಕರಣೆಗಾಗಿ ಕಾವೇರಿ ಕಣಿವೆಯ ಬೆಳೆಗಾರರು ಇನ್ಮುಂದೆ 750 ಕಿ.ಮೀ.ದೂರದ ಹೈದರಾಬಾದಿನ ಕಾಕಿನಾಡಕ್ಕೆ ತೆರಳಬೇಕಾಗಿಲ್ಲ.
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕು ಬೀಚನಹಳ್ಳಿಯ ಕಬಿನಿ ತೋಟಗಾರಿಕೆ ಕ್ಷೇತ್ರದಲ್ಲಿ ಸಂಸ್ಕರಣಾ ಘಟಕ ಪ್ರಾರಂಭವಾಗುತ್ತಿದೆ. ಇದರಿಂದ ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಭಾಗದ ಬೆಳೆಗಾರರಿಗೆ ಅನುಕೂಲವಾಗಲಿದ್ದು, ಹತ್ತಾರು ತಾಸಿನ ಪ್ರಯಾಣದ ಖರ್ಚು, ಸಮಯ ಎರಡೂ ಉಳಿತಾಯವಾಗುತ್ತದೆ.
ಕೊಡಗಿನಲ್ಲಿ ಸುಮಾರು 800 ಹೆಕ್ಟೇರ್, ಮೈಸೂರಿನಲ್ಲಿ 600 ಹೆಕ್ಟೇರ್ ಸೇರಿದಂತೆ ಈ ಭಾಗದ ಐದು ಜಿಲ್ಲೆಗಳಿಂದ ಸಾವಿರಾರು ಹೆಕ್ಟೇರ್‌ನಲ್ಲಿ ತಾಳೆ ಬೆಳೆಯಲಾಗುತ್ತದೆ. ಈ ಹಣ್ಣು ಕಟಾವು ಮಾಡುತ್ತಿರುವ ರೈತರ ಅನುಕೂಲಕ್ಕಾಗಿ ತೋಟಗಾರಿಕೆ ಇಲಾಖೆ, ರಾಜ್ಯ ಸರಕಾರ ಹಾಗೂ ಸರಕಾರಿ ಅನುಮೋದಿತ ಖಾಸಗಿ ಪಾಲುದಾರ ಸಂಸ್ಥೆಯ ಸಹಯೋಗದಲ್ಲಿ ಸಂಕ್ರಾಂತಿ ಹಬ್ಬದಂದು ಘಟಕಕ್ಕೆ ಚಾಲನೆ ನೀಡಲಾಗುತ್ತಿದೆ. ಇದರಿಂದ ಈ ಭಾಗದ ರೈತರಿಗೆ ಅನುಕೂಲವಾಗುವುದಲ್ಲದೆ ಸಂಸ್ಕರಣೆಗಾಗಿ ದೂರದ ಹೈದರಾಬಾದ್‌ಗೆ ತೆರಳುವುದು ತಪ್ಪುತ್ತದೆ. ಜತೆಗೆ ಕೊಯ್ಲು ಮಾಡಿದ 24 ಗಂಟೆಯೊಳಗೆ ಘಟಕಕ್ಕೆ ಬೆಳೆ ತಲುಪಿಸದಿದ್ದರೆ ಹಾಳಾಗುವ ಸಾಧ್ಯತೆಯೂ ಹೆಚ್ಚಿದ್ದರಿಂದ ಬೆಳೆಗಾರರು ಆತಂಕ, ಆತುರದಲ್ಲೇ ಪ್ರಯಾಣಿಸಬೇಕಾಗಿತ್ತು. ಇದೆಲ್ಲದಕ್ಕೂ ಕಡಿವಾಣ ಹಾಕಿ, ರೈತರಿಗೆ ಉತ್ತೇಜಿಸುವ ಸಲುವಾಗಿ ಇಂಥದ್ದೊಂದು ಕ್ರಮ ಕೈಗೊಳ್ಳಲಾಗಿದೆ.
