Online Desk
ಕಾಬೂಲ್: ಗಡಿ ಬೇಲಿ ವಿಚಾರದಲ್ಲಿ ಎರಡು ನೆರೆ ರಾಷ್ಟ್ರಗಳ ಮಧ್ಯೆ ಉದ್ವಿಗ್ನತೆ ಹೆಚ್ಚಾಗಿದ್ದು ಡ್ಯುರಾಂಡ್ ಲೈನ್‌ನಲ್ಲಿ ಪಾಕಿಸ್ತಾನಕ್ಕೆ ಯಾವುದೇ ರೀತಿಯ ಬೇಲಿ ಹಾಕಲು ಅವಕಾಶ ನೀಡುವುದಿಲ್ಲ ಎಂದು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಹೇಳಿದೆ.
ಗಡಿಯಲ್ಲಿ ಗುಂಡಿನ ದಾಳಿ ತೀವ್ರಗೊಳ್ಳುತ್ತಿದ್ದು, ಪಾಕಿಸ್ತಾನ ಹಾಕಿರುವ ತಂತಿ ಬೇಲಿಯನ್ನು ತಾಲಿಬಾನ್ ಯೋಧರು ಕಿತ್ತು ಹಾಕುತ್ತಿದ್ದಾರೆ. ಇದರಿಂದ ತಾಲಿಬಾನ್ ತನ್ನ ಪರಮಾಪ್ತ ಎಂದು ನಂಬಿದ್ದ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಖಭಂಗವಾಗುತ್ತಿದೆ.
ಅಫ್ಘಾನಿಸ್ತಾನದಲ್ಲಿ ಅಸ್ಥಿತ್ವದಲ್ಲಿದ್ದ ಅಶ್ರಫ್ ಘನಿ ಸರ್ಕಾರವನ್ನು ಓಡಿಸಿ, 2021 ಆಗಸ್ಟ್ 15ರಂದು ತಾಲಿಬಾನ್ ಅಧಿಪತ್ಯಕ್ಕೆ ಏರಿತು. ತಾಲಿಬಾನ್ ಸಂಘಟನೆಗೆ ಕುಮ್ಮಕ್ಕು ಹಾಗೂ ಹುಟ್ಟಿಗೆ ಪಾಕಿಸ್ತಾನವೇ ಕಾರಣ. ಆದರೆ ತಾಲಿಬಾನ್ ಅಸ್ಥಿತ್ವಕ್ಕೆ ಬಂದು ಐದು ತಿಂಗಳು ಕಳೆಯುವುದರೊಳಗೆ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಸ್ನೇಹ ವೈರತ್ವದತ್ತ ಸಾಗುತ್ತಿದೆ.
ತಾಲಿಬಾನ್ ಕಮಾಂಡರ್ ಮೌಲ್ವಿ ಸನಾವುಲ್ಲಾ ಸಂಗೀನ್ ಬುಧವಾರ ಅಫ್ಘಾನಿಸ್ತಾನದ ಟೋಲೋ ನ್ಯೂಸ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ, “ಡ್ಯುರೆಂಡ್ ಗಡಿ ರೇಖೆಯನ್ನು ನಂಬಲ್ಲ. ಗಡಿಯಲ್ಲಿ ಪಾಕಿಸ್ತಾನ ಹಾಕುತ್ತಿರುವ ಯಾವುದೇ ರೀತಿಯ ಬೇಲಿಯನ್ನು ಅನುಮತಿಸುವುದಿಲ್ಲ. ಪಾಕಿಸ್ತಾನ ಈ ಹಿಂದೆ ಏನೇ ಮಾಡಿದ್ದರೂ ಅದನ್ನು ನಾವು ಇನ್ನು ಮುಂದೆ ಒಪ್ಪುವುದಿಲ್ಲ” ಎಂದು ಹೇಳಿದ್ದಾರೆ.
