Karnataka news paper

ರಾಜ್ಯದ ಕೋವಿಡ್ ವಾರ್ ರೂಮ್‌ಗೆ ರಾಷ್ಟ್ರ ಪ್ರಶಸ್ತಿ!


The New Indian Express

ಬೆಂಗಳೂರು: ಹೈದರಾಬಾದ್‌ನಲ್ಲಿ ಶುಕ್ರವಾರ ನಡೆದ ಇ-ಆಡಳಿತದ 24ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ಕೋವಿಡ್ -19 ವಾರ್ ರೂಮ್’ಗೆ ಕೋವಿಡ್ ನಿರ್ವಹಣೆಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು (ಐಸಿಟಿ) ಬಳಸುವ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿಯನ್ನು ಸ್ವೀಕರಿಸಿದ ಕೋವಿಡ್ ವಾರ್ ರೂಮ್ ಮುಖ್ಯಸ್ಥ ಮುನಿಶ್ ಮೌದ್ಗಿಲ್ ಅವರು ಈ ಕುರಿತು ಮಾತನಾಡಿ, ಇ-ಆಡಳಿತ ವಿಧಾನವು ಪರಿಸ್ಥಿತಿಯನ್ನು ಪರಿಣಾಕಾರಿಯಾಗಿ ನಿರ್ವಹಣೆ ಮಾಡುವುದು ಮತ್ತು ಸಮಗ್ರ ಪ್ರತಿಕ್ರಿಯೆಗೆ ಪ್ರಮುಖವಾಗಿದೆ ಎಂದು ಹೇಳಿದ್ದಾರೆ.

ಕೋವಿಡ್ ವಾರಿಯರ್ಸ್ ಗಳಿಗೆ ನಾವು ಸಪೋರ್ಟ್ ನೆಟ್ ವರ್ಕ್ ಆಗಿದ್ದೇವೆ. ಸೂಕ್ತ ಸಮಯಕ್ಕೆ ಸೂಕ್ತ ಮಾಹಿತಿಯನ್ನು ನೀಡಿ ಜೀವ ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕೋವಿಡ್ ನಿರ್ವಹಣೆಗೆ ಬೆಂಬಲ ವ್ಯವಸ್ಥೆಯಾಗಿದ್ದೇವೆ ಮತ್ತು ಗಡಿಯಾದ ಮುಳ್ಳುಗಳಂತೆ ಕೆಲಸ ಮಾಡುತ್ತಿದ್ದೇವ. ಸಾಂಕ್ರಾಮಿಕ ರೋಗದ ಬಳಿಕ ಹೆಚ್ಚಿನ ಸಿಬ್ಬಂದಿ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.

ಮಾರ್ಚ್ 2020 ರಲ್ಲಿ ಮೊದಲ ಅಲೆ ರಾಜ್ಯಕ್ಕೆ ಅಪ್ಪಳಿಸಿತ್ತು. ಮೊದಲ ಅಲೆ ಆರಂಭವಾದ 2-3 ದಿನಗಳಲ್ಲಿ ವಾರ್ಡ್ ರೂಮ್ ಅನ್ನು ಸ್ಥಾಪಿಸಲಾಗಿತ್ತು. ಕೊರೋನಾ ವಾಚ್ ಮೊಬೈಲ್ ಅಪ್ಲಿಕೇಶನ್ ಅನ್ನು ಮೊದಲು ರಚಿಸಲಾಯಿತು. ಸೋಂಕಿತರ ಸಂಪರ್ಕ ಪತ್ತೆಹಚ್ಚುವಿಕೆಗಾಗಿ ಅಪ್ಲಿಕೇಶನ್ ಅನ್ನು ಬಳಸುತ್ತಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ. ಇದೀಗ ಲೈನ್ ಲಿಸ್ಟ್ ಸಿಸ್ಟಮ್ ಎಂದು ಕರೆಯಲ್ಪಡುವ ರೋಗಿಗಳ ನಿರ್ವಹಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಬಂದೇ ಬಿಡ್ತಾ ಮೂರನೇ ಅಲೆ?: ಬೆಡ್ ಡೇಟಾ ಗಾಗಿ ಕೋವಿಡ್ ವಾರ್ ರೂಂ, ಬಿಬಿಎಂಪಿ ಸಿದ್ದತೆ

