ಕರಾವಳಿ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಶಿಕ್ಷಣದತ್ತ ದೊಡ್ಡ ಸಂಖ್ಯೆಯಲ್ಲಿ ಮುಖಮಾಡುತ್ತಿದ್ದಾರೆ. ಸಮುದಾಯದೊಳಗಿದ್ದ ಸಾಂಪ್ರದಾಯಿಕ ಮನಸ್ಥಿತಿ, ಸಾಮಾಜಿಕ ಸನ್ನಿವೇಶಗಳು ಒಂದು ಕಾಲದಲ್ಲಿ ಮುಸ್ಲಿಂ ಹೆಣ್ಣಿನ ಶಿಕ್ಷಣಕ್ಕೆ ಅಡೆತಡೆಯಾಗಿತ್ತು. ಈ ಬ್ಯಾರಿಕೇಡ್‌ಗಳನ್ನು ದಾಟಿ ಶಿಕ್ಷಣದತ್ತ ಮುಸ್ಲಿಂ ಹೆಣ್ಣುಮಕ್ಕಳು ದಾಪುಗಾಲು ಇಡುತ್ತಿದ್ದಾರೆ. ವೈದ್ಯಕೀಯ, ತಾಂತ್ರಿಕ, ಕಾನೂನು ಹೀಗೆ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದಾರೆ. ಸಂಖ್ಯೆಯಲ್ಲಿ ತೀರಾ ಕಡಿಮೆ ಎಂದಾದರೂ ಉದ್ಯೋಗ ಕ್ಷೇತ್ರದತ್ತಲೂ ಮುಸ್ಲಿಂ ಮಹಿಳೆಯರು ಹೆಜ್ಜೆ ಇಡುತ್ತಿದ್ದಾರೆ. ಇದು ಆಶಾದಾಯಕ ಬೆಳವಣಿಗೆ.
ಇಂತಹ ಸಂದರ್ಭದಲ್ಲಿ ಕರಾವಳಿ ಭಾಗದ ಕೆಲವು ವಿದ್ಯಾಸಂಸ್ಥೆಗಳಲ್ಲಿ ತಲೆಎತ್ತುತ್ತಿರುವ ಸ್ಕಾರ್ಫ್ ವಿವಾದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಅಡಕತ್ತರಿಯಲ್ಲಿ ಸಿಲುಕಿಸಿದರೆ ಹಿಜಾಬ್ ಅಥವಾ ಸ್ಕಾರ್ಫ್ ವಿವಾದ ಹಿಂದೂ ಹಾಗೂ ಮುಸ್ಲಿಂ ಧಾರ್ಮಿಕ ಅತಿರೇಕಿಗಳ ಪಾಲಿಗೊಂದು ಮತೀಯ ರಾಜಕೀಯದ ‘ಅಸ್ತ್ರ’ ವಾಗಿದೆ. ಈ ವಿವಾದ ಮುನ್ನಲೆಗೆ ಬಂದಷ್ಟು ಅವರಿಗದು ಲಾಭದಾಯಕವೂ ಕೂಡಾ!
ಸರಕಾರಿ ಕಾಲೇಜಲ್ಲಿ ಸ್ಕಾರ್ಫ್ ವರ್ಸಸ್ ಕೇಸರಿ ವಿವಾದ
ಕರಾವಳಿಯಲ್ಲಿ ತಲೆಎತ್ತಿರುವ ಸ್ಕಾರ್ಫ್ ವಿವಾದಕ್ಕೆ ಹಲವು ಆಯಾಮಗಳಿವೆ. ಈ ಒಳಸುಳಿಗಳನ್ನು ಅರ್ಥೈಸಿಕೊಳ್ಳುವುದು ಕೂಡಾ ಅತ್ಯಂತ ಅಗತ್ಯವಾಗಿದೆ. ಇಲ್ಲಿ ಹಲವು ಲಾಬಿಗಳು ಕೆಲಸ ಮಾಡುತ್ತವೆ. ಮುಸ್ಲಿಂ ಮಹಿಳೆಯರ ಬುರ್ಖಾ, ಸ್ಕಾರ್ಫ್ ಬಗ್ಗೆ ಪ್ರಶ್ನೆ ಮಾಡುವ ಸಂಘ ಪ್ರಣೀತ ವಾದ ಒಂದು ಕಡೆಯಾದರೆ ಬುರ್ಖಾ ಹಾಗೂ ಸ್ಕಾರ್ಫ್ ನ್ನು ಸಮರ್ಥನೆ ಮಾಡುವ ಮುಸ್ಲಿಂ ಮೂಲಭೂತವಾದಿಗಳ ವಾದ ಮತ್ತೊಂದು ಕಡೆ. ಇವೆರಡು ತಮ್ಮದೇ ಆದ ಹಿತಾಸಕ್ತಿಗಳನ್ನು ಹೊಂದಿದೆ. ಈ ಕಾರಣಕ್ಕಾಗಿ ಎರಡೂ ವಾದವನ್ನು ಒಪ್ಪಲು ಸಾಧ್ಯವಿಲ್ಲ.
