Karnataka news paper

ರೋಹಿತ್‌-ಕರುಣರತ್ನೆ ಓಪನರ್ಸ್‌; ಕೊಹ್ಲಿ ಇಲ್ಲದ 2021ರ ಟೆಸ್ಟ್‌ ತಂಡ ಕಟ್ಟಿದ ಚೋಪ್ರಾ!


ಹೊಸದಿಲ್ಲಿ: ಪ್ರಸಕ್ತ 2021ರ ವರ್ಷದ ಟೆಸ್ಟ್ ಇಲೆವೆನ್‌ ಆಯ್ಕೆ ಮಾಡಿದ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಆಕಾಶ್‌ ಚೋಪ್ರಾ ಟೀಮ್‌ ಇಂಡಿಯಾದ ಮೂವರು ಆಟಗಾರರಿಗೆ ಅವಕಾಶ ನೀಡಿದ್ದಾರೆ. ಆದರೆ, ಔಟ್‌ ಆಫ್‌ ಫಾರ್ಮ್‌ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಯನ್ನು ತಮ್ಮ ನೆಚ್ಚಿನ ತಂಡದಿಂದ ಕೈ ಬಿಟ್ಟಿದ್ದಾರೆ.

ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ಮಾತನಾಡಿದ ಆಕಾಶ್‌ ಚೋಪ್ರಾ, ರೋಹಿತ್‌ ಶರ್ಮಾ ಹಾಗೂ ಶ್ರೀಲಂಕಾ ತಂಡದ ದಿಮುತ್‌ ಕರುಣರತ್ನೆಗೆ ಇನಿಂಗ್ಸ್‌ ಆರಂಭಿಸಲು ಅವಕಾಶ ನೀಡಿದ್ದಾರೆ. ಅಷ್ಟೇ ಅಲ್ಲದೆ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಗೆದ್ದ ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ಗೆ ತಮ್ಮ ನೆಚ್ಚಿನ ಟೆಸ್ಟ್‌ ತಂಡವನ್ನು ಮುನ್ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ.

“ಮೊದಲ ಹೆಸರು ನನಗೆ ನೆನಪಾಗುವುದು ರೋಹಿತ್‌ ಶರ್ಮಾ. ಈ ವರ್ಷ ಬಲಗೈ ಬ್ಯಾಟ್ಸ್‌ಮನ್‌ ಪಾಲಿಗೆ ಅದ್ಭುತವಾಗಿದೆ. ಪ್ರಸಕ್ತ ವರ್ಷದಲ್ಲಿ ಅವರು ಸ್ಥಿರವಾಗಿ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದಾರೆ ಹಾಗೂ ಚೆನ್ನೈನಲ್ಲಿ ಶತಕ ಸೇರಿದಂತೆ ಇಂಗ್ಲೆಂಡ್‌ ಪ್ರವಾಸದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಇನ್ನು ರೋಹಿತ್‌ ಜೊತೆ ಎರಡನೇ ಆರಂಭಿಕನಾಗಿ ಶ್ರೀಲಂಕಾ ನಾಯಕ ದಿಮುತ್‌ ಕರುಣರತ್ನೆ ಅವರನ್ನು ಆರಿಸಿದ್ದೇನೆ. ಈ ವರ್ಷ ದ್ವಿಶತಕ ಸೇರಿದಂತೆ ಅತ್ಯುತ್ತಮ ಪ್ರದರ್ಶನವನ್ನು ಅವರು ತೋರಿದ್ದಾರೆ,” ಎಂದು ಹೇಳಿದ್ದಾರೆ.

2021ರ ವರ್ಷದಲ್ಲಿ ದಾಖಲೆಯ ಪ್ರದರ್ಶನ ತೋರಿರುವ ಇಂಗ್ಲೆಂಡ್‌ ತಂಡದ ನಾಯಕ ಜೋ ರೂಟ್‌ಗೆ ತಮ್ಮ ನೆಚ್ಚಿನ ಟೆಸ್ಟ್‌ ತಂಡದಲ್ಲಿ ಚೋಪ್ರಾ ಮೂರನೇ ಸ್ಥಾನವನ್ನು ಕಲ್ಪಿಸಿದ್ದಾರೆ ಹಾಗೂ ತಂಡದ ನಾಯಕತ್ವದ ಜವಾಬ್ದಾರಿ ನೀಡಿರುವ ಕೇನ್‌ ವಿಲಿಯಮ್ಸನ್‌ಗೆ ನಾಲ್ಕನೇ ಕ್ರಮಾಂಕ ನೀಡಿದ್ದಾರೆ.

