Karnataka news paper

ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಇಂದು ಚಳಿಗಾಲ ಅಧಿವೇಶನ ಆರಂಭ, ಬಿಟ್ ಕಾಯಿನ್, ಪ್ರವಾಹ ವಿರೋಧ ಪಕ್ಷಕ್ಕೆ ಅಸ್ತ್ರ, ರೈತರಿಂದ ಪ್ರತಿಭಟನೆ ಬಿಸಿ


Source : The New Indian Express

ಬೆಳಗಾವಿ: 10 ದಿನಗಳ ವಿಧಾನ ಮಂಡಲ ಚಳಿಗಾಲ ಅಧಿವೇಶನ ಇಂದು ಸೋಮವಾರ(ಡಿಸೆಂಬರ್ 13) ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಆರಂಭವಾಗುತ್ತಿದೆ. 

ಓಮಿಕ್ರಾನ್ ಕೋವಿಡ್ ರೂಪಾಂತರಿ ಭೀತಿಯ ನಡುವೆ ಸದನದಲ್ಲಿ ಸದಸ್ಯರು ಕಲಾಪದಲ್ಲಿ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಹಲವು ಸವಾಲುಗಳಿವೆ. 

ಮತಾಂತರ ನಿಷೇಧ ಕಾಯ್ದೆಯನ್ನು ಈ ಬಾರಿಯ ಅಧಿವೇಶನದಲ್ಲಿ ಸರ್ಕಾರ ಮಂಡಿಸುವ ಚಿಂತನೆ ನಡೆಸಿದ್ದು ಇದಕ್ಕೆ ಈಗಾಗಲೇ ವಿರೋಧ ಪಕ್ಷ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಸದನದಲ್ಲಿ ವಿಪರೀತ ಗದ್ದಲ ಏರ್ಪಡುವ ಸಾಧ್ಯತೆಯಿದೆ. ಇನ್ನು ಹಲವು ಸಮಯಗಳಿಂದ ಕೇಳಿಬರುತ್ತಿರುವ ಬಿಟ್ ಕಾಯಿನ್ ದಂಧೆ, ಗುತ್ತಿಗೆದಾರರಿಗೆ ಶೇಕಡಾ 40ರಷ್ಟು ಕಮಿಷನ್, ಕೋವಿಡ್ ಮತ್ತು ರಾಜ್ಯದ ನೆರೆ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆಯೆಂದು,ಅಕಾಲಿಕ ಮಳೆಯಿಂದ ರೈತರಿಗೆ ಆಗಿರುವ ನಷ್ಟ, ಎಪಿಎಂಪಿ ಕಾಯ್ದೆಯನ್ನು ಹಿಂತೆಗೆದುಕೊಳ್ಳುವುದು ಇತ್ಯಾದಿ ವಿಷಯಗಳನ್ನು ಹಿಡಿದುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷ ಕಾಂಗ್ರೆಸ್ ಸಜ್ಜಾಗಿದೆ.

ಇನ್ನು ಕಳೆದ ವಾರ ನಡೆದ ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಚುನಾವಣೆಯ ಫಲಿತಾಂಶ ನಾಳೆ ಘೋಷಣೆಯಾಗಲಿದೆ. ಆಡಳಿತಾರೂಢ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದರೆ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಮತ್ತಷ್ಟು ಬಲ ಬಂದಂತಾಗುತ್ತದೆ. ಎಲ್ಲಾ 10 ದಿನಗಳ ಕಾಲ ಅಧಿವೇಶನ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿಯವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ಮತಾಂತರ ಸಮಾಜಕ್ಕೆ ಒಳ್ಳೆಯದಲ್ಲ, ಅದನ್ನು ನಿಷೇಧಿಸಲು ಕಾನೂನು ತರಲು ಸರ್ಕಾರ ಪ್ರಯತ್ನ: ಸಿಎಂ ಬೊಮ್ಮಾಯಿ

ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ನಡೆಸಲು ಆಗದೆ 2 ವರ್ಷಗಳ ಬಳಿಕ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದೆ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಚರ್ಚೆ, ಸಲಹೆಗಳನ್ನು ಸರ್ಕಾರ ಮುಕ್ತವಾಗಿ ಸ್ವೀಕರಿಸುತ್ತದೆ ಎಂದು ಈಗಾಗಲೇ ಮುಖ್ಯಮಂತ್ರಿಗಳು ಹೇಳಿದ್ದಾರೆ.

ಮತಾಂತರ ನಿಷೇಧ ಕಾಯ್ದೆ: ವಿರೋಧ ಪಕ್ಷಗಳು ಸೇರಿದಂತೆ ರಾಜ್ಯದ ಕ್ರೈಸ್ತ ಪಾದ್ರಿಗಳು, ಚರ್ಚ್, ಮಿಷನರಿಗಳು ಈಗಾಗಲೇ ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಕೂಡ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಆದರೆ ಮಸೂದೆಯನ್ನು ಈ ಬಾರಿ ಅಧವೇಶನದಲ್ಲಿ ಎಪಿಎಂಸಿ ಮಸೂದೆಯನ್ನು ಮಂಡಿಸಿದ ಬಳಿಕ 5 ಅಥವಾ 6ನೇ ದಿನ ಸದನದಲ್ಲಿ ಮಂಡಿಸುವ ನಿರೀಕ್ಷೆಯಿದೆ. ಜೆಡಿಎಸ್ ಮತಾಂತರ ನಿಷೇಧ ಕಾಯ್ದೆಯನ್ನು ಬೆಂಬಲಿಸುತ್ತದೆಯೇ ಇಲ್ಲವೇ ಎಂದು ಸ್ಪಷ್ಟಪಡಿಸಿಲ್ಲ. ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ನಂತರ ಅದು ತನ್ನ ನಿರ್ಧಾರವನ್ನು ತೋರಿಸಲಿದೆ. ಬೆಳಗಾವಿ ಅಧಿವೇಶನದ ಮೊದಲ ಎರಡು ದಿನ ಹೆಚ್ ಡಿ ಕುಮಾರಸ್ವಾಮಿಯವರು ಭಾಗವಹಿಸುತ್ತಿಲ್ಲ.

ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ನಿರ್ಧಾರದಿಂದ ಹಿಂದೆ ಸರಿಯಿರಿ: ಸಿಎಂ ಬೊಮ್ಮಾಯಿಗೆ ಕ್ರೈಸ್ತ ಸಮುದಾಯದ ನಿಯೋಗ ಮನವಿ

ಉತ್ತರ ಕರ್ನಾಟಕದ ಅಭಿವೃದ್ಧಿಯ ಕುರಿತು ಚರ್ಚಿಸಲು ಸರ್ಕಾರ ತೀವ್ರ ಒತ್ತಡದಲ್ಲಿದೆ. ಮುಖ್ಯವಾಗಿ ಮಹದಾಯಿ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಗಳು, ಪ್ರವಾಹ ಸಂಬಂಧಿಸಿದ ಹಾನಿ ಕುರಿತು ಸರ್ಕಾರ ಚರ್ಚಿಸಲಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. 

ಉತ್ತರ ಕರ್ನಾಟಕದ ಸಮಸ್ಯೆ, ಅಭಿವೃದ್ಧಿಗಳಿಗೆ ಸಂಬಂಧಪಟ್ಟಂತೆ ಸದನದಲ್ಲಿ ಎರಡು ದಿನ ವಿಶೇಷವಾಗಿ ಚರ್ಚಿಸಲಾಗುವುದು ಎಂದು ವಿಧಾನಸಭಾಧ್ಯಕ್ಷರು ಹೇಳಿದ್ದು, ಇದನ್ನು ಇಂದು ಬೆಳಗ್ಗೆ ಕಲಾಪ ಆರಂಭವಾಗುವುದಕ್ಕೆ ಮುನ್ನ 10.30ಕ್ಕೆ ನಡೆಯುವ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದಿದ್ದಾರೆ.

ಈ ಬಾರಿಯ ಕಲಾಪ ಸುಗಮವಾಗಿ ಸಾಗಬೇಕೆಂದು ಅರ್ಥವತ್ತಾದ ಚರ್ಚೆಗಳು ಸದನದಲ್ಲಿ ನಡೆಯಬೇಕೆಂದು ನಾನು ಬಯಸುತ್ತೇನೆ. ಜಿಲ್ಲಾಡಳಿತ ಕಲಾಪ ಸುಗಮವಾಗಿ ಸಾಗಲು ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಯಾವುದೇ ಧರ್ಮದ ವಿರುದ್ಧವಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ಅಧಿವೇಶನದ ಕಲಾಪ ವೇಳೆ ಇಡೀ ಕರ್ನಾಟಕಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಸ್ಪೀಕರ್ ಹೇಳಿದ್ದಾರೆ. ಕಲಾಪಕ್ಕೆ ಬರುವ ಸದನ ಸದಸ್ಯರು, ಸಿಬ್ಬಂದಿಗಳಿಗೆ ಬೆಳಗಾವಿಯ ವಿವಿಧ ಹೊಟೇಲ್, ರೆಸಾರ್ಟ್, ಅತಿಥಿ ಗೃಹ ಇತ್ಯಾದಿ ಕಡೆಗಳಲ್ಲಿ 2,500ಕ್ಕೂ ಹೆಚ್ಚು ಕೊಠಡಿಗಳನ್ನು ದಾಖಲು ಮಾಡಲಾಗಿದೆ. 

ಇಂದು ಮುಖ್ಯಮಂತ್ರಿಗಳು ಅಯೋಧ್ಯೆಗೆ: ಇಂದು ಬೆಳಗ್ಗೆ ಕಲಾಪಕ್ಕೆ ಹಾಜರಾಗಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಪರಾಹ್ನ 2 ಗಂಟೆಗೆ ವಿಶೇಷ ವಿಮಾನದಲ್ಲಿ ಅಯೋಧ್ಯೆಗೆ ಬೆಳಗಾವಿ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಲಿದ್ದಾರೆ. ನಂತರ ಬುಧವಾರ ಸಾಯಂಕಾಲದವರೆಗೆ ಅವರು ಸದನ ಕಲಾಪದಲ್ಲಿ ಹಾಜರಿರುವುದಿಲ್ಲ. 

ರೈತರಿಂದ ಪ್ರತಿಭಟನೆ: ಇಂದು ಸುವರ್ಣ ವಿಧಾನ ಸೌಧದಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ ರೈತರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. 

ರಾಜ್ಯ ಸರ್ಕಾರ ಎಪಿಎಂಸಿ ಮತ್ತು ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕೆಂದು ರೈತರ ಆಗ್ರಹವಾಗಿದೆ. ರಾಜ್ಯ ಸರ್ಕಾರ ಮಸೂದೆಗಳನ್ನು ಹಿಂತೆಗೆದುಕೊಳ್ಳುವವರೆಗೆ ರೈತರು ಬೆಳಗಾವಿಯಲ್ಲಿ ಪ್ರತಿಭಟನೆ ಮುಂದುವರಿಸಲಿದ್ದಾರೆ. ಇದು ರೈತರಿಗೆ ವಿರುದ್ಧವಾದ