ಬುರ್ಖಾ ಧರಿಸುವುದು ಬಿಡುವುದು ಮಹಿಳೆಯ ವೈಯಕ್ತಿಕ ಹಕ್ಕಾದರೂ, ಅದು ಮುಸ್ಲಿಂ ಸಮಾಜದ ಹೆಣ್ಣಿನ ಮೇಲೆ ಹೇರಲ್ಪಟ್ಟ ವಸ್ತ್ರ ಎಂಬುವುದಲ್ಲಿ ಅನುಮಾನವಿಲ್ಲ. ದೇಹದ ರಕ್ಷಣೆಯ ಹೆಸರಿನಲ್ಲಿ ಇದನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಕಡ್ಡಾಯಗೊಳಿಸಲಾಗಿದೆ ಎಂಬುವುದು ವಾಸ್ತವ. ಇದನ್ನು ಹೆಣ್ಣಿನ ‘ಆಯ್ಕೆಯ’ ಹೆಸರಿನಲ್ಲಿ ಪುರುಷ ಸಮಾಜ ಸಮರ್ಥನೆ ಮಾಡುತ್ತಿರುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಹೀಗೆ ಧರ್ಮ,ಸಂಸ್ಕೃತಿಯ ಹೆಸರಿನಲ್ಲಿ ಹಲವು ಹೇರಿಕೆಗಳು ಹೆಣ್ಣಿನ ಮೇಲೆ ಎಲ್ಲ ಧರ್ಮದ ಪುರುಷರು ಹೇರಿದ್ದಾರೆ. ಹಾಗೂ ಅದಕ್ಕೆ ಧರ್ಮದ ಕವಚವನ್ನು ನೀಡಿದ್ದಾರೆ.
ಕ್ಯಾಂಪಸ್ ಗಳ ಹೊರಗೆ ಯಾವುದೇ ರೀತಿ ವಸ್ತ್ರವನ್ನು ಧರಿಸಲು ಪ್ರತಿಯೊಬ್ಬರಿಗೆ ಅವಕಾಶ ಇದೆ. ಅದು ಅವರು ಹಕ್ಕು ಕೂಡಾ. ಆದರೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆ ಸಮಾನತೆಯನ್ನು ತರಬೇಕು ಎಂಬ ನಿಟ್ಟಿನಲ್ಲಿ ಸವವಸ್ತ್ರ ಪದ್ದತಿಯನ್ನು ಜಾರಿಗೊಳಿಸಲಾಗಿದೆ. (ಇತ್ತೀಚೆಗೆ ಕೇರಳದಲ್ಲಿ gender equality ಹೊಂದಿರುವ ಸಮವಸ್ತ್ರವನ್ನು ಪರಿಚಯಿಸಲಾಗಿದೆ) ಇದನ್ನು ಪಾಲನೆ ಮಾಡುವುದು ವಿದ್ಯಾರ್ಥಿಗಳ ಕರ್ತವ್ಯವಾಗಿದೆ. ಇದನ್ನು ಮೀರಿ ತರಗತಿಯಲ್ಲೂ ಧಾರ್ಮಿಕ ಐಡೆಂಟಿಟಿ ಪಾಲನೆಗೆ ಅವಕಾಶ ನೀಡಬೇಕು ಎಂದು ಹಠ ಸಾಧಿಸುವುದು ಸರಿಯಲ್ಲ. ಹೀಗಿದ್ದರೂ ಇದಕ್ಕೆ ಅವಕಾಶ ನೀಡಬೇಕು ಎಂಬ ಬೇಡಿಕೆಯನ್ನು ವಿದ್ಯಾರ್ಥಿನಿಯರು ಇಟ್ಟಲ್ಲಿ ಅದು ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರು ಚರ್ಚಿಸಿ ಬಗೆಹರಿಸಬೇಕಾದ ಸಂಗತಿಯಾಗಿದೆ.
