ಹೈಲೈಟ್ಸ್:
- ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿ.
- ಎರಡನೇ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಸೋಲು ಅನುಭವಿಸಿದ ಭಾರತ ತಂಡ.
- ಜೊಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದಲ್ಲಿ ಭಾರತದ ಸೋಲಿಗೆ 3 ಕಾರಣ ತಿಳಿಸಿದ ಗಂಭೀರ್.
ಸೆಂಚೂರಿಯನ್ ಟೆಸ್ಟ್‌ನಲ್ಲಿ 113 ರನ್‌ಗಳಿಂದ ಭರ್ಜರಿ ಗೆಲುವು ಪಡೆದಿದ್ದ ಭಾರತ ತಂಡ, ಜೊಹಾನ್ಸ್‌ಬರ್ಗ್ ಟೆಸ್ಟ್‌ನಲ್ಲಿ 7 ವಿಕೆಟ್‌ಗಳ ಸೋಲು ಅನುಭವಿಸಿತು. ಆ ಮೂಲಕ ಹರಿಣಗಳ ನಾಡಿನಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆಲ್ಲುವ ಅವಕಾಶವನ್ನು ಪ್ರವಾಸಿ ತಂಡ ಮೂರನೇ ಟೆಸ್ಟ್ ಪಂದ್ಯಕ್ಕೆ ಮುಂದೂಡಿತು. ಈ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಬೆನ್ನು ನೋವಿನಿಂದ ಹೊರ ನಡೆದಿದ್ದರೆ, ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು.
ಪಂದ್ಯದ ಸೋಲಿನ ಬಳಿಕ ಸ್ಟಾರ್ ಸ್ಪೋರ್ಟ್ ಚರ್ಚೆಯಲ್ಲಿ ಗೌತಮ್ ಗಂಭೀರ್, “ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ವೇಗಿಯನ್ನು ಕಳೆದುಕೊಂಡಿತ್ತು. ಸಿರಾಜ್ ಶೇ. 100 ರಷ್ಟು ಫಿಟ್ ಆಗಿದ್ದರೆ ನಾಯಕ ನಾಲ್ವರು ವೇಗಿಗಳನ್ನು ಸಮರ್ಪಕವಾಗಿ ರೊಟೇಷನ್ ಮಾಡುತ್ತಿದ್ದರು. ಇದರ ನಡುವೆ ಚೆಂಡು ತೇವವಾಗುತ್ತಿದ್ದರಿಂದ ಆರ್ ಅಶ್ವಿನ್‌ಗೆ ನೆರವಾಗುತ್ತಿರಲಿಲ್ಲ. ಕೇವಲ ಮೂವರು ವೇಗಿಗಳನ್ನು ಇಟ್ಟುಕೊಂಡು ಇನ್ನುಳಿದ 8 ವಿಕೆಟ್ ಪಡೆಯುವುದು ಸುಲಭದ ಮಾತಲ್ಲ. ಹಾಗಾಗಿ ಸಿರಾಜ್ ಸಂಪೂರ್ಣ ಗುಣಮುಖರಾಗಿದ್ದರೆ, ಅವರು ಖಂಡಿತಾ ಅತ್ಯುತ್ತಮ ದಾಳಿ ನಡೆಸುತ್ತಿದ್ದರು,” ಎಂದರು.
ಭಾರತ Vs ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ ಸ್ಕೋರ್‌ಕಾರ್ಡ್
ಭಾರತ ವೇಗಿಗಳಿಗೆ ಎತ್ತರದ ಸಮಸ್ಯೆ: ಎತ್ತರ ದಕ್ಷಿಣ ಆಫ್ರಿಕಾ ವೇಗಿಗಳಿಗೆ ಲಾಭದಾಯಕವಾಗಿದೆ. ಹಾಗಾಗಿ ಭಾರತದ ವೇಗಿಗಳಿಗಿಂತ ಒಂದು ಪಟ್ಟು ಜಾಸ್ತಿ ಶಾರ್ಟ್ ಎಸೆತಗಳ ಮೂಲಕ ಬ್ಯಾಟ್ಸ್‌ಮನ್‌ಗಳನ್ನು ಹೆಚ್ಚು ಪರೀಕ್ಷೆಗೆ ಒಳಪಡಿಸುವ ಸ್ವಾಭಾವಿಕ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ ಎಂದು ಗಂಭೀರ್ ಹೇಳಿದರು.
