Karnataka news paper

ನಟಿಯ ಮೇಲೆ ಲೈಂಗಿಕ ಹಲ್ಲೆ ಕೇಸಿನ ಆರೋಪಿ ನಟ ದಿಲೀಪ್ ಫೋಟೋ ಮುಖಪುಟದಲ್ಲಿ ಪ್ರಕಟ: ವನಿತಾ ಮ್ಯಾಗಜಿನ್ ವಿರುದ್ಧ ಟೀಕೆಯ ಸುರಿಮಳೆ!


The New Indian Express

ಚೆನ್ನೈ: ಮಲಯಾಳಂ ಭಾಷೆಯಲ್ಲಿ ಪ್ರಕಟವಾಗುವ ಮಹಿಳೆಯರಿಗೆ ಸಂಬಂಧಿಸಿದ ವನಿತಾ ಮ್ಯಾಗಜಿನ್ ನ ಜನವರಿ ತಿಂಗಳ ಸಂಚಿಕೆಯ ಮುಖಪುಟದಲ್ಲಿ ಪ್ರಕಟಗೊಂಡ ಛಾಯಾಚಿತ್ರಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ. ಅದಕ್ಕೆ ಕಾರಣ ಮಲಯಾಳಂ ನಟ ದಿಲೀಪ್ ಮತ್ತು ಅವರ ಕುಟುಂಬದವರ ಫೋಟೋವನ್ನು ಪ್ರಕಟಿಸಿರುವುದು. 

ಫೋಟೋದ ಕೆಳಗಡೆ ಸ್ನೇಹಿತ ಮತ್ತು ಮಹಿಳೆಯರಿಗೆ ಮಾರ್ಗದರ್ಶಕ ಎಂದು ಟ್ಯಾಗ್ ಲೈನ್ ಕೊಟ್ಟಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಲು ಮುಖ್ಯ ಕಾರಣ. ಸೋಷಿಯಲ್ ಮೀಡಿಯಾದಲ್ಲಿ ವನಿತಾ ಮ್ಯಾಗಜಿನ್ ಹಾಗೂ ನಟ ದಿಲೀಪ್ ನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದಾರೆ.

ನಿರ್ದೇಶಕ ಬಾಲಚಂದ್ರ ಕುಮಾರ್ ನಟ ದಿಲೀಪ್ ವಿರುದ್ಧ ಹೊಸ ಆರೋಪ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ವನಿತಾ ಮ್ಯಾಗಜಿನ್ ನಲ್ಲಿ ದಿಲೀಪ್ ಮತ್ತು ಅವರ ಪತ್ನಿ-ಮಕ್ಕಳ ಫೋಟೋ ಪ್ರಕಟವಾಗಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಎಲ್ಲರಿಗೂ ಗೊತ್ತಿರುವಂತೆ ನಟ ದಿಲೀಪ್ 2017ರಲ್ಲಿ ಕನ್ನಡ ಸೇರಿದಂತೆ ದಕ್ಷಿಣ ಭಾರತ ಚಿತ್ರಗಳಲ್ಲಿ ನಟಿಸಿರುವ ಖ್ಯಾತ ನಟಿಯ ಅಪಹರಣ ಕೇಸಿನಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದರು. ಈಗಲೂ ಅವರು ಆರೋಪದಿಂದ ಮುಕ್ತವಾಗಿಲ್ಲ. ಒಬ್ಬ ಮಹಿಳೆ-ಯುವತಿಯನ್ನು ಅಪಹರಿಸಿ ಹಾಳುಗೆಡವಲು ನೋಡಿದ ವ್ಯಕ್ತಿ ಮಹಿಳೆಯರಿಗೆ ಹೇಗೆ ಆದರ್ಶ-ಮಾರ್ಗದರ್ಶಕನಾಗುತ್ತಾನೆ, ಆತನ ಸಂದರ್ಶನ ಮತ್ತು ಫೋಟೋವನ್ನು ಪ್ರಕಟಿಸಿದ ಮ್ಯಾಗಜಿನ್ ನ ಉದ್ದೇಶವೇನು ಎಂದು ಬಾಲಿವುಡ್ ನಟಿ ಸ್ವರ ಭಾಸ್ಕರ್ ಸೋಷಿಯಲ್ ಮೀಡಿಯಾದಲ್ಲಿ ಟೀಕಿಸಿದ್ದಾರೆ.

