Karnataka news paper

ಶೀಘ್ರವೇ ಹಾರಾಟ ಪರವಾನಗಿ ಪಡೆಯಲಿದೆ ಭಾರತದ ನೂತನ ವಿಮಾನಯಾನ ಸಂಸ್ಥೆ ಆಕಾಶ ಏರ್‌ಲೈನ್


ಹೈಲೈಟ್ಸ್‌:

  • ಏಪ್ರಿಲ್ ಆರಂಭದಲ್ಲಿ ಆಕಾಶ ಏರ್‌ಲೈನ್‌ ಎಒಪಿ ಪಡೆದುಕೊಳ್ಳುವ ನಿರೀಕ್ಷೆ
  • 72 ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳಿಗೆ ಆರ್ಡರ್ ನೀಡಿರುವ ಸಂಸ್ಥೆ
  • ಹೊಸ ಮಾಲೀಕರನ್ನು ಪಡೆದರೂ ಎಒಪಿಗೆ ಅರ್ಜಿ ಸಲ್ಲಿಸದ ಜೆಟ್ ಏರ್‌ವೇಸ್

ಹೊಸದಿಲ್ಲಿ: ಕೋಟ್ಯಧಿಪತಿ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಅವರ ಭಾರತದ ನೂತನ ವಿಮಾನಯಾನ ಸಂಸ್ಥೆ ಆಕಾಶ ಏರ್‌ಲೈನ್ಸ್, ಏಪ್ರಿಲ್ ಆರಂಭದಲ್ಲಿ ತನ್ನ ವಾಯು ಕಾರ್ಯಾಚರಣೆ ಪರವಾನಗಿ (AOP) ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ ವಿಪರೀತ ನಷ್ಟದಿಂದ ತನ್ನ ಸೇವೆಯನ್ನು ಸ್ಥಗಿತಗೊಳಿಸಿರುವ ಜೆಟ್ ಏರ್‌ವೇಸ್ ಪ್ರಸ್ತುತ ಏರ್ ಆಪರೇಟರ್ಸ್ ಪರ್ಮಿಟ್ ಪಡೆದುಕೊಳ್ಳುವ ಸಾಧ್ಯತೆ ಕಡಿಮೆ. ಮುಂದಿನ ಆರು ತಿಂಗಳವರೆಗಂತೂ ಅದಕ್ಕೆ ಎಒಪಿ ಸಿಗಲಾರದು ಎಂದು ಅಧಿಕಾರಿ ಹೇಳಿದ್ದಾರೆ. 2019ರಿಂದ ದಿವಾಳಿಯಾಗಿರುವ ಜೆಟ್ ಏರ್‌ವೇಸ್ ಕಳೆದ ವರ್ಷ ಹೊಸ ಮಾಲೀಕರಾದ ಜಲನ್- ಕಲ್ರಾಕ್ ಕನ್ಸೋರ್ಟಿಯಂನಿಂದ ಮರುಜೀವ ಪಡೆದುಕೊಂಡಿದೆ. ಆದರೆ ಅದು ಮತ್ತೆ ಕಾರ್ಯಾಚರಣೆ ಆರಂಭಿಸಲು ಕಾನೂನಾತ್ಮಕ ಪರವಾನಗಿ ಪಡೆದುಕೊಂಡಿಲ್ಲ.
72 ವಿಮಾನಗಳ ಖರೀದಿಗೆ ಆರ್ಡರ್‌ ನೀಡಿದ ‘ಆಕಾಶ ಏರ್‌’, ಬೋಯಿಂಗ್‌ಗೆ 66,000 ಕೋಟಿ ರೂ. ಡೀಲ್‌!
ಎಸ್‌ಎನ್‌ವಿ ಏವಿಯೇಷನ್ ಎಂಬ ಹೆಸರಿನಲ್ಲಿ ನೋಂದಣಿಯಾಗಿರುವ ಆಕಾಶ, ಅಕ್ಟೊಬರ್ 11ರಂದು ತನ್ನ ಪ್ರಾರಂಭಿಕ ನಿಯಂತ್ರಣ ಪರವಾನಗಿ, ನಿರಾಕ್ಷೇಪಣ ಪತ್ರವನ್ನು ಪಡೆದುಕೊಂಡಿತ್ತು. ಬಳಿಕ ಎಒಪಿ ಅನುಮತಿಗಾಗಿ ಅರ್ಜಿ ಸಲ್ಲಿಸಿತ್ತು.

