Karnataka news paper

ಬನಶಂಕರಿ ದೇವಿ ಜಾತ್ರೆ ರದ್ದು, ಕೋಟ್ಯಂತರ ವ್ಯಾಪಾರಕ್ಕೆ ಗುದ್ದು; ರಂಗಭೂಮಿಗೆ ಭಾರಿ ಹೊಡೆತ!


ಹೈಲೈಟ್ಸ್‌:

  • ಬಾದಾಮಿಯ ಬನಶಂಕರಿ ಜಾತ್ರೆ ರದ್ದಾಗಿದ್ದು, ಕೋಟ್ಯಂತರ ರೂ. ವಹಿವಾಟು ಖೋತಾ ಆಗಿದೆ
  • ಜ.17ರಂದು ರಥೋತ್ಸವದೊಂದಿಗೆ ಆರಂಭವಾಗುವ ಜಾತ್ರೆ ಫೆ.17ರವರೆಗೆ ನಡೆಯುತ್ತದೆ
  • ಜಾತ್ರೆಯಲ್ಲಿ 10ಕ್ಕೂ ಹೆಚ್ಚು ನಾಟಕ ಕಂಪನಿಗಳು ಪ್ರದರ್ಶನ ನಡೆಸುತ್ತವೆ

ರವಿರಾಜ್‌ ಆರ್‌.ಗಲಗಲಿ ಬಾಗಲಕೋಟೆ
ಬಾಗಲಕೋಟೆ: ತಿಂಗಳಿಡಿ ವ್ಯಾಪಾರಸ್ಥರು, ಕಲಾವಿದರಿಗೆ ವರ್ಷದ ಆದಾಯ ನೀಡುತ್ತಿದ್ದ ಬಾದಾಮಿಯ ಬನಶಂಕರಿ ಜಾತ್ರೆ ರದ್ದಾಗಿದ್ದು, ಕೋಟ್ಯಂತರ ರೂ. ವಹಿವಾಟು ಖೋತಾ ಆಗಿದೆ.

ಒಂದು ತಿಂಗಳು ಪೂರ್ತಿ ಆಯೋಜನೆಯಾಗುವ ಜಾತ್ರೆ ಎಂಬ ಖ್ಯಾತಿ ಬಾದಾಮಿಯ ಬನಶಂಕರಿ ಜಾತ್ರೆಗಿದೆ. ಜ.17 ರಂದು ರಥೋತ್ಸವದೊಂದಿಗೆ ಆರಂಭವಾಗುವ ಜಾತ್ರೆ ಫೆ.17ರವರೆಗೆ ನಡೆಯುತ್ತದೆ. ಆದರೆ ಕೋವಿಡ್‌ ಭೀತಿಯಿಂದ ಸರಕಾರ ನಿಷೇಧ ಹೇರುವುದರೊಂದಿಗೆ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ.