ಈ ಮಧ್ಯೆ ಪ್ರಮುಖ ನಟರು ಹಾಗೂ ನಿರ್ದೇಶಕರುಗಳಾದ ಹರೀಶ್ ಪೆರಡಿ, ಸಂದ್ರ ಥಾಮಸ್ ಮತ್ತು ಅರುಣ್ ಗೋಪಿ ಮೊದಲಾದವರು ವನಿತಾ ಮ್ಯಾಗಜಿನ್ ಆಡಳಿತ ಮಂಡಳಿಯ ಕ್ರಮವನ್ನು ಬೆಂಬಲಿಸಿದ್ದಾರೆ. ಅರುಣ್ ಗೋಪಿ ದಿಲೀಪ್ ನಟನೆಯ ರಾಮ್ ಲೀಲಾ ಸಿನಿಮಾದ ನಿರ್ದೇಶಕರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಅಮೆರಿಕಕ್ಕೆ ಚಿಕಿತ್ಸೆಗೆ ಹೋಗಬಹುದಾದರೆ ದಿಲೀಪ್ ಅವರ ಫೋಟೋ ಮ್ಯಾಗಜಿನ್ ನಲ್ಲಿ ಪ್ರಕಟಿಸಿದ್ದರಲ್ಲಿ, ಅವರು ಮ್ಯಾಗಜಿನ್ ಗೆ ಸಂದರ್ಶನ ನೀಡಿದ್ದರಲ್ಲಿ ತಪ್ಪೇನಿದೆ, ಒಬ್ಬ ವ್ಯಕ್ತಿ ಆರೋಪಿಯಾಗಿದ್ದರೂ ಕೂಡ ಆತನಿಗೆ ಸಂದರ್ಶನ ನೀಡುವ ಹಕ್ಕು ಇದೆ ಎನ್ನುತ್ತಾರೆ.

ಮಲಯಾಳಂನ ಖ್ಯಾತ ನಿರ್ದೇಶಕಿ ಹಾಗೂ ಕಥೆಗಾರ್ತಿ ಅಂಜಲಿ ಮೆನನ್ ಮಾತ್ರ ಮ್ಯಾಗಜಿನ್ ಆಡಳಿತ ವರ್ಗವನ್ನು ಟೀಕಿಸಿದ್ದಾರೆ. ನಮ್ಮ ದೇಶದಲ್ಲಿ ಲೈಂಗಿಕ ಹಲ್ಲೆಗೊಳಗಾಗಿ ಬದುಕುಳಿದವರು ಸಾಕಷ್ಟು ಮಹಿಳೆಯರು ಮತ್ತು ಯುವತಿಯರಿದ್ದಾರೆ. ಅಂತವರ ಅನುಭವ, ಕಥೆಗಳನ್ನು ವನಿತಾ ಮ್ಯಾಗಜಿನ್ ಪ್ರಕಟಿಸಬೇಕು. ಅವರ ಬದುಕು-ಅಭಿವೃದ್ಧಿ ಮತ್ತು ಧನಾತ್ಮಕ ಮೌಲ್ಯಗಳ ಬಗ್ಗೆ ಬರೆಯಬೇಕು. ಅದು ಬಿಟ್ಟು ಲೈಂಗಿಕ ಹಲ್ಲೆ ಆರೋಪಿಯಾಗಿರುವ ದಿಲೀಪ್ರಂಥವರ ಬದುಕಿನ ಬಗ್ಗೆ ಪ್ರಕಟಿಸಿರುವ ವನಿತಾ ಮ್ಯಾಗಜಿನ್ ನ ನಡೆ ಬಗ್ಗೆ ನನಗೆ ಸಂದೇಹ ಬರುತ್ತಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಮ್ಯಾಗಜಿನ್ ನ ಇತರ ಹಲವು ವಿವಾದಿತ ಪ್ರಕಟಣೆಗಳು ಮತ್ತು ಬರಹಗಳ ಹಾಗೆಯೇ ಇದು ಕೂಡ ಎನ್ನುತ್ತಾರೆ ಅವರು. ನಟ ದಿಲೀಪ್ ಅವರು ನಟಿಯ ಅಪಹರಣ ಮತ್ತು ಲೈಂಗಿಕ ಹಲ್ಲೆ ಕೇಸಿನಲ್ಲಿ 8ನೇ ಆರೋಪಿಯಾಗಿದ್ದಾರೆ. ದಿಲೀಪ್, ಅವರ ಪತ್ನಿ ನಟಿ ಕಾವ್ಯ ಮಾಧವನ್ ಮತ್ತು ಪುತ್ರಿಯರ ಫೋಟೋ ವನಿತಾ ಮ್ಯಾಗಜಿನ್ ಮುಖಪುಟದಲ್ಲಿ ಪ್ರಕಟಗೊಂಡಿದೆ.





Read more…

[wpas_products keywords=”party wear dress for women stylish indian”]