20 ಸಾವಿರ ಮೆಟ್ರಿಕ್ ಟನ್
ದಿನದಲ್ಲಿ ಕನಿಷ್ಠ 16ರಿಂದ 17 ಗಂಟೆ ತಾಳೆ ಹಣ್ಣು ಅರೆದರೆ ದಿನಕ್ಕೆ 34ರಂತೆ ತಿಂಗಳಿಗೆ ಸುಮಾರು ಸಾವಿರ ಮೆಟ್ರಿಕ್ ಟನ್ ಕಚ್ಚಾ ತೈಲ ದೊರೆಯುತ್ತದೆ. ಇದರೊಂದಿಗೆ ಇನ್ನೂ 20 ಸಾವಿರ ಟನ್ ಬೆಳೆ ಬಂದರೂ ಅರೆಯುವ ಸಾಮರ್ಥ್ಯ ಘಟಕಕ್ಕೆ ಇದೆ. ಜತೆಗೆ ತಾಳೆ ಎಣ್ಣೆಯನ್ನು ಆಹಾರ ತಯಾರಿಕೆ, ಕೈಗಾರಿಕೆ ಮತ್ತು ಜೈವಿಕ ಇಂಧನವಾಗಿಯೂ ಬಳಸುವುದರಿಂದ ಇದರ ಬೇಡಿಕೆ ಅಧಿಕವಾಗಿರುವುದರಿಂದ ಈ ಭಾಗದ ರೈತರು ಈ ಸೌಲಭ್ಯ ಬಳಸಿಕೊಳ್ಳಬಹುದು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೆ.ರುದ್ರೇಶ್ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.
ಟನ್‌ಗೆ 15 ಸಾವಿರ ರೂ.
ಆಂಧ್ರಪ್ರದೇಶದ ರೈತರು ವೈಜ್ಞಾನಿಕ ಮತ್ತು ಕ್ರಮಬದ್ಧ ಕೃಷಿ ಪದ್ಧತಿ ಅನುಸರಿಸುತ್ತಿರುವುದರಿಂದ ಅತ್ಯಧಿಕ ಇಳುವರಿ ಹಾಗೂ ಲಾಭ ಪಡೆಯುತ್ತಿದ್ದಾರೆ. ಅವರಂತೆ ಇಲ್ಲಿನ ರೈತರು ಹೆಚ್ಚು ತಾಳೆ ಬೆಳೆಯತ್ತ ಗಮನಹರಿಸಿದರೆ ಸಾಕಷ್ಟು ಹಣ ಸಂಪಾದಿಸಬಹುದು. ಏಕೆಂದರೆ ಪ್ರಸ್ತುತ ಟನ್‌ಗೆ 15 ಸಾವಿರ ರೂ. ನಿಗದಿಪಡಿಸಿದ್ದು, ಇದು ಉತ್ತಮ ಬೆಲೆಯಾಗಿದೆ ಎಂದು ಮಾರುಕಟ್ಟೆಯಲ್ಲಿ ಅಂದಾಜಿಸಲಾಗಿದೆ.
ಈ ಭಾಗದ ತಾಳೆ ಬೆಳೆಗಾರರು ದೂರದ ಹೈದರಾಬಾದ್‌ಗೆ ಹಣ್ಣನ್ನು ತೆಗೆದುಕೊಂಡು ಹೋಗುತ್ತಿದ್ದರಿಂದ ರೈತರಿಗೆ ನಷ್ಟವಾಗುತ್ತಿತ್ತು. ಇದನ್ನು ಪರಿಗಣಿಸಿ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ತೋಟಗಾರಿಕೆ ಕ್ಷೇತ್ರದಲ್ಲಿ ಸಂಸ್ಕರಣಾ ಘಟಕವನ್ನು ಜ.15ರಿಂದ ಪುನರಾರಂಭಿಸಲಾಗುತ್ತಿದೆ.
ಕೆ.ರುದ್ರೇಶ್, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ, ಮೈಸೂರು
Read more
[wpas_products keywords=”deal of the day sale today offer all”]