“ಜೋ ರೂಟ್‌ ಮೂರನೇ ಕ್ರಮಾಂಕ ನೀಡಲಾಗಿದ್ದು, ಅವರು 2021ರ ಅತ್ಯುತ್ತಮ ಟೆಸ್ಟ್‌ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಶ್ರೀಲಂಕಾ ಹಾಗೂ ಭಾರತದಲ್ಲಿ ಎರಡು ದ್ವಿಶತಕ ಸೇರಿದಂತೆ ಕೆಲ ಅದ್ಭುತ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಮತ್ತೊಂದೆಡೆ ನಾಲ್ಕನೇ ಕ್ರಮಾಂಕಕ್ಕೆ ನಾನು ಕೇನ್‌ ವಿಲಿಯಮ್ಸನ್‌ ಅವರನ್ನು ಆರಿಸಿದ್ದೇನೆ ಹಾಗೂ ಈ ತಂಡದ ನಾಯಕತ್ವವನ್ನೂ ಕೂಡ ನಾನು ಇವರಿಗೇ ವಹಿಸಿದ್ದೇನೆ,” ಎಂದರು.

“ಪಾಕಿಸ್ತಾನ ತಂಡದ ಫವಾದ್‌ ಅಲಾಮ್‌ ಅವರಿಗೆ ನಾನು ಐದನೇ ಬ್ಯಾಟಿಂಗ್‌ ಕ್ರಮಾಂಕ ನೀಡಿದ್ದೇನೆ. ಈ ವರ್ಷದಲ್ಲಿ ಅವರು ಸ್ಥಿರ ಪ್ರದರ್ಶನ ತೋರುವ ಮೂಲಕ ಕೆಲ ಅಮೋಘ ಇನಿಂಗ್ಸ್‌ಗಳನ್ನು ಆಡಿ ಗಮನ ಸೆಳೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 109, ಜಿಂಬಾಬ್ವೆ ವಿರುದ್ಧ 140 ಹಾಗೂ ವೆಸ್ಟ್ ಇಂಡೀಸ್‌ ವಿರುದ್ಧ 124 ರನ್‌ ಗಳಿಸಿದ್ದಾರೆ,” ಎಂದು ಚೋಪ್ರಾ ಹೇಳಿದರು.

​ವಿಕೆಟ್‌ ಕೀಪಿಂಗ್ ಸ್ಥಾನಕ್ಕೆ ಪಂತ್‌

ತಮ್ಮ ನೆಚ್ಚಿನ ಟೆಸ್ಟ್‌ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ವಿಕೆಟ್‌ ಕೀಪಿಂಗ್‌ ಸ್ಥಾನಕ್ಕೆ ಆಕಾಶ್‌ ಚೋಪ್ರಾ ಟೀಮ್‌ ಇಂಡಿಯಾದ ರಿಷಭ್‌ ಪಂತ್ ಅವರನ್ನು ಆಯ್ಕೆ ಮಾಡಿದ್ದಾರೆ ಹಾಗೂ ಆರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಅವಕಾಶ ಕಲ್ಪಿಸಿದ್ದಾರೆ.

“ರಿಷಭ್ ಪಂತ್ ವಿಕೆಟ್‌ ಕೀಪರ್‌. ಈ ಜಾಗಕ್ಕೆ ಜೋಸ್‌ ಬಟ್ಲರ್‌ ಸ್ಪರ್ಧೆಯಲ್ಲಿದ್ದರು. ಆದರೆ, ಈ ವರ್ಷದಲ್ಲಿ ಪಂತ್‌ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ಅವರು ಇಂಗ್ಲೆಂಡ್‌ ವಿರುದ್ಧ 101, ಗಬ್ಬಾದಲ್ಲಿ 89 ಹಾಗೂ ಸಿಡ್ನಿ ಟೆಸ್ಟ್‌ನಲ್ಲಿ 90 ರನ್‌ ಗಳಿಸಿದ್ದರು. ಆ ಮೂಲಕ ಭಾರತ ತಂಡ ಎರಡನೇ ಬಾರಿ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದರು,” ಎಂದು ಚೋಪ್ರಾ ತಿಳಿಸಿದ್ದಾರೆ.

ಹಾರ್ದಿಕ್‌ಗೆ ಏಷ್ಯಾ ಕಪ್‌ ವೇಳೆ ಹೇಳಿದ್ದ ಬುದ್ಧಿಮಾತನ್ನು ಸ್ಮರಿಸಿದ ಅಖ್ತರ್‌!