ಕರ್ನಾಟಕ ರಾಜ್ಯವನ್ನೇ ಇದೀಗ ಹರಿಯಾಣ ರಾಜ್ಯ ಕೂಡ ಅನುಸರಿಸುತ್ತಿದೆ. ಕೊರೋನಾ ಮೊದಲ ಅಲೆ ಸಂದರ್ಭದಲ್ಲಿ ಪಾಂಡಿಚೆರಿ ರಾಜ್ಯಪಾಲ ಕಿರಣ್ ಬೇಡಿ ಅವರು ಕೋವಿಡ್ ವಾರ್ ರೂಮ್’ನ್ನು ಸಂಪರ್ಕಿಸಿ, ಸಲಹೆಗಳನ್ನು ಪಡೆದುಕೊಂಡಿದ್ದರು. ಬಳಿಕ ಅಲ್ಲಿಗೇ ತಂಡವೊಂದನ್ನು ರವಾನಿಸಿ ಮಾಹಿತಿ ನೀಡಲಾಗಿತ್ತು. ಇದಾದ ಬಳಿಕ ಪ್ರತೀ ರಾಜ್ಯವೂ ಇದೇ ಮಾರ್ಗವನ್ನು ಅನುಸರಿಸುತ್ತಿವೆ.

“ಸಾಂಕ್ರಾಮಿಕ ರೋಗ ನಿರ್ವಹಣೆಗೆ ಐಟಿಯೊಂದಿಗೆ ವ್ಯವಸ್ಥಿತ ಮತ್ತು ಸಂಘಟಿತ ವಿಧಾನದ ಅಗತ್ಯವಿದೆ. ನವೆಂಬರ್ 2020ರಲ್ಲಿ, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವು ವಾರ್ ರೂಮ್ ಅನ್ನು ಪರಿಶೀಲನೆ ಮಾಡಿತ್ತು. ಬಳಿಕ ಕೋವಿಡ್ -19 ನಿರ್ವಹಣೆಯಲ್ಲಿ ಕೋವಿಡ್ ವಾರ್ ರೂಮ್ ಅತ್ಯಂತ ಪರಿಣಾಮಕಾರಿ ಎಂದು ಹೇಳಿತ್ತು. ನಮ್ಮ ಕಾಂಟ್ಯಾಕ್ಟ್ ಟ್ರೇಸಿಂಗ್ ಮಾದರಿಯನ್ನು ಭಾರತ ಸರ್ಕಾರವು ಜೂನ್-ಜುಲೈ 2020 ರಲ್ಲಿ ಆಯ್ಕೆ ಮಾಡಿತ್ತು. ಅದನ್ನು ಕಾರ್ಯಗತಗೊಳಿಸಲು ಇತರ ರಾಜ್ಯಗಳಿಗೂ ಸೂಚನೆ ನೀಡಿತ್ತು ಎಂದು ಮಾಹಿತಿ ನೀಡಿದ್ದಾರೆ.

ವಾರ್ ರೂಮ್‌ನಲ್ಲಿ ಸಂಯೋಜಕರು, ತಾಂತ್ರಿಕ ಮತ್ತು ಇತರ ಸಿಬ್ಬಂದಿಯನ್ನು ಹೊರತುಪಡಿಸಿ ಸುಮಾರು 20-30 ಜನರಿದ್ದಾರೆ. ಈಗ ಮೂರನೇ ಅಲೆಯಲ್ಲಿ ಪರಿಣಾಮಕಾರಿ ಮಾಹಿತಿ ಸಂಗ್ರಹಣೆ ಮತ್ತು ವ್ಯವಸ್ಥಿತ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ವಾರ್ ರೂಮ್ ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ.



Read more

[wpas_products keywords=”deal of the day”]