ಹೈಲೈಟ್ಸ್:
- ಸಿಬ್ಬಂದಿ ದೇವರಿಗೆ ನಿತ್ಯ ಪೂಜೆ, ಅಭಿಷೇಕ, ಅಲಂಕಾರ ಮಾಡುತ್ತಾರೆ
- ಆದರೆ ಭಕ್ತರಿಗೆ ದರ್ಶನಕ್ಕೆ ಅವಕಾಶವಿಲ್ಲ
- ಸೋಮವಾರ ಎಂದಿನಂತೆ ಭಕ್ತರಿಗೆ ಪ್ರವೇಶಾವಕಾಶ
ಬೆಂಗಳೂರು ನಗರದ ಪ್ರತಿಷ್ಠಿತ ಬನಶಂಕರಿ ದೇವಾಲಯಕ್ಕೆ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರದ ದಿನಗಳಲ್ಲಿ 6 ಸಾವಿರಕ್ಕೂ ಹೆಚ್ಚು ಹಾಗೂ ವಿಶೇಷ ದಿನಗಳಲ್ಲಿ 10 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡಿ ಅಮ್ಮನ ದರ್ಶನ ಪಡೆಯುತ್ತಿದ್ದರು. ಆದರೆ ಶುಕ್ರವಾರ ನಿರ್ಬಂಧ ಹೇರಿದ್ದರಿಂದ ಅರ್ಧದಷ್ಟು ಭಕ್ತರು ಮಾತ್ರ ಆಗಮಿಸಿದ್ದರು. ಜತೆಗೆ ಎರಡು ಡೋಸ್ ಕೋವಿಡ್ ಲಸಿಕೆಗಳನ್ನು ಹಾಕಿಸಿಕೊಂಡವರಿಗೆ ಮಾತ್ರ ಪ್ರವೇಶ ಕಲ್ಪಿಸುವುದಾಗಿ ಸೂಚನಾ ಫಲಕದಲ್ಲಿ ಅಳವಡಿಸಲಾಗಿತ್ತು. ಹೀಗಾಗಿ, ಲಸಿಕೆ ಪಡೆಯದ ಭಕ್ತರು ಫಲಕ ನೋಡಿಕೊಂಡು ವಾಪಸ್ ತೆರಳುತ್ತಿದ್ದರು. ಆದರೂ ಕೆಲ ಭಕ್ತರು ದೂರದಿಂದ ಬಂದಿರುವುದಾಗಿ ಹೇಳಿ ಅಮ್ಮನವರ ದರ್ಶನ ಪಡೆದು ಹೋಗುವುದಾಗಿ ಹೇಳಿ ವಿನಂತಿ ಮಾಡಿಕೊಂಡು ಒಳ ಹೋಗುತ್ತಿದ್ದರು.
ಮಾಸ್ಕ್ ಧರಿಸಿದವರಿಗೆ ಮಾತ್ರವೇ ಪ್ರವೇಶಾವಕಾಶ ಕಲ್ಪಿಸಲಾಗಿತ್ತು. ಜನರು ಸ್ವತಃ ಅಂತರ ಕಾಯ್ದುಕೊಂಡು ಸರತಿಯಲ್ಲಿ ಸಾಗುವ ಮೂಲಕ ದೇವರ ದರ್ಶನ ಪಡೆದರು. ಎಂದಿನಂತೆ ನಿಂಬೆ ಹಣ್ಣಿನ ದೀಪ ಬೆಳಗಲು ಅನುಮತಿ ನೀಡಲಾಗಿತ್ತು. ಆದರೆ, ಕೋವಿಡ್ ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಅನ್ನ ದಾಸೋಹ ಇರಲಿಲ್ಲ. ಬದಲಿಗೆ ದೊನ್ನೆಯಲ್ಲಿ ಪೊಂಗಲ್ ಅನ್ನು ಪ್ರಸಾದವನ್ನಾಗಿ ವಿತರಿಸಲಾಯಿತು.