​ಆಲ್‌ರೌಂಡರ್‌ ಸ್ಥಾನಕ್ಕೆ ಜೇಮಿಸನ್‌

ನ್ಯೂಜಿಲೆಂಡ್‌ ತಂಡದ ಕೈಲ್‌ ಜೇಮಿಸನ್‌ ಅವರನ್ನು ತನ್ನ ನೆಚ್ಚಿನ ತಂಡದ ಬೌಲಿಂಗ್‌ ಆಲ್‌ರೌಂಡರ್ ಸ್ಥಾನಕ್ಕೆ ಆಕಾಶ್‌ ಚೋಪ್ರಾ ಆರಿಸಿದ್ದಾರೆ. “ಆಲ್‌ರೌಂಡರ್‌ ಸ್ಥಾನಕ್ಕೆ ಕೈಲ್‌ ಜೇಮಿಸನ್‌ ಅವರನ್ನು ನಾನು ಆಯ್ಕೆ ಮಾಡಿದ್ದೇನೆ. ಅವರು ಟೆಸ್ಟ್‌ ಕ್ರಿಕೆಟ್‌ ಆಡುವ ಸಲುವಾಗಿಯೇ ಜನಿಸಿದ್ದಾರೆಂದು ನನಗೆ ಅನಿಸುತ್ತಿದೆ. ವಿಶ್ವದ ಯಾವುದೇ ಜಾಗದಲ್ಲಿ ಆಡಿದರೂ ಅವರು 10 ವಿಕೆಟ್‌ ಪಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇನ್ನು ಸ್ಪಿನ್‌ ಆಲ್‌ರೌಂಡರ್‌ ಆಗಿ ಭಾರತದ ರವಿಚಂದ್ರನ್‌ ಅಶ್ವಿನ್‌ ಅವರನ್ನು ಆಯ್ಕೆ ಮಾಡಿದ್ದೇನೆ. ಅವರು ಇಂಗ್ಲೆಂಡ್‌ ವಿರುದ್ಧ ಚೆನ್ನೈನಲ್ಲಿ ಶತಕ ಸಿಡಿಸಿದ್ದರು ಹಾಗೂ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದರು. ಈ ಹಿನ್ನೆಲೆಯಲ್ಲಿ ವಿಶ್ವದ ನಂ.1 ಸ್ಪಿನ್ನರ್‌ ಅನ್ನು ನಾನು ಆಯ್ಕೆ ಮಾಡಿದ್ದೇನೆ,” ಎಂದು ಆಕಾಶ್‌ ಚೋಪ್ರಾ ಹೇಳಿದ್ದಾರೆ.

ಭಾರತ ಒಡಿಐ ತಂಡದಲ್ಲೂ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ಧವನ್‌!

​ಸ್ಪಿನ್‌ ವಿಭಾಗಕ್ಕೆ ಅಕ್ಷರ್‌ ಪಟೇಲ್‌

“ಆರ್‌ ಅಶ್ವಿನ್‌ ಜೊತೆಗೆ ದಕ್ಷಿಣ ಆಫ್ರಿಕಾದ ಕೇಶವ್‌ ಮಹರಾಜ್ ಅವರನ್ನು ಆಯ್ಕೆ ಮಾಡಲು ಬಯಸಿದ್ದೆ. ಆದರೆ, ಅಂತಿಮವಾಗಿ ನಾನು ಅಕ್ಷರ್‌ ಪಟೇಲ್‌ ಅವರನ್ನು ಆಯ್ಕೆ ಮಾಡಿದ್ದೇನೆ. ಏಕೆಂದರೆ ಇಂಗ್ಲೆಂಡ್‌ ವಿರುದ್ಧ ಪದಾರ್ಪಣೆ ಟೆಸ್ಟ್‌ ಸರಣಿಯಲ್ಲಿ ಅಕ್ಷರ್‌ ಪಟೇಲ್‌ ಅದ್ಭುತ ಬೌಲಿಂಗ್‌ ಪ್ರದರ್ಶನ ತೋರಿದ್ದಾರೆ. ಕಡಿಮೆ ಅವಕಾಶಗಳಲ್ಲಿಯೂ ಅವರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ವರ್ಷದಲ್ಲಿ ಟೆಸ್ಟ್‌ ಪದಾರ್ಪಣೆ ಮಾಡಿದ ಉತ್ತಮ ಆಟಗಾರರನ್ನು ಆಯ್ಕೆ ಮಾಡಿದರೆ, ಅದು ಅಕ್ಷರ್ ಪಟೇಲ್ ಎಂದು ನಾನು ಪರಿಗಣಿಸುತ್ತೇನೆ,” ಎಂದು ಆಕಾಶ್‌ ಚೋಪ್ರಾ ಹೇಳುವ ಮೂಲಕ ಒಟ್ಟು ನಾಲ್ವರು ಭಾರತೀಯ ಆಟಗಾರರಿಗೆ ತಮ್ಮ ನೆಚ್ಚಿನ ತಂಡದಲ್ಲಿ ಅವಕಾಶ ನೀಡಿದ್ದಾರೆ.