“ನೀವು ಶಾರ್ಟ್ ಬಾಲ್‌ಗಳಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಟೆಸ್ಟ್ ಮಾಡಲು ಬಯಸುತ್ತೀರಿ. ಆದರೆ ದಕ್ಷಿಣ ಆಫ್ರಿಕಾ ಬೌಲರ್‌ಗಳು ಹೆಚ್ಚು ಎತ್ತರವಿರುವ ಹಿನ್ನೆಲೆಯಲ್ಲಿ ಅವರು ಬೌನ್ಸರ್ ಹಾಕಲು ಸಾಮರ್ಥ್ಯ ಮೀರಿ ಪ್ರಯತ್ನಿಸಬೇಕಾಗಿಲ್ಲ. ಜಸ್‌ಪ್ರಿತ್ ಬುಮ್ರಾ ಅವರಿಂದಲೂ ಇದನ್ನು ನಿರೀಕ್ಷಿಸಬಹುದು. ಆದರೆ ಮೊಹಮ್ಮದ್ ಶಮಿ ಅವರಿಂದ ಶಾರ್ಟ್ ಎಸೆತಗಳು ಸ್ವಾಭಾವಿಕವಾಗಿ ಬರುವುದಿಲ್ಲ ಹಾಗೂ ಅವರ ಬಹುತೇಕ ಎಸೆತಗಳು ವಿಕೆಟ್ ಕೀಪರ್ ತಲೆ ಮೇಲೆ ಹಾರುತ್ತವೆ. ಬುಮ್ರಾ ಅವರ ಸಾಮರ್ಥ್ಯ ಏನಿದ್ದರೂ ಪೂರ್ಣ ಪ್ರಮಾಣದ ಎಸೆತಗಳಲ್ಲಿ ಅಡಗಿದೆ,” ಎಂದರು.
ವಿರಾಟ್ ಕೊಹ್ಲಿ ಗುಣಮುಖ, ಸಿಹಿ ಸುದ್ದಿ ನೀಡಿದ ಕೆಎಲ್ ರಾಹುಲ್!
“ನೀವು ಮಾರ್ಕೊ ಯೆನ್ಸನ್ ಹಾಗೂ ಕಗಿಸೊ ರಬಾಡ ಅವರನ್ನು ನೋಡುವುದಾದರೆ, ಅವರು ಸ್ವಾಭಾವಿಕ ಬ್ಯಾಕ್ ಆಫ್ ಲೆನ್ತ್ ಎಸೆತಗಳನ್ನು ಹೊಂದಿದ್ದಾರೆ. ಇದು ಎರಡೂ ತಂಡಗಳಿಂದ ದೊಡ್ಡ ವ್ಯತ್ಯಾಸವಾಗಿದೆ. ಒಂದು ಕಡೆ ದಕ್ಷಿಣ ಆಫ್ರಿಕಾದಲ್ಲಿ ಎತ್ತರದ ವೇಗಿಗಳಿದ್ದು, ಅವರು ಸ್ವಾಭಾವಿಕವಾಗಿ ಬೌನ್ಸರ್ ಹಾಕಲಿದ್ದಾರೆ. ಮತ್ತೊಂದೆಡೆ ಭಾರತ ತಂಡದಲ್ಲಿ ವೇಗಿಗಳು ಅಷ್ಟೊಂದು ಎತ್ತರ ಇಲ್ಲವಾದರೂ ಸ್ವಾಭಾವಿಕ ಲೆನ್ತ್ ಮೂಲಕ ಪೂರ್ಣ ಪ್ರಮಾಣದ ಎಸೆತಗಳನ್ನು ಹಾಕುತ್ತಾರೆ,” ಎಂದು ಹೇಳಿದರು.