ಆದರೆ ಕರಾವಳಿಯಲ್ಲಿ ಹೀಗಾಗುತ್ತಿಲ್ಲ, ಇಂತಹ ಸಮಸ್ಯೆಗಳು ಬಂದ ಸಂದರ್ಭದಲ್ಲಿ ಪೋಷಕರ ಬದಲಾಗಿ ಹೊರಗಿನ ಮತೀಯ ಶಕ್ತಿಗಳು ಕ್ಯಾಂಪಸ್ ಗಳಲ್ಲಿ ಕೈಯಾಡಿಸುತ್ತವೆ. ಕ್ಯಾಂಪಸ್ ಹೊರಗೂ, ಒಳಗೂ ಕಣ್ಣಿಟ್ಟಿರುತ್ತವೆ. ಯಾರು ಯಾರ ಜೊತೆ ಸುತ್ತಾಟ ನಡೆಸಬೇಕು? ಯಾವ ರೀತಿಯ ವಸ್ತ್ರಗಳನ್ನು ಧರಿಸಬೇಕು ಎಂದು ವಿದ್ಯಾರ್ಥಿಗಳ ಪೋಷಕರಿಗಿಂತ ಮತೀಯ ಸಂಘಟನೆಗಳ ಕಾರ್ಯಕರ್ತರಿಗೆ ಹೆಚ್ಚಿನ ಆಸಕ್ತಿ! ಸ್ಕಾರ್ಫ್, ಕೇಸರಿ ಶಾಲು ವಿವಾದ ವಿಚಾರದಲ್ಲೂ ನಡೆಯುತ್ತಿರುವುದು ಕೂಡಾ ಇದೇ.
ಸ್ಕಾರ್ಫ್ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವ ಮೂಲಕ ವಿದ್ಯಾರ್ಥಿಗಳ ನಡುವೆ ದ್ವೇಷ ಬಿತ್ತಿ ಕ್ಯಾಂಪಸ್‌ಗಳನ್ನು ವಿಭಜನೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ನಡುವೆ ಇದ್ದ ಈ ಧರ್ಮದ ಕಿತ್ತಾಟ ಇದೀಗ ವಿದ್ಯಾರ್ಥಿನಿಯರ ನಡುವೆಯೂ ನುಸುಳುವಂತೆ ಮಾಡುವಲ್ಲಿಯೂ ಯಶಸ್ಸು ಕಂಡಿದ್ದಾರೆ. ಸ್ಕಾರ್ಫ್ ಗೆ ಪರ್ಯಾಯವಾಗಿ ಕೇಸರಿ ಶಾಲು ಧರಿಸುತ್ತೇವೆ ಎಂಬ ನಿಲುವಿನಲ್ಲಿ ದ್ವೇಷ ಎದ್ದು ಕಾಣುತ್ತಿದೆಯೇ ಹೊರತು ಬೇರೇನಿಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳು, ದುಬಾರಿ ಫೀಸ್‌ಗಳು, ಗುಣಮಟ್ಟದ ಶಿಕ್ಷಣಕ್ಕೆ ತಲೆಕೆಡಿಸಿಕೊಳ್ಳುವ ಬದಲಾಗಿ ಧಾರ್ಮಿಕ ಸಂಕೇತಗಳು ಚರ್ಚೆಗೆ ಬಂದು ಕ್ಯಾಂಪಸ್‌ಗಳ ವಾತಾವರಣ ಕೆಡುತ್ತಿವೆ.