ಪಾಕಿಸ್ತಾನ ವಿದೇಶಾಂಗ ಸಚಿವ ಖುರೇಷಿ ಸೋಮವಾರ ಇಸ್ಲಾಮಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ “ಕೆಲವು ಅಶಿಸ್ತಿನ ಅಂಶಗಳು ಯಾವುದೇ ಕಾರಣವಿಲ್ಲದೆ ಎತ್ತುತ್ತಿವೆ. ಅಫ್ಘಾನಿಸ್ತಾನ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ಈ ಸಮಸ್ಯೆಯನ್ನು ರಾಜತಾಂತ್ರಿಕವಾಗಿ ಪರಿಹರಿಸುತ್ತೇವೆ. ಡ್ಯುರಾಂಡ್ ರೇಖೆ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ 2,670 ಕಿಮೀ ಉದ್ದದ ಅಂತರಾಷ್ಟ್ರೀಯ ಗಡಿಯಾಗಿದೆ. ಈ ಸ್ಥಳದಲ್ಲಿ ಎರಡೂ ದೇಶಗಳ ಸೇನೆಗಳ ಮಧ್ಯೆ ಗುಂಡಿನ ಚಕಮಕಿ ನಡೆದಿದೆ” ಎಂದು ಹೇಳಿದರು.
90 ರಷ್ಟು ಫೆನ್ಸಿಂಗ್ ಕಾಮಗಾರಿ ಪೂರ್ಣ
ಕಾಬೂಲ್‌ನ ಆಕ್ಷೇಪದ ಹೊರತಾಗಿಯೂ ಪಾಕಿಸ್ತಾನವು ಗಡಿಯಲ್ಲಿ 90 ರಷ್ಟು ಬೇಲಿಯನ್ನು ಪೂರ್ಣಗೊಳಿಸಿದೆ. ಬ್ರಿಟಿಷರ ಆಳ್ವಿಕೆಯಲ್ಲಿ ಈ ಗಡಿ ನಿರ್ಮಾಣವಾಗಿದ್ದು, ಎರಡೂ ಬದಿಗಳಲ್ಲಿ ಅನೇಕ ಪ್ರಾಂತ್ಯ ಹಾಗೂ ಕುಟುಂಬಗಳನ್ನು ಈ ಗಡಿರೇಖೆ ವಿಭಜಿಸಿದೆ. ಇದರಿಂದ ಅಫ್ಘಾನಿಸ್ತಾನಕ್ಕೆ ಸೇರಬೇಕಾದ ಪ್ರದೇಶಗಳು ಪಾಕಿಸ್ತಾನದಲ್ಲಿವೆ. ಈ ಗಡಿರೇಖೆಯನ್ನು ತಾವು ಎಂದಿಗೂ ಒಪ್ಪುವುದಿಲ್ಲ ಎಂದು ತಾಲಿಬಾನ್ ಹೇಳಿಕೊಳ್ಳುತ್ತಿದೆ.
ಆದರೆ, ತಾಲಿಬಾನ್ ಅಸ್ಥಿತ್ವಕ್ಕೆ ಬಂದ ನಂತರ ತನಗೆ ಲಾಭವಾಗಲಿದೆ ಹಾಗೂ ಡ್ಯುರಾಂಡ್ ಗಡಿರೇಖೆಯನ್ನು ಒಪ್ಪಲಿದೆ ಎಂದು ಪಾಕಿಸ್ತಾನ ಭಾವಿಸಿತ್ತು. ಆದರೆ, ಪಾಕಿಸ್ತಾನದ ಕುತಂತ್ರ ಫಲಿಸಲಿಲ್ಲ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರವನ್ನು ರಚಿಸಿದಾಗಿನಿಂದ, ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳು ದಾಖಲೆ ಮಟ್ಟದಲ್ಲಿ ಹೆಚ್ಚಾಗುತ್ತಿವೆ. ಒಂದು ಹಂತದಲ್ಲಿ ತಾಲಿಬಾನ್ ಅನ್ನು ತಲೆ ಮೇಲೆ ಹೊತ್ತು ಕುಣಿದಿದ್ದ ಪಾಕಿಸ್ತಾನ, ಇಂದು ತಾನೇ ಪಶ್ಚಾತಾಪ ಪಡುತ್ತಿದೆ.
Read more
[wpas_products keywords=”deal of the day”]