Karnataka news paper

1 ಸಾವಿರ ಎಕರೆ ಅರಣ್ಯ ದತ್ತು ಪಡೆದ ನಟ ನಾಗಾರ್ಜುನ; ‘ಬಿಗ್ ಬಾಸ್’ ವೇದಿಕೆ ಮೇಲೆ ಘೋಷಣೆ


ಹೈಲೈಟ್ಸ್‌:

  • ‘ಬಿಗ್ ಬಾಸ್’ ತೆಲುಗು ರಿಯಾಲಿಟಿ ಶೋ ವೇದಿಕೆ ಮೇಲೆ ಮಹತ್ವ ಘೋಷಣೆ
  • ಒಂದು ಸಾವಿರ ಎಕರೆ ಅರಣ್ಯ ದತ್ತು ಪಡೆಯುವುದಾಗಿ ಘೋಷಿಸಿದ ನಾಗಾರ್ಜುನ
  • ಅಕ್ಕಿನೇನಿ ನಾಗಾರ್ಜುನ ನಿರ್ಧಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ

ಜನಪ್ರಿಯ ನಟ ನಾಗಾರ್ಜುನ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಇದೀಗ ಅವರು 1 ಸಾವಿರ ಎಕರೆ ಅರಣ್ಯ ಪ್ರದೇಶವನ್ನು ದತ್ತು ಪಡೆದು, ಅದರ ಅಭಿವೃದ್ಧಿಗೆ ಮುಂದಾಗಿದ್ದಾರೆ. ಅಷ್ಟಕ್ಕೂ ಇದಕ್ಕೆಲ್ಲ ಕಾರಣವಾಗಿದ್ದು ರಾಜ್ಯಸಭಾ ಸದಸ್ಯ ಸಂತೋಷ್ ಕುಮಾರ್ ಜೋಗಿನಪಲ್ಲಿ. ಗಿಡ ಬೆಳಸಿ ಕಾಡು ಉಳಿಸಿ ಎನ್ನುತ್ತ ಗ್ರೀನ್ ಇಂಡಿಯಾ ಚಾಲೆಂಜ್ ಆಯೋಜಿಸಿ ಖ್ಯಾತಿ ಪಡೆದಿರುವ ಸಂತೋಷ್, ಈಚೆಗೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆ ವೇಳೆ ನಾಗಾರ್ಜುನ ಅವರು ಒಂದು ಸಾವಿರ ಎಕರೆ ಅರಣ್ಯವನ್ನು ದತ್ತು ಪಡೆಯುವುದಾಗಿ ಘೋಷಣೆ ಮಾಡಿದ್ದಾರೆ.

1650 ಎಕರೆ ಅರಣ್ಯ ದತ್ತು ಪಡೆದಿರುವ ಪ್ರಭಾಸ್‌
ನಟ ಪ್ರಭಾಸ್ ಅವರು ಈಗಗಾಲೇ 1650 ಎಕರೆ ಅರಣ್ಯ ಪ್ರದೇಶವನ್ನು ದತ್ತು ಪಡೆದಿದ್ದಾರೆ. ಈ ಬಗ್ಗೆ ಬಿಗ್ ಬಾಸ್ ವೇದಿಕೆ ಮೇಲೆ ಚರ್ಚೆ ಆಯ್ತು. ತಮ್ಮ ತಂದೆ ಸೂರ್ಯನಾರಾಯಣ ಉಪ್ಪಲಪಟ್ಟಿ ಅವರ ಹೆಸರಿನಲ್ಲಿ ಹೈದರಾಬಾದ್‌ನ ಕಾಳಿಪಲ್ಲಿಯ 1650 ಎಕರೆ ಅರಣ್ಯ ಪ್ರದೇಶವನ್ನು ದತ್ತು ಪಡೆದಿರುವ ಪ್ರಭಾಸ್ ಅದರ ಅಭಿವೃದ್ಧಿಗೆ ಮುಂದಾಗಿದ್ದಾರೆ. ಹಾಗೆಯೇ ಉದ್ಯಮಿ ಪಾರ್ಥಸಾರಥಿ ರೆಡ್ಡಿ ಅವರು ಸುಮಾರು 2500 ಎಕರೆ ಅರಣ್ಯ ಪ್ರದೇಶವನ್ನು ದತ್ತು ಪಡೆದು, ಅದರ ಕಾಳಜಿವಹಿಸಿದ್ದಾರೆ. ಈ ವಿಚಾರ ತಿಳಿದ ನಾಗಾರ್ಜುನ, ‘ನಾನು ಕೂಡ 1 ಸಾವಿರ ಎಕೆರೆ ಅರಣ್ಯವನ್ನು ದತ್ತು ಪಡೆಯಲಿದ್ದೇನೆ’ ಎಂದು ಘೋಷಿಸಿದರು. ಅಲ್ಲದೆ, ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಡುವಂತೆ ಎಂಪಿ ಸಂತೋಷ್ ಕುಮಾರ್ ಅವರಲ್ಲಿ ನಾಗಾರ್ಜುನ ಮನವಿ ಮಾಡಿಕೊಂಡರು.

