ಬೆಂಗಳೂರು ಗ್ರಾಮಾಂತರ: ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಗ್ರಾಮಾಂತರ ಜಿಲ್ಲೆಗೆ ಕೊರೊನಾ 3 ನೇ ಅಲೆಯ ಭೀತಿ ಎದುರಾಗಿದೆ. ಕಳೆದ ಕೆಲ ತಿಂಗಳಿಂದ ಒಂದಕ್ಕಿಯಲ್ಲಿ ಬರುತ್ತಿದ್ದ ಸೋಂಕಿನ ಪ್ರಮಾಣ ಇದೀಗ ಎರಡಂಕ್ಕಿ ದಾಟಿರುವ ಜತೆಗೆ ಪ್ರತಿ ದಿನ ಸೋಂಕಿನ ಪ್ರಮಾಣದಲ್ಲಿ ಏರಿಕೆ ಕಾಣಬಹುದಾಗಿದೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣದ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಆದರೆ ಜಿಲ್ಲೆಯ ಒಬ್ಬ ಸೋಂಕಿತ ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಉಳಿದವರು ಬೇಗನೇ ಗುಣಮುಖರಾಗುತ್ತಿದ್ದಾರೆ. ಲಸಿಕಾಕರಣವು ಚುರುಕಾಗಿ ನಡೆಯುತ್ತಿದ್ದು ಮೊದಲೇ ಡೋಸ್ ಲಸಿಕೆ ಶೇ.100ರ ಗಡಿಯತ್ತ ಸಾಗಿದೆ. ಮಕ್ಕಳ ಲಸಿಕಾ ವಿತರಣೆ ಇದೀಗ ಚುರುಕಾಗಿದ್ದು ಟೆಸ್ಟಿಂಗ್ ಹೆಚ್ಚಳಕ್ಕೂ ಜಿಲ್ಲಾಡಳಿತ ವ್ಯವಸ್ಥೆ ಮಾಡುತ್ತಿದೆ.
0.85 ಕ್ಕೆ ಪಾಸಿಟಿವಿಟಿ ಏರಿಕೆ
ಜಿಲ್ಲೆಯ 4 ತಾಲೂಕುಗಳಲ್ಲಿ ಕೋವಿಡ್ ಸೋಂಕು ನಿಧಾನಗತಿಯಲ್ಲಿ ಏರಿಕೆ ಕಾಣುತ್ತಿದೆ. ಜಿಲ್ಲೆಯಲ್ಲಿ 2021ರ ಡಿಸೆಂಬರ್ ತಿಂಗಳಲ್ಲಿ ದೊಡ್ಡಬಳ್ಳಾಪುರದಲ್ಲಿ 09, ಹೊಸಕೋಟೆ 28, ದೇವನಹಳ್ಳಿ 15, ನೆಲಮಂಗಲ 11 ಕೋವಿಡ್ ಪ್ರಕರಣ ವರದಿಯಾಗಿದ್ದು ಒಟ್ಟು 63 ಪಾಸಿಟಿವ್ ಪ್ರಕರಣ ಕಾಣಿಸಿಕೊಂಡಿದೆ. ಈ ತಿಂಗಳಲ್ಲಿ ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ ಶೇ.0.17 ರಷ್ಟಿತ್ತು. ಆದರೆ ಡಿ. 30 ರಿಂದ ಜ.5ರವರೆಗೆ 7 ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲಿ71 ಕೋವಿಡ್ ಸೋಂಕು ದೃಢಪಟ್ಟಿದೆ. ಇದರಿಂದ ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ ಶೇ.0.85ಕ್ಕೆ ಏರಿಕೆ ಕಂಡಿದೆ.
ಏರ್‌ಪೋರ್ಟ್ ಆತಂಕ
ವಿದೇಶಗಳಲ್ಲಿ ಕೊರೊನಾ ಅಬ್ಬರಿಸುತ್ತಿದೆ. ಇದರಿಂದ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೈ ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರಿಗೆ ಟೆಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಈ ವೇಳೆಯಲ್ಲಿ ಪ್ರತಿದಿನ ವಿಮಾನದಲ್ಲಿ ಬರುವ ಪ್ರಯಾಣಿಕರಿಗೆ ಕೊರೊನಾ ದೃಢಪಡುತ್ತಿದೆ. ಈ ಪ್ರಮಾಣ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಜಿಲ್ಲೆಯಲ್ಲಿ ಸೋಂಕಿನ ಆತಂಕ ಹೆಚ್ಚಿದೆ.
ಮೊದಲ ಡೋಸ್ ಶೇ.95
ಕೊರೊನಾ ನಿಯಂತ್ರಣಕ್ಕೆ ಲಸಿಕೆ ಬಹುಮುಖ್ಯವಾಗಿದೆ. ಇದರಿಂದ ಜಿಲ್ಲೆಯಲ್ಲಿ ಲಸಿಕಾ ವಿತರಣೆ ಹೆಚ್ಚಿನ ಒತ್ತು ನೀಡಲಾಗಿದೆ. ಜಿಲ್ಲೆಯಲ್ಲಿ 18ವರ್ಷ ಮೇಲ್ಪಟ್ಟವರ 9,19,000 ಲಸಿಕಾ ಗುರಿಯಲ್ಲಿ ಡಿ.5ಕ್ಕೆ 7,78,872 ಮಂದಿಗೆ ಲಸಿಕೆ ನೀಡಿ ಶೇ. 95.1ರಷ್ಟು ಪ್ರಗತಿಸಾಧಿಸಲಾಗಿದೆ. ಜತೆಗೆ 2ನೇ ಡೋಸ್ ಲಸಿಕೆಯನ್ನು 6,93,803 ಮಂದಿಗೆ ನೀಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಶೇ. 84.7ರಷ್ಟು ಲಸಿಕೆ ಗುರಿಯನ್ನು ತಲುಪಲಾಗಿದೆ. ಡಿ. 6ರ ಅನ್ವಯ 14,182 15 ರಿಂದ 17 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಡಿ.6 ರಂದು 8ಸಾವಿರ ಮಕ್ಕಳಿಗೆ ಲಸಿಕೆ ನೀಡಲಾಗಿದೆ.