‘ದ್ರಾವಿಡ್‌ ಅಪ್ಪಟ ಜಂಟಲ್ಮನ್‌’, ಇದಕ್ಕೆ ಇತ್ತೀಚಿನ ಉದಾಹರಣೆ ಕೊಟ್ಟ ಗಂಗೂಲಿ!

​ವೇಗಿಗಳಾಗಿ ಆಂಡರ್ಸನ್‌, ಶಾಹಿನ್ ಅಫ್ರಿದಿ

ಇನ್ನು ವೇಗದ ಬೌಲಿಂಗ್‌ ವಿಭಾಗಕ್ಕೆ ಆಕಾಶ್‌ ಚೋಪ್ರಾ ಇಂಗ್ಲೆಂಡ್‌ ತಂಡದ ಹಿರಿಯ ವೇಗಿ ಜೇಮ್ಸ್ ಆಂಡರ್ಸನ್ ಹಾಗೂ ಪಾಕಿಸ್ತಾನ ತಂಡದ ಶಾಹೀನ್‌ ಶಾ ಅಫ್ರಿದಿ ಅವರನ್ನು ಆಯ್ಕೆ ಮಾಡಿದ್ದಾರೆ. “ಕೈಲ್‌ ಜೇಮಿಸನ್‌ ಅವರ ಜೊತೆಗೆ ಇನ್ನು ಇಬ್ಬರು ವೇಗದ ಬೌಲರ್‌ಗಳನ್ನು ನಾನು ಆಯ್ಕೆ ಮಾಡಿದ್ದೇನೆ, ಮೊದನೇಯದಾಗಿ ಜೇಮ್ಸ್‌ ಆಂಡರ್ಸನ್‌ ಹಾಗೂ ಎರಡನೇಯದಾಗಿ ಪಾಕಿಸ್ತಾನದ ಶಾಹೀನ್‌ ಶಾ ಅಫ್ರಿದಿ. ಪ್ರಸಕ್ತ ವರ್ಷದಲ್ಲಿ ಆಂಡರ್ಸನ್‌ ಒಟ್ಟು 32 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಶ್ರೀಲಂಕಾದಲ್ಲಿ 5 ವಿಕೆಟ್‌ ಸಾಧನೆ ಹಾಗೂ ಭಾರತದ ವಿರುದ್ಧವೂ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ್ದರು.”

“ಇನ್ನು ಎರಡನೇ ವೇಗಿಯಾಗಿರುವ ಶಾಹಿನ್ ಶಾ ಅಫ್ರಿದಿ ಪ್ರಸಕ್ತ ವರ್ಷದಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಅಕ್ಷರ್ ಪಟೇಲ್‌ ಅವರ ರೀತಿಯಲ್ಲಿಯೇ ಅಫ್ರಿದಿ ಕೂಡ ಐದು ವಿಕೆಟ್‌ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಎಡಗೈ ವೇಗಿ ಎತ್ತರ ಇರುವುದರಿಂದ ಚೆಂಡನ್ನು ಚೆನ್ನಾಗಿ ಸ್ವಿಂಗ್‌ ಮಾಡಬಲ್ಲರು,” ಎಂದು ಆಕಾಶ್‌ ಚೋಪ್ರಾ ಹೇಳಿದ್ದಾರೆ.

ಆಕಾಶ್‌ ಚೋಪ್ರಾ ಅವರ 2021ರ ಟೆಸ್ಟ್‌ ಪ್ಲೇಯಿಂಗ್‌ XI: ರೋಹಿತ್‌ ಶರ್ಮಾ, ದಿಮುತ್‌ ಕರುಣರತ್ನೆ, ಜೋ ರೂಟ್‌, ಕೇನ್‌ ವಿಲಿಯಮ್ಸನ್‌(ನಾಯಕ), ಫವಾದ್‌ ಅಲಾಮ್‌, ರಿಷಭ್‌ ಪಂತ್‌, ಕೈಲ್‌ ಜೇಮಿಸನ್‌, ಆರ್‌ ಅಶ್ವಿನ್‌, ಅಕ್ಷರ್‌ ಪಟೇಲ್‌, ಜೇಮ್ಸ್ ಆಂಡರ್ಸನ್‌, ಶಾಹೀನ್‌ ಶಾ ಅಫ್ರಿದಿ.

‘ಕ್ಯಾಪ್ಟನ್ಸಿ ಇಲ್ಲದ ಕೊಹ್ಲಿ ಅಪಾಯಕಾರಿ ಬ್ಯಾಟ್ಸ್‌ಮನ್‌’ ಎಂದ ಗಂಭೀರ್‌!



Read more