ಹೈಲೈಟ್ಸ್:
- ಬೆಂಗಳೂರಿನ ಸರಕಾರಿ ಇಲ್ಲವೇ ಖಾಸಗಿ ಕಚೇರಿಗಳಲ್ಲಿ ಕೆಲಸ
- ಸಾವಿರಾರು ಜನ ನಿತ್ಯವೂ ರೈಲು – ಬಸ್ಸುಗಳ ಮೂಲಕ ಓಡಾಡುತ್ತಾರೆ
- ವಿಧಾನಸೌಧದ ವ್ಯವಹಾರ, ರಿಯಲ್ ಎಸ್ಟೇಟ್ ವಹಿವಾಟು ಸೇರಿದಂತೆ ಅನೇಕ ಕಾರಣಕ್ಕಾಗಿ ಬೆಂಗಳೂರು ನಂಟು
ಮೈಸೂರು: ನಿತ್ಯವೂ ಬೆಂಗಳೂರಿಗೆ ಓಡಾಡುವವರು ನಿಮ್ಮ ಸಂಪರ್ಕದಲ್ಲಿರುವರೇ? ಚಿಂತೆ ಬೇಡ. ತುಸು ಜೋಪಾನವಾಗಿರಿ. ರಾಜಧಾನಿಯಲ್ಲಿ ಓಮಿಕ್ರಾನ್ ದಿನೇ ದಿನೇ ಹೆಚ್ಚುತ್ತಿರುವುದರಿಂದ ಬೆಂಗಳೂರು ಸಹವಾಸದಲ್ಲಿರುವ ದುಡಿಮೆಗಾರರು, ವೃತ್ತಿಪರರು ಕೂಡ ಕೋವಿಡ್ ಸೋಂಕು ತಗುಲದಂತೆ ಸ್ವಯಂ ಎಚ್ಚರಿಕೆ ವಹಿಸಿ.
ಇಂಥದ್ದೊಂದು ಪಿಸು ಮಾತಿನ ಮನವಿಯನ್ನು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಎಲ್ಲೆಡೆ ಬಿತ್ತಲಾರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಹೆಚ್ಚು ಕೋವಿಡ್ ಎಂದು ವಿಪರೀತವಾಗಿ ಅವರನ್ನು ಅನುಮಾನಿಸುವುದು ಬೇಡ. ಅಂತೆಯೇ ನಿರ್ಲಕ್ಷ್ಯವೂ ಬೇಡ ಎಂಬ ಕಾಳಜಿಯನ್ನೂ ವ್ಯಕ್ತಪಡಿಸಲಾಗುತ್ತಿದೆ.
ರಾಜಧಾನಿಯಲ್ಲಿ ಕೋವಿಡ್ ಸ್ಫೋಟಗೊಂಡಿರುವ ಹಿನ್ನೆಲೆಯಲ್ಲಿ ಮೈಸೂರು ಮಾತ್ರವಲ್ಲ, ನೆರೆಯ ಮಂಡ್ಯ ಜಿಲ್ಲಾಡಳಿತ ಕೂಡ ಹೆಚ್ಚು ನಿಗಾ ವಹಿಸಿವೆ. ಬೆಂಗಳೂರಿನ ಸರಕಾರಿ ಇಲ್ಲವೇ ಖಾಸಗಿ ಕಚೇರಿಗಳಲ್ಲಿ ಮಂಡ್ಯ, ಮೈಸೂರು ಭಾಗದ ಜನ ಕೆಲಸ ಮಾಡುತ್ತಿದ್ದು, ಈ ಪೈಕಿ ಸಾವಿರಾರು ಜನ ನಿತ್ಯವೂ ರೈಲು – ಬಸ್ಸುಗಳ ಮೂಲಕ ಓಡಾಡುತ್ತಾರೆ.
ಇದಲ್ಲದೇ, ವಿಧಾನಸೌಧದ ವ್ಯವಹಾರ, ರಿಯಲ್ ಎಸ್ಟೇಟ್ ವಹಿವಾಟು ಸೇರಿದಂತೆ ಅನೇಕ ಕಾರಣಕ್ಕಾಗಿ ಬೆಂಗಳೂರು ನಂಟು ಹೊಂದಿರುವ ಮೈಸೂರಿಗರ ಸಂಖ್ಯೆ ಹೆಚ್ಚಿದೆ. ಇಂಥಾ ‘ಮೈಸೂರು ನಿವಾಸಿ ಬೆಂಗಳೂರಿಗರ’ ಆರೋಗ್ಯದ ಮೇಲೆ ಕಾಳಜಿ ವಹಿಸಲು ಮೈಸೂರು ಜಿಲ್ಲಾಡಳಿತ ಚಿಂತನೆ ನಡೆಸಿದೆ.
‘ಸದ್ಯಕ್ಕೆ ಮೈಸೂರು ಸೇಫ್ ಜೋನ್‌ನಲ್ಲಿದೆ. ಮೈಸೂರಿನ ಪಾಸಿಟಿವಿಟಿ ರೇಟ್ ಶೇ. 0.92ನಲ್ಲಿದೆ. ಆದರೆ, ಆತಂಕ ಇರುವುದೇ ಬೆಂಗಳೂರಿನ ನಂಟು ಹೊಂದಿರುವವರಿಗೆ. ನಿತ್ಯ ಉದ್ಯೋಗ, ವ್ಯವಹಾರ ಸೇರಿದಂತೆ ಸಾಕಷ್ಟು ಮಂದಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾರೆ. ಅದೇ ರೀತಿ ಬೆಂಗಳೂರಿನಿಂದಲೂ ಮೈಸೂರಿಗೆ ಬರುತ್ತಿದ್ದಾರೆ. ಪರಸ್ಪರ ಹೋಗಿ ಬರುವವರ ಸಂಖ್ಯೆ ದಿನಕ್ಕೆ ಎರಡು ಸಾವಿರಕ್ಕೂ ಹೆಚ್ಚು. ಇವರಿಂದಾಗಿ ಸೋಂಕು ಹರಡುವ ಅಪಾಯವಿದೆ. ಇವರನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಚಿಂತನೆ ನಡೆಸಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ವಿಜಯ ಕರ್ನಾಟಕಕ್ಕೆ ತಿಳಿಸಿದರು.
Read more
[wpas_products keywords=”deal of the day sale today offer all”]