Karnataka news paper

ಲಸಿಕೆಯ ಶಕ್ತಿಯನ್ನು ಕುಗ್ಗಿಸಲಿದೆ ಓಮಿಕ್ರಾನ್, ಸೋಂಕು ಹರಡುವುದೂ ವೇಗ: WHO


ಹೈಲೈಟ್ಸ್‌:

  • ಓಮಿಕ್ರಾನ್ ತಳಿ ಕೋವಿಡ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ
  • ಓಮಿಕ್ರಾನ್ ಡೆಲ್ಟಾಗಿಂತಲೂ ವೇಗವಾಗಿ ಹರಡುವಷ್ಟು ಶಕ್ತಿಶಾಲಿ
  • ಓಮಿಕ್ರಾನ್ ಕೋವಿಡ್ ಲಸಿಕೆಯ ಸಾಮರ್ಥ್ಯ ಕಡಿಮೆ ಮಾಡುತ್ತದೆ
  • ಡೆಲ್ಟಾ ತಳಿಯ ಜಾಗವನ್ನು ಓಮಿಕ್ರಾನ್ ಆಕ್ರಮಿಸುವ ಸಾಧ್ಯತೆ ಇದೆ

ಜಿನೇವಾ: ಓಮಿಕ್ರಾನ್ ತಳಿಯ ಕೊರೊನಾ ವೈರಸ್ ಡೆಲ್ಟಾ ಪ್ರಭೇದದ ಸೋಂಕಿಗಿಂತಲೂ ಹೆಚ್ಚು ಪ್ರಸರಣ ಹೊಂದುತ್ತದೆ ಮತ್ತು ಅದು ಲಸಿಕೆಯ ದಕ್ಷತೆ ಕ್ಷೀಣಿಸುವಂತೆ ಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ತಿಳಿಸಿದೆ. ಆದರೆ ಈವರೆಗೆ ಲಭ್ಯವಾಗಿರುವ ದಾಖಲೆಗಳ ಪ್ರಕಾರ ಓಮಿಕ್ರಾನ್ ರೋಗ ಲಕ್ಷಣಗಳ ತೀವ್ರತೆ ಬಹಳ ಕಡಿಮೆ ಇದೆ ಎಂದು ಹೇಳಿದೆ.

ಭಾರತದಲ್ಲಿ ಈ ವರ್ಷದ ಆರಂಭದಲ್ಲಿ ಮೊದಲು ಪತ್ತೆಯಾಗಿದ್ದ ಡೆಲ್ಟಾ ತಳಿ ಕೋವಿಡ್ 19, ಜಾಗತಿಕ ಮಟ್ಟದಲ್ಲಿ ಭಾರಿ ಅನಾಹುತಕ್ಕೆ ಕಾರಣವಾಗಿತ್ತು. ಇದು ವ್ಯಾಪಕವಾಗಿ ಸೋಂಕು ಹರಡಿಸಿದ್ದಲ್ಲದೆ, ರೋಗ ಲಕ್ಷಣಗಳು ತೀವ್ರಗೊಂಡಿದ್ದವು. ಅಲ್ಲದೆ ಸಾವಿನ ಸಂಖ್ಯೆಯ ಹೆಚ್ಚಳಕ್ಕೂ ಕಾರಣವಾಗಿತ್ತು. ಈಗ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಓಮಿಕ್ರಾನ್, ವಿವಿಧ ದೇಶಗಳಲ್ಲಿ ಕಾಣಿಸಿಕೊಂಡಿದೆ. ಇದರಿಂದ ಈವರೆಗೆ ಯಾರೂ ಮೃತಪಟ್ಟಿಲ್ಲ. ಹಾಗೆಯೇ ಕಾಯಿಲೆ ತೀವ್ರತೆ ಗಂಭೀರ ಸ್ವರೂಪಕ್ಕೆ ಹೋಗಿಲ್ಲ. ಹಾಗಿದ್ದರೂ ಓಮಿಕ್ರಾನ್ ಸುಮಾರು 30 ಬಗೆಯ ರೂಪಾಂತರಗಳನ್ನು ಹೊಂದುವುದು ದೃಢಪಟ್ಟಿದೆ. ಜತೆಗೆ ಡೆಲ್ಟಾಗಿಂತಲೂ ಹೆಚ್ಚು ವೇಗವಾಗಿ ಹರಡುತ್ತದೆ ಎನ್ನಲಾಗಿದೆ.
ಕೋವಿಶೀಲ್ಡ್‌ ಬೂಸ್ಟರ್‌ ಡೋಸ್‌ ಸದ್ಯಕ್ಕೆ ಬೇಡ – ಕೇಂದ್ರ ಸ್ಪಷ್ಟನೆ; ಸೀರಂ ಪ್ರಸ್ತಾವನೆ ತಿರಸ್ಕೃತ
ಡಿಸೆಂಬರ್ 9ರ ವೇಳೆಗೆ ಓಮಿಕ್ರಾನ್ 63 ದೇಶಗಳಿಗೆ ವ್ಯಾಪಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಇದು ಬಹಳ ವೇಗವಾಗಿ ಪ್ರಸರಣ ಹೊಂದುತ್ತಿರುವುದು ಪತ್ತೆಯಾಗಿದೆ. ಇಲ್ಲಿ ಡೆಲ್ಟಾ ಹೆಚ್ಚು ಹರಡಿರಲಿಲ್ಲ. ಬ್ರಿಟನ್‌ನಲ್ಲಿ ಡೆಲ್ಟಾ ತಳಿ ವ್ಯಾಪಕವಾಗಿ ಸಮಸ್ಯೆ ಸೃಷ್ಟಿಸಿತ್ತು.