ಜೆಟ್ ಏರ್‌ವೇಸ್‌ನ ಮಾಜಿ ಚೀಫ್ ಎಕ್ಸಿಕ್ಯೂಟಿವ್ ವಿನಯ್ ದುಬೆ ಸ್ಥಾಪಿಸಿರುವ ಏರ್‌ಲೈನ್, ಈಗಾಗಲೇ 72 ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳಿಗೆ ಬೇಡಿಕೆ ಇರಿಸಿದೆ. ಜತೆಗೆ ವಿಮಾನ ಚಾಲನೆಗೆ ಸಿಎಫ್‌ಎಂ ಎಂಜಿನ್‌ಗಳಿಗೆ ಆರ್ಡರ್ ಮಾಡಿದೆ. ಇಂಡಿಗೋ ಏರ್‌ಲೈನ್ಸ್‌ನ ಮಾಜಿ ಅಧ್ಯಕ್ಷ ಆದಿತ್ಯ ಘೋಷ್ ಅವರು ಆಕಾಶದ ಸಹ ಸಂಸ್ಥಾಪಕರಾಗಿದ್ದಾರೆ.

2019ರ ಏಪ್ರಿಲ್ ತಿಂಗಳಲ್ಲಿ ಜೆಟ್ ಏರ್‌ವೇಸ್ ತನ್ನ ಹಾರಾಟ ಸ್ಥಗಿತಗೊಳಿಸಿದ ಬಳಿಕ ಅದರ ಎಒಪಿ ಅಥವಾ ಹಾರಾಟ ಪರವಾನಗಿಯನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಅದು ಸಕ್ರಿಯಗೊಳ್ಳಲು ವಿಮಾನಯಾನ ಸಂಸ್ಥೆಯ ಹೊಸ ಮಾಲೀಕರು ಮರು ಅರ್ಜಿ ಸಲ್ಲಿಸಬೇಕಾಗಿದೆ. ಆದರೆ ಅವರಿನ್ನೂ ಅದಕ್ಕೆ ಅರ್ಜಿ ಸಲ್ಲಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ರಾಕೇಶ್‌ ಝುಂಝುನ್‌ವಾಲಾರ ‘ಆಕಾಶ ಏರ್‌’ಗೆ ಕೇಂದ್ರ ಒಪ್ಪಿಗೆ, 2022ರಲ್ಲಿ ಚಾಲನೆ
‘ತಮ್ಮ ವ್ಯವಹಾರ ಯೋಜನೆಗಳನ್ನು ಸಲ್ಲಿಸುವಂತೆ ನಾವು ಅವರಿಗೆ ಒಮ್ಮೆ ಕರೆ ಮಾಡಿದ್ದೆವು. ಅವರು ಸಭೆಗೆ ಬಂದಿರಲಿಲ್ಲ. ಅವರ ಯೋಜನೆಗಳು ಆಂತರಿಕ ಮಟ್ಟದಲ್ಲಿಯೇ ಉಳಿದುಕೊಂಡಿವೆ ಎಂದೆನಿಸುತ್ತದೆ’ ಎಂದು ಅಧಿಕಾರಿ ಹೇಳಿದ್ದಾರೆ.