ಬ್ಯಾಟಿಂಗ್ ಸಮಸ್ಯೆ: ಬೌಲಿಂಗ್ ವಿಭಿನ್ನತೆಯ ಹೊರತಾಗಿಯೂ ಭಾರತ ತಂಂಡದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಗಂಭೀರ ಸಮಸ್ಯೆಯಿದೆ ಎಂದು ಗಂಭೀರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟಾಸ್ ಗೆದ್ದರೂ ಇದರ ಲಾಭವನ್ನು ಪಡೆಯುವಲ್ಲಿ ಟೀಮ್ ಇಂಡಿಯಾ ವಿಫಲವಾಗಿ ಕೇವಲ 202 ರನ್‌ಗಳಿಗೆ ಆಲ್‌ಔಟ್ ಆಗಿದೆ ಎಂದು ಮಾಜಿ ಆರಂಭಿಕ ಬೇಸರ ವ್ಯಕ್ತಪಡಿಸಿದರು.
3ನೇ ಟೆಸ್ಟ್‌ಗೆ ಭಾರತ ಸುಧಾರಿಸಿಕೊಳ್ಳಬೇಕಾದ ಅಂಶ ವಿವರಿಸಿದ ದ್ರಾವಿಡ್!
“ಏನೇ ಆದರೂ ಭಾರತ ತಂಡದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ದೊಡ್ಡ ಸಮಸ್ಯೆ ಇದೆ. ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಕೇವಲ 200 ರನ್‌ಗಳಿಗೆ ಆಲ್‌ಔಟ್ ಆಗಿದೆ. ಈ ರೀತಿಯಾದರೆ ಟಾಸ್ ಗೆದ್ದು ಏನು ಪ್ರಯೋಜನ? ಅದರಂತೆ ಕೆ.ಎಲ್ ರಾಹುಲ್ ಒಂದು ಅಂಶದ ಬಗ್ಗೆ ಸರಿಯಾಗಿ ಹೇಳಿದ್ದಾರೆ. ಜೋಹಾನ್ಸ್‌ಬರ್ಗ್ ಹಾಗೂ ಸೆಂಚೂರಿಯನ್ ಎರಡರಲ್ಲೂ ವ್ಯತ್ಯಾಸ ಏನೆಂದರೆ ಪ್ರಥಮ ಇನಿಂಗ್ಸ್‌ನಲ್ಲಿ ರನ್ ಗಳಿಸಿದ್ದು. ಮೊದಲನೇ ಟೆಸ್ಟ್‌ನಲ್ಲಿ ನೀವು 350ಕ್ಕೂ ಹೆಚ್ಚು ರನ್ ಗಳಿಸಿದ್ದೀರಿ ಹಾಗೂ ಗೆಲುವು ಸಿಕ್ಕಿದೆ. ಆದರೆ ಎಲ್ಲಾ ಸಮಯದಲ್ಲೂ 200-220 ರನ್‌ಗಳಿಗೆ ಎದುರಾಳಿ ತಂಡವನ್ನು ಬೌಲರ್‌ಗಳು ನಿಯಂತ್ರಿಸಲು ಆಗುವುದಿಲ್ಲ. ಅದರಲ್ಲೂ ಒಬ್ಬರು ಗಾಯಕ್ಕೆ ತುತ್ತಾಗಿರುವಾಗ, ಇನ್ನುಳಿದ ನಾಲ್ವರೊಂದಿಗೆ ಇದು ಸಕಾರವಾಗುವುದೇ ಇಲ್ಲ,” ಎಂದು ಗೌತಮ್ ಗಂಭೀರ್ ತಿಳಿಸಿದರು.
Read more
[wpas_products keywords=”deal of the day gym”]