ಧನುರ್ಮಾಸ ಪ್ರಯುಕ್ತ ಮುಂಜಾನೆಯಿಂದಲೇ ದೇವಾಲಯಕ್ಕೆ ಭಕ್ತರು ಆಗಮಿಸಿದರಾದರೂ, ಹೆಚ್ಚಿನ ದಟ್ಟಣೆ ಇರಲಿಲ್ಲ. ಹಾಗಾಗಿ ರಾತ್ರಿ 8.30ರವರೆಗೆ ದರ್ಶನ ಪಡೆದರು. ಇದೇ ರೀತಿ ನಗರದ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಸಾಮಾನ್ಯ ದಿನಕ್ಕಿಂತ ಕಡಿಮೆಯಾಗಿತ್ತು.
ಇಸ್ಕಾನ್ ದೇವಾಲಯದಲ್ಲಿ ಶುಕ್ರವಾರ, ಶನಿವಾರ ಹಾಗೂ ಭಾನುವಾರ ನಿತ್ಯ 3-4 ಸಾವಿರ ಮಂದಿ ಬರುತ್ತಿದ್ದರು. ಆದರೆ, ಶುಕ್ರವಾರ ಸುಮಾರು 600 ಮಂದಿ ಆಗಮಿಸಿದ್ದರು ಎಂದು ಇಸ್ಕಾನ್ ದೇವಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಕುಲಶೇಖರ ಚೈತನ್ಯ ದಾಸ ತಿಳಿಸಿದರು.
ಅದೇ ರೀತಿ ರಾಜರಾಜೇಶ್ವರಿ ದೇವಸ್ಥಾನ, ಟಿಟಿಡಿ, ನಿಮಿಷಾಂಬ, ವೆಂಕಟೇಶ್ವರ ಸ್ವಾಮಿ ದೇವಾಲಯ ಮತ್ತಿತರ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಶುಕ್ರವಾರ ಕಡಿಮೆಯಿತ್ತು.
ಶನಿವಾರ-ಭಾನುವಾರ ಭಕ್ತರಿಗೆ ಪ್ರವೇಶವಿಲ್ಲ
ಬನಶಂಕರಿ ದೇವಾಲಯ, ಇಸ್ಕಾನ್ ದೇವಾಲಯ, ಟಿಟಿಡಿ, ವೆಂಕಟೇಶ್ವರ, ಆಂಜನೇಯ ಸ್ವಾಮಿ ದೇವಾಲಯ, ಗವಿಗಂಗಾಧರ ಸ್ವಾಮಿ ಸೇರಿದಂತೆ ನಗರದ ಬಹುತೇಕ ದೇವಾಲಯಗಳಿಗೆ ಶನಿವಾರ ಮತ್ತು ಭಾನುವಾರ ಭಕ್ತರಿಗೆ ಪ್ರವೇಶ ಇರುವುದಿಲ್ಲ. ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ದೇವಾಲಯದ ಆಡಳಿತ ಮಂಡಳಿ ಸಿಬ್ಬಂದಿ ದೇವರಿಗೆ ನಿತ್ಯ ಪೂಜೆ, ಅಭಿಷೇಕ, ಅಲಂಕಾರಗಳನ್ನು ಮಾಡುತ್ತಾರೆ. ಆದರೆ ಭಕ್ತರಿಗೆ ದರ್ಶನಕ್ಕೆ ಅವಕಾಶವಿಲ್ಲ. ಸೋಮವಾರ ಎಂದಿನಂತೆ ಭಕ್ತರಿಗೆ ಪ್ರವೇಶಾವಕಾಶ ಕಲ್ಪಿಸಲಾಗುವುದು. ಈ ಕುರಿತು ನಮ್ಮ ದೇವಾಲಯದ ಪ್ರವೇಶ ದ್ವಾರದಲ್ಲಿ ಭಕ್ತರ ಗಮನಕ್ಕೆ ಎಂದು ಶುಕ್ರವಾರವೇ ಮಾಹಿತಿ ಫಲಕ ಅಳವಡಿಸಲಾಗಿದೆ ಎಂದು ಬನಶಂಕರಿ ದೇವಾಲಯದ ಚಂದ್ರು ಮಾಹಿತಿ ನೀಡಿದರು.
Read more
[wpas_products keywords=”deal of the day sale today offer all”]