ಈಗಾಗಲೇ ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತ್ಯೇಕ ಶಾಲೆಗಳು, ಕಾಲೇಜುಗಳು ತಲೆಎತ್ತುತ್ತಿವೆ. ಮುಸ್ಲಿಂ ವಿದ್ಯಾರ್ಥಿನಿಯರಿಗೂ ಪ್ರತ್ಯೇಕ ಶಿಕ್ಷಣ ಸಂಸ್ಥೆಗಳು ಅಲ್ಲಲ್ಲಿ ಶುರುವಾಗುತ್ತಿವೆ. ಸ್ಕಾರ್ಫ್ ವಿವಾದ ತೀವ್ರಗೊಂಡಷ್ಟು ಮುಸ್ಲಿಂ ವಿದ್ಯಾರ್ಥಿನಿಯರನ್ನು ಈ ಶಿಕ್ಷಣ ಸಂಸ್ಥೆಗಳಿಗೆ ಸೇರ್ಪಡೆಗೊಳಿಸಲು ಪೋಷಕರು ಮುಂದಾಗುತ್ತಾರೆ. ಬಹುತ್ವ ಸಮಾಜದಲ್ಲಿ ಇದು ಸೃಷ್ಟಿಸಲಿರುವ ಸಾಮಾಜಿಕ ಪರಿಣಾಮ ದುಬಾರಿಯಾಗಲಿದೆ.
ಮತ್ತೊಂದು ಕಡೆಯಲ್ಲಿ ಈ ವಿವಾದವನ್ನು ಪದೇ ಪದೇ ಮುನ್ನಲೆಗೆ ತಂದು ಕ್ಯಾಂಪಸ್ ಗಳಲ್ಲಿ ಮತೀಯ ಧ್ರುವೀಕರಣ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಎರಡೂ ಧರ್ಮದ ಮತೀಯ ಶಕ್ತಿಗಳ ಪಾತ್ರ ಇದರಲ್ಲಿದೆ. ಈ ಬೆಳವಣಿಗೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲ, ಸಮಾಜದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಇದರ ಹಿಂದೆ ಚುನಾವಣಾ ರಾಜಕೀಯದ ಹುನ್ನಾರವೂ ಇದೆ ಎಂಬುದನ್ನು ಮನಗಾನಬೇಕಿದೆ.
ಈ ನಿಟ್ಟಿನಲ್ಲಿ ಶಾಲೆಯ ಆಡಳಿತ ಮಂಡಳಿ, ಪೋಷಕರು ಹಾಗೂ ಪ್ರಜ್ಞಾವಂತ ನಾಗರಿಕರು ಇದಕ್ಕೆ ಅವಕಾಶ ನೀಡಬಾರದು. ಸಮಸ್ಯೆಗಳಿದ್ದಲ್ಲಿ ಅದನ್ನು ತಾವೇ ಕುಳಿತುಕೊಂಡು ಬಗೆಹರಿಸಬೇಕು. ದ್ವೇಷದಿಂದ ಯಾವ ಬದಲಾವಣೆಯೂ ಅಸಾಧ್ಯ. ಇದರಿಂದ ಸಮಸ್ಯೆ ಬಿಗಡಾಯಿಸುವುದಲ್ಲದೆ ಪರಿಹಾರ ಖಂಡಿತ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಹಠ ಸಾಧಿಸದೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಕೊನೆಯದಾಗಿ ಸ್ಕಾರ್ಫ್ ವಿಚಾರವಾಗಿ ಹಿಂದೂ ಮುಸ್ಲಿಂ ಮತೀಯ ಅತಿರೇಕಿಗಳ ಶಕ್ತಿ ಪ್ರದರ್ಶನದಿಂದಾಗಿ ಶಿಕ್ಷಣದ ಹಾದಿಯಲ್ಲಿ ಸಾಗುತ್ತಿರುವ ಮುಸ್ಲಿಂ ಹೆಣ್ಣು ಮಕ್ಕಳ ಭವಿಷ್ಯ ಅಡಕತ್ತರಿಯಲ್ಲಿ ಸಿಗದಂತಾಗಲಿ.
Read more
[wpas_products keywords=”deal of the day sale today offer all”]