7 ದಿನದ ಕೋವಿಡ್ ವರದಿ
ತಾಲೂಕು | ಪಾಸಿಟಿವ್( ಶೇ) | ಪಾಸಿಟಿವಿಟಿ
- ದೊಡ್ಡಬಳ್ಳಾಪುರ 7- 0.25
- ಹೊಸಕೋಟೆ 21 -0.99
- ದೇವನಹಳ್ಳಿ 18 -1.01
- ನೆಲಮಂಗಲ 25 -1.49
- ಒಟ್ಟು 71 -0.85
ಪ್ರಮುಖಾಂಶಗಳು
- ಜಿಲ್ಲೆಯಲ್ಲಿ ಒಟ್ಟು 63,212 ಮಂದಿಗೆ ಕೊರೊನಾ ಸೋಂಕು
- 61,244 ಮಂದಿ ಗುಣಮುಖ
- ಜಿಲ್ಲೆಯ 76 ಸಕ್ರಿಯ ಕೊರೊನಾ ಪ್ರಕರಣ
- ಜಿಲ್ಲೆಯಲ್ಲಿ ಒಟ್ಟು 8,41,237 ಮಂದಿಗೆ ಕೊರೊನಾ ಪರೀಕ್ಷೆ
- ಕೊರೊನಾ ಸೋಂಕಿನಿಂದ ಶೇ.98.44 ಮಂದಿ ಗುಣಮುಖ
ಟೆಸ್ಟಿಂಗ್ ಹೆಚ್ಚಿಸಿ
ಕೋವಿಡ್ 3ನೇ ಅಲೆಯ ವೇಗವಾಗಿ ಹರಡುತ್ತಿದೆ. ಇದರಿಂದ ಸೋಂಕನ್ನು ನಿಯಂತ್ರಿಸಲು ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿರುವವರ ಟೆಸ್ಟಿಂಗ್ ಕೂಡ ಮಾಡಬೇಕಾಗಿದೆ. ಜಿಲ್ಲೆಯಲ್ಲಿ ಕಳೆದ 7 ದಿನಗಳಲ್ಲಿ 19,935 ಟೆಸ್ಟಿಂಗ್ ಗುರಿಯನ್ನು ಹೊಂದಲಾಗಿದೆ. ಆದರೆ ಈ ಪೈಕಿ 8383 ಮಂದಿಗೆ ಟೆಸ್ಟಿಂಗ್ ಆಗಿದೆ. ಇದರಿಂದ ಟೆಸ್ಟಿಂಗ್ ನಲ್ಲಿ ಕೇವಲ 42.05ರಷ್ಟು ಮಾತ್ರ ಗುರಿ ತಲುಪಲಾಗಿದೆ. ಆದಷ್ಟು ಬೇಗ ಅಧಿಕಾರಿಗಳು ಕ್ರಮವಹಿಸಿ ಟೆಸ್ಟಿಂಗ್ ಹೆಚ್ಚಿಸಬೇಕಾಗಿದೆ.
ವಿಮಾನ ನಿಲ್ದಾಣದಲ್ಲಿ ಹೈ ರಿಸ್ಕ್ ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆಗೆ ಒಳಗಾದ ವ್ಯಕ್ತಿಗೆ ಪಾಸಿಟಿವ್ ವರದಿ ಬಂದಲ್ಲಿ ಬೌರಿಂಗ್ ಹಾಸ್ಪಿಟಲ್‌ನಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸಲು ವ್ಯವಸ್ಥೆ ಮಾಡಲಾಗಿದೆ ಹಾಗೂ ಜಿಲ್ಲೆಯಾದ್ಯಂತ ಟೆಸ್ಟಿಂಗ್ ಹಾಗೂ ಲಸಿಕೆ ವಿತರಣೆ ಹೆಚ್ಚಿಸಲು ಕ್ರಮವಹಿಸಲಾಗಿದೆ.
ಕೆ. ಶ್ರೀನಿವಾಸ್, ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ ಶೇಂ.85ರಷ್ಟು ಪಾಸಿಟಿವಿಟಿ ಪ್ರಮಾಣವಿದೆ. ಎಲ್ಲಾ ತಾಲೂಕುಗಳಲ್ಲಿ ಟೆಸ್ಟಿಂಗ್ ಹಾಗೂ ಮಕ್ಕಳ ಲಸಿಕಾಕರಣಕ್ಕೂ ಹೆಚ್ಚಿನ ಒತ್ತು ನೀಡಲಾಗಿದೆ.
ಡಾ.ತಿಪ್ಪೇಸ್ವಾಮಿ, ಡಿಎಚ್‌ಒ
Read more
[wpas_products keywords=”deal of the day sale today offer all”]