ಗಿಡ ನೆಡುವಂತೆ ಮನವಿ
ಇನ್ನು, ಬಿಗ್ ಬಾಸ್ ವೇದಿಕೆ ಮೇಲೆ ಗಿಡವೊಂದನ್ನು ನೆಟ್ಟು, ಕರೆಯೊಂದನ್ನು ನೀಡಿದ್ದಾರೆ ನಾಗಾರ್ಜುನ. ‘ಈ ವರ್ಷ ಮುಗಿಯಲು ಇನ್ನು ಮೂರು ವಾರಗಳು ಬಾಕಿ ಇವೆ. ಹಾಗಾಗಿ, ಪ್ರತಿಯೊಬ್ಬರು ಎಷ್ಟು ಸಾಧ್ಯವೋ, ಅಷ್ಟು ಗಿಡಗಳನ್ನು ನೆಟ್ಟು, ಪೋಷಿಸಿರಿ. ಈ ವರ್ಷವನ್ನು ಒಂದು ಉತ್ತಮ ಕಾರ್ಯದೊಂದಿಗೆ ಮುಗಿಸೋಣ’ ಎಂದು ನಾಗಾರ್ಜುನ ಅಕ್ಕಿನೇನಿ ಹೇಳಿದ್ದಾರೆ. ನಾಗಾರ್ಜುನ ಅವರ ನಡೆಗೆ ಅನೇಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು, ಕೆಲ ತಿಂಗಳ ಹಿಂದಷ್ಟೇ ತಮ್ಮ ಮಾಜಿ ಸೊಸೆ ಸಮಂತಾ ಜೊತೆಗೆ ನಾಗಾರ್ಜುನ ಅವರು ಸಂತೋಷ್ ಕುಮಾರ್ ಅವರ ಗ್ರೀನ್ ಇಂಡಿಯಾ ಚಾಲೆಂಜ್‌ನಲ್ಲಿ ಭಾಗವಹಿಸಿದ್ದರು.

ಪುನೀತ್ ರಾಜ್‌ಕುಮಾರ್‌ ಮನೆಗೆ ಟಾಲಿವುಡ್ ನಟ ನಾಗಾರ್ಜುನ ಭೇಟಿ; ಅಪ್ಪು ಫ್ಯಾಮಿಲಿಗೆ ಸಾಂತ್ವನ

ಅಂದಹಾಗೆ, ಎಂಪಿ ಸಂತೋಷ್ ಕುಮಾರ್ ಜೋಗಿನಪಲ್ಲಿ ಅವರ ಗ್ರೀನ್ ಇಂಡಿಯಾ ಚಾಲೆಂಜ್‌ಗೆ ದೊಡ್ಡಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗಿದೆ. ತೆಲುಗು ಚಿತ್ರರಂಗದ ಸಾಕಷ್ಟು ಸ್ಟಾರ್ ನಟರು ಈ ಚಾಲೆಂಜ್ ಸ್ವೀಕರಿಸಿ, ಗಿಡ ನೆಟ್ಟಿದ್ದಾರೆ. ಜೊತೆಗೆ ಸಹ ನಟರ-ನಟಿಯರಿಗೆ, ಚಿತ್ರರಂಗದ ಗಣ್ಯರಿಗೆ ಗಿಡ ನೆಡುವಂತೆ ಚಾಲೆಂಜ್ ನೀಡಿದ್ದಾರೆ. ನಾಗರೀಕರು ಕೂಡ ಈ ಚಾಲೆಂಜ್‌ನಲ್ಲಿ ಭಾಗಿಯಾಗಿ ಗಿಡ ನೆಟ್ಟಿದ್ದಾರೆ. ಈವರೆಗೂ ಗ್ರೀನ್ ಇಂಡಿಯಾ ಚಾಲೆಂಜ್ ಮೂಲಕ 16 ಕೋಟಿ ಗಿಡಗಳನ್ನು ನೆಡಲಾಗಿದೆ.

ಸಮಂತಾ-ನಾಗ ಚೈತನ್ಯ ದೂರಾಗಿದ್ದು ದುರಾದೃಷ್ಟಕರ: ಮನಸ್ಸಿನ ಮಾತು ಹೊರಹಾಕಿದ ನಾಗಾರ್ಜುನ



Read more