ಓಮಿಕ್ರಾನ್ ಕುರಿತು ಇನ್ನೂ ಅಧ್ಯಯನಗಳು ನಡೆಯುತ್ತಿದ್ದು, ಸದ್ಯಕ್ಕೆ ಸಾಕಷ್ಟು ದಾಖಲೆ ಹಾಗೂ ಪುರಾವೆಗಳ ಕೊರತೆ ಇದೆ. ಹೀಗಾಗಿ ಓಮಿಕ್ರಾನ್ ಪ್ರಸರಣ ಪ್ರಮಾಣವನ್ನು ಅಂದಾಜಿಸಲು ಸಾಧ್ಯವಾಗಿಲ್ಲ. ಅಲ್ಲದೆ, ಪ್ರತಿರಕ್ಷಣಾ ಸಾಮರ್ಥ್ಯಕ್ಕೆ ಅದು ಹೆಚ್ಚು ಅಪಾಯಕಾರಿಯಾಗಿದೆಯೇ, ಅತ್ಯಧಿಕ ಪ್ರಸರಣಕಾರಿಯೇ ಅಥವಾ ಎರಡರದ್ದೂ ಸಮ್ಮಿಶ್ರಣವೇ ಎನ್ನುವುದು ಗೊತ್ತಾಗಿಲ್ಲ.
ಕೊರೊನಾ ರೂಪಾಂತರಿ ಓಮಿಕ್ರಾನ್ ವೈರಾಣು ಅಪಾಯಕಾರಿಯಲ್ಲ: ಲಂಡನ್ ತಜ್ಞರ ಅಭಯ
ಆದರೆ ಓಮಿಕ್ರಾನ್ ಕುರಿತಾದ ಆರಂಭಿಕ ಅಧ್ಯಯನದಲ್ಲಿ ಅದು ಸೋಂಕು ಮತ್ತು ಪ್ರಸರಣದ ವಿರುದ್ಧದ ಲಸಿಕೆಯ ದಕ್ಷತೆಯನ್ನು ತಗ್ಗಿಸುವುದು ಕಂಡುಬಂದಿದೆ ಎಂದು WHO ಭಾನುವಾರ ತಿಳಿಸಿದೆ. ಪ್ರಸ್ತುತ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿದಾಗ, ಎಲ್ಲೆಲ್ಲಿ ಪ್ರಸರಣ ನಡೆಯುತ್ತಿದೆಯೋ ಅಲ್ಲಿ ಡೆಲ್ಟಾ ತಳಿಯ ಜಾಗವನ್ನು ಓಮಿಕ್ರಾನ್ ತುಂಬುವ ಸಾಧ್ಯತೆ ಇದೆ ಎಂದು ಅದು ಹೇಳಿದೆ.

ಓಮಿಕ್ರಾನ್ ಸೋಂಕು ಈವರೆಗೂ ಲಘು ಕಾಯಿಲೆ ಅಥವಾ ಲಕ್ಷಣ ರಹಿತ ಪ್ರಕರಣಗಳಿಗೆ ಕಾರಣವಾಗಿವೆ. ಹಾಗಿದ್ದರೂ ಓಮಿಕ್ರಾನ್‌ನ ಪರಿಣಾಮಗಳು, ಅದರ ತೀವ್ರತೆಯನ್ನು ಅಂದಾಜಿಸಲು ಸಾಲುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಭಾರತದಲ್ಲಿ ವೇಗವಾಗಿ ಹರಡಲಿದೆ
ಓಮಿಕ್ರಾನ್ ತಳಿಯ ವೈರಸ್ ಭಾರತದಲ್ಲಿ ಬಹಳ ವೇಗವಾಗಿ ಹರಡಲಿದೆ ಎಂದು ದಕ್ಷಿಣ ಆಫ್ರಿಕಾದ ಸಾಂಕ್ರಾಮಿಕ ರೋಗ ವಿಶ್ಲೇಷಣೆ ಡಿಎಸ್‌ಐ-ಎನ್‌ಎಸ್‌ಎಫ್ ಕೇಂದ್ರದ ನಿರ್ದೇಶಕಿ ಜೂಲಿಯಟ್ ಪುಲಿಯನ್ ಹೇಳಿದ್ದಾರೆ. ಹೀಗಾಗಿ ಭಾರತವು ಆಸ್ಪತ್ರೆಗಳ ಸಿದ್ಧತೆಗೆ ಈಗಲೇ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅಗತ್ಯ ಎಂದು ಸಲಹೆ ನೀಡಿದ್ದಾರೆ.



Read more