ಆಕಾಶದ ಎಒಪಿ ಅರ್ಜಿಯು ಪ್ರಕ್ರಿಯೆ ಹಂತದಲ್ಲಿದೆ ಎಂದು ವಿಮಾನಯಾನ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೆಟ್ ಏರ್‌ವೇಸ್ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

ಆಕಾಶ ಏರ್‌ಲೈನ್ಸ್ ಸಂಸ್ಥೆಯು ಅಮೆರಿಕದ ದೈತ್ಯ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್‌ಗೆ 72 ವಿಮಾನಗಳ ಖರೀದಿಗೆ ಆರ್ಡರ್ ನೀಡಿದೆ. ಇದು ಸುಮಾರು 900 ಕೋಟಿ ಡಾಲರ್ (66,600 ಕೋಟಿ ರೂ) ಮೊತ್ತದ ಒಪ್ಪಂದವಾಗಿದೆ. ಎಸ್‌ಎನ್‌ವಿ ಏವಿಯೇಷನ್‌ ಎನ್ನುವುದು ಆಕಾಶ ಏರ್‌ನ ಮಾತೃ ಸಂಸ್ಥೆಯಾಗಿದ್ದು, ಮುಂದಿನ ವರ್ಷ ಹಾರಾಟ ನಡೆಸಲು ಉದ್ದೇಶಿಸಿರುವುದಾಗಿ ಇತ್ತೀಚೆಗೆ ಹೇಳಿತ್ತು. ಇದು ದೇಶದಲ್ಲೇ ಅತೀ ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ವಿಮಾನಯಾನ ಸೇವೆ ನೀಡಲು ಉದ್ದೇಶಿಸಿದೆ.
ರಾಕೇಶ್‌ ಝುಂಝುನ್‌ವಾಲಾ ಹೊಸ ವಿಮಾನ ಸಂಸ್ಥೆಗೆ ಕೈ ಜೋಡಿಸಿದ ಘಟಾನುಘಟಿಗಳು
ಬೋಯಿಂಗ್ ವಿಮಾನ ಖರೀದಿ
ಭಾರತದಲ್ಲಿ ಬೋಯಿಂಗ್‌ 737 ಮ್ಯಾಕ್ಸ್‌ ವಿಮಾನಗಳ ಹಾರಾಟಕ್ಕೆ ನಿಷೇಧವಿತ್ತು. ವಿಮಾನಯಾನ ಸುರಕ್ಷತಾ ನಿಯಂತ್ರಕರು ಆಗಸ್ಟ್‌ನಲ್ಲಿ ಈ ಬೃಹತ್‌ ವಿಮಾನದ ಹಾರಾಟಕ್ಕೆ ಮತ್ತೆ ಅವಕಾಶ ನೀಡಿದ್ದರು. ಈ ಮೂಲಕ ಎರಡೂವರೆ ವರ್ಷಗಳ ನಿಷೇಧ ಅಂತ್ಯವಾಗಿತ್ತು. 2019ರ ಮಾರ್ಚ್‌ನಲ್ಲಿ ವಿಶ್ವದೆಲ್ಲೆಡೆ ಬೋಯಿಂಗ್‌ 737 ಮ್ಯಾಕ್ಸ್‌ ವಿಮಾನಗಳು ಹಾರಾಟ ನಿಲ್ಲಿಸಿದ್ದವು. ಸತತ ಎರಡು ಭೀಕರ ಅಪಘಾತಗಳಲ್ಲಿ 346 ಜನರು ಸಾವಿಗೀಡಾದ ನಂತರ ಇಂಥಹದ್ದೊಂದು ತೀರ್ಮಾನ ಹೊರಬಿದ್ದಿತ್ತು. ಈ ಘಟನೆ ಬಳಿಕ ಬೋಯಿಂಗ್‌ ಸಂಸ್ಥೆ ಕೂಡ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿತ್ತು. ಕೊರೊನಾ ಸಾಂಕ್ರಾಮಿಕದ ನಂತರ ಇದು ಮತ್ತಷ್ಟು ಹೆಚ್ಚಾಗಿತ್ತು.

ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ ‘ಎಕನಾಮಿಕ್ ಟೈಮ್ಸ್’ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.



Read more…