‘ಅಪ್ಪ ಅಮ್ಮ ಬಿಟ್ಟು ಎಲ್ಲವೂ ಇಲ್ಲಿ ಸಿಗುತ್ತದೆ’ ಎನ್ನುವುದು ಬನಶಂಕರಿ ಜಾತ್ರೆ ಬಗ್ಗೆ ಇರುವ ಹೇಳಿಕೆ. 10ಕ್ಕೂ ಹೆಚ್ಚು ನಾಟಕ ಕಂಪನಿಗಳು, ಮಿಠಾಯಿ, ಆಟಿಗೆ ಸಾಮಗ್ರಿ, ಕೃಷಿ ಉಪಕರಣಗಳ ನೂರಾರು ಮಳಿಗೆಗಳು ಇಲ್ಲಿ ವಹಿವಾಟು ನಡೆಸುತ್ತವೆ. ರಾಜ್ಯದ ರಂಗಭೂಮಿ ಕ್ಷೇತ್ರದಲ್ಲಿ ಹೊಸ ನಾಟಕ ಯಶಸ್ಸು ಕಾಣಬೇಕಾದರೆ ಮೊದಲು ಬಾದಾಮಿ ಜಾತ್ರೆಯಲ್ಲಿ ಜನರಿಂದ ಭೇಷ್‌ ಎನಿಸಿಕೊಳ್ಳಬೇಕು ಎಂಬ ಮಾತಿದೆ. ಬನಶಂಕರಿ ದೇವಸ್ಥಾನದ ಎದುರಿನ ಮುಖ್ಯ ರಸ್ತೆಯಲ್ಲಿ ಪ್ರಮುಖ ಸ್ಥಳದಲ್ಲಿ ನಾಟಕದ ಟೆಂಟ್‌ ಹಾಕಲು ಮಾಲೀಕರು ಹರಸಾಹಸಪಡುತ್ತಾರೆ. ಒಮ್ಮೆ ನಾಟಕವೊಂದು ಯಶಸ್ವಿಯಾದರೆ ಅಂದಾಜು 30 ಲಕ್ಷ ರೂ.ವರೆಗೆ ಲಾಭ ಪಕ್ಕಾ ಎನ್ನುವುದು ಇಲ್ಲಿನ ವಹಿವಾಟಿನ ಉದಾಹರಣೆ. ಹೀಗಾಗಿ ಜಾತ್ರೆಯಲ್ಲಿ 10ಕ್ಕೂ ಹೆಚ್ಚು ನಾಟಕ ಕಂಪನಿಗಳು ಪ್ರದರ್ಶನ ನಡೆಸುತ್ತವೆ.
ಉತ್ಸವ, ವ್ಯವಹಾರಕ್ಕೆ ಕರ್ಫ್ಯೂ ಬರೆ; ಹಿಡಿತಕ್ಕೆ ಬರುತ್ತಿದ್ದ ಆರ್ಥಿಕತೆ ಮತ್ತೆ ಹಳಿ ತಪ್ಪುವ ಭೀತಿ!
ಬೀದಿಗೆ ಬಿದ್ದ ವ್ಯಾಪಾರಸ್ಥರು
ಕಳೆದ ವರ್ಷ ಕೋವಿಡ್‌ ಹೊಡೆತದಿಂದ ಜಾತ್ರೆ ರದ್ದಾಗಿತ್ತು. ಈ ವರ್ಷವೂ ಇದೇ ಸ್ಥಿತಿ. ಕಂಪನಿ ಮಾಲೀಕರು, ಕಲಾವಿದರ ವರ್ಷದ ಆದಾಯಕ್ಕೆ ಕತ್ತರಿ ಬಿದ್ದಿದೆ. ಜತೆಗೆ ಕೃಷಿ ಉಪಕರಣ ಮಾರಾಟ ಮಳಿಗೆಗಳಲ್ಲಿ ಭರ್ತಿ ವ್ಯಾಪಾರ ನಡೆಯುತ್ತದೆ. ಬಹುತೇಕ ರೈತಾಪಿ ವರ್ಗದವರು ಜಾತ್ರೆಗೆ ಬರುವುದರಿಂದ ಕೃಷಿ ಉಪಕರಣಗಳ ಖರೀದಿ ಜೋರಾಗಿರುತ್ತದೆ. ಇವರೊಂದಿಗೆ ಮಿಠಾಯಿ, ಖಾರಾ, ಆಟಿಗೆ ಸಾಮಗ್ರಿ, ಬಳೆ ಮಾರಾಟಗಾರರು, ರೊಟ್ಟಿ ಊಟ ನೀಡುವ ಮಹಿಳೆಯರು, ಕುಂಕುಮ, ಅರಿಷಿಣ ಮಾರಾಟಗಾರರು ಜಾತ್ರೆಯನ್ನೇ ನಂಬಿಕೊಂಡು ಲಾಭದ ಮುಖ ನೋಡುತ್ತಾರೆ.

