Source : PTI
ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಆಢಳಿತಾರೂಢ ಬಿಜೆಪಿ ಮತ್ತು ಬಿಎಸ್ ಪಿ ಗೆ ಆಘಾತ ಎದುರಾಗಿದ್ದು, ಇಬ್ಬರು ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಬಿಎಸ್‌ಪಿಯಿಂದ ಇತ್ತೀಚೆಗಷ್ಟೇ ಉಚ್ಚಾಟಿತರಾಗಿದ್ದ ಚಿಲ್ಲುಪುರ್ ಕ್ಷೇತ್ರದ ಶಾಸಕ ವಿನಯ್ ಶಂಕರ್ ತಿವಾರಿ ಮತ್ತು ಬಿಜೆಪಿ ತೊರೆದ ಖಲೀಲಾಬಾದ್ ಶಾಸಕ ದಿಗ್ವಿಜಯ್ ನಾರಾಯಣ್ ಎಸ್‌ಪಿ ಪಕ್ಷಕ್ಕೆ ಸೇರಿದ್ದಾರೆ. ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಬ್ಬರನ್ನೂ ಸಮಾಜವಾದಿ ಕಚೇರಿಯಲ್ಲಿ ಪಕ್ಷಕ್ಕೆ ಬರಮಾಡಿಕೊಂಡರು.
ಅವರಿಬ್ಬರ ಜೊತೆ, ಉತ್ತರ ಪ್ರದೇಶ ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಶಂಕರ್ ಪಾಂಡೆ ಕೂಡಾ ಬಿಎಸ್‌ಪಿ ತೊರೆದು ಎಸ್‌ಪಿ ಸೇರಿದರು. ಈ ಎಲ್ಲಾ ಪ್ರಮುಖ ಮುಖಂಡರ ಜೊತೆ, ಬ್ರಾಹ್ಮಣ ಸಮುದಾಯದ ಹಲವಾರು ಮುಖಂಡರು ವಿವಿಧ ಪಕ್ಷಗಳನ್ನು ತೊರೆದು ಎಸ್‌ಪಿ ಸೇರಿದ್ದಾರೆ ಎನ್ನಲಾಗಿದೆ.
ಪಕ್ಷದಲ್ಲಿ ಅಶಿಸ್ತಿಗೆ ಕಾರಣವಾಗಿರುವ ನೆಪ ನೀಡಿ ಕಳೆದ ಸೋಮವಾರವಷ್ಟೇ ಬಿಎಸ್‌ಪಿಯು ಶಾಸಕ ವಿನಯ್ ಶಂಕರ್ ತಿವಾರಿ, ಅವರ ಸಹೋದರ, ಮಾಜಿ ಸಂಸದ ಕುಶಾಲ್ ತಿವಾರಿ ಮತ್ತು ಸಂಬಂಧಿ ಪಾಂಡೆ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಅಖಿಲೇಶ್ ಯಾದವ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ‘ಬ್ರಿಟಿಷರ ಒಡೆದು ಆಳುವ ನೀತಿಯ ಮಾದರಿಯಲ್ಲೇ ಜನರನ್ನು ಹೆದರಿಸಿ ಮತ್ತು ಕೊಂದು ಬಿಜೆಪಿ ಆಡಳಿತ ನಡೆಸುತ್ತಿದೆ. ಮುಂದಿನ ಚುನಾವಣೆಯಲ್ಲಿ ಜನರು ಬಿಜೆಪಿಗೆ ಪಾಠ ಕಲಿಸಲಿದ್ದಾರೆ’ ಎಂದರು.