ಪ್ರವಾಸೋದ್ಯಮಕ್ಕೆ ಹೊಡೆತ
ಬನಶಂಕರಿ ಜಾತ್ರೆಯಿಂದಾಗಿ ಬಾದಾಮಿಯಲ್ಲಿನ ಹೋಟೆಲ್‌, ಲಾಡ್ಜ್‌, ರೆಸಾರ್ಟ್‌ಗಳು ಬುಕ್‌ ಆಗುತ್ತವೆ. ಪ್ರವಾಸಿಗರು ಪಟ್ಟದಕಲ್ಲು, ಐಹೊಳೆಗಳನ್ನೂ ವೀಕ್ಷಿಸುತ್ತಾರೆ. ಇಡೀ ಒಂದು ತಿಂಗಳಲ್ಲಿ ಅಂದಾಜು 8 ಕೋಟಿ ರೂ. ವಹಿವಾಟು ನಡೆಯುತ್ತದೆ. ಆದರೆ ಕೋವಿಡ್‌ನ ಭೀತಿ ಎಲ್ಲ ಆದಾಯಕ್ಕೂ ತಡೆಯೊಡ್ಡಿದೆ. ಜಾತ್ರೆಗಾಗಿ ಟೆಂಟ್‌ ಹಾಕುತ್ತಿದ್ದವರು ಟೆಂಟ್‌ ತೆಗೆದುಕೊಂಡು ವಾಪಸ್ಸಾಗಿದ್ದಾರೆ. ಲವಲವಿಕೆಯಿಂದ ಕಾಣಬೇಕಿದ್ದ ಜಾತ್ರೆ ಸ್ಥಳದಲ್ಲೀಗ ಎಲ್ಲವೂ ಖಾಲಿ ಖಾಲಿ. ಕೋವಿಡ್‌ ವೈರಸ್‌ ಜನರ ವರ್ಷದ ಸಂಭ್ರಮಕ್ಕೆ ಬ್ರೇಕ್‌ ಹಾಕಿದೆ.
ಶುಕ್ರವಾರ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಇಳಿಕೆ: ಶನಿವಾರ, ಭಾನುವಾರ ದೇಗುಲಗಳಲ್ಲಿ ಭಕ್ತರಿಗೆ ಪ್ರವೇಶ ನಿಷಿದ್ಧ
ಬನಶಂಕರಿ ಜಾತ್ರೆಯಲ್ಲಿ ನಾಟಕ ಹಿಟ್‌ ಆದರೆ ಅದು ಯಶಸ್ವಿ ಎಂಬ ಮಾತಿದೆ. ನಾವು ಇಲ್ಲಿನ ಜಾತ್ರೆ ಮುಗಿಸಿ ಇನ್ನುಳಿದ ಜಾತ್ರೆಗಳಿಗೆ ತೆರಳುತ್ತಿದ್ದೆವು. ಸತತ ಎರಡು ವರ್ಷಗಳಿಂದ ಜಾತ್ರೆ ನಡೆಯದ ಕಾರಣ ವರ್ಷದ ಆದಾಯಕ್ಕೆ ಹೊಡೆತ ಬಿದ್ದಿದೆ. ಮಾಲೀಕರು, ಕಲಾವಿದರ ಪಾಡು ಹೇಳುವಂತಿಲ್ಲ.
ರಾಜಣ್ಣ ಜೇವರ್ಗಿ, ಮಾಲೀಕ, ಜೇವರ್ಗಿ ನಾಟ್ಯ ಸಂಘ

ಜಾತ್ರೆ ರದ್ದಾಗಿದ್ದರಿಂದ ನಾಟಕ ಕಲಾವಿದರು, ಬೀದಿ ವ್ಯಾಪಾರಿಗಳ ಬದುಕು ದುರ್ಭರವಾಗಿದೆ. ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟ ಎದುರಿಸಿದವರಿಗೆ ಮತ್ತೆ ಹಾನಿ ನಿಶ್ಚಿತ. ಸರಕಾರ ಸೀಮಿತವಾಗಿ ಆಚರಣೆಗಾದರೂ ಅವಕಾಶ ಕೊಡಬೇಕು.
ಇಷ್ಟಲಿಂಗ ಸಿರ್ಸಿ, ಸಾಮಾಜಿಕ ಕಾರ್ಯಕರ್ತ



Read more

[wpas_products keywords=”deal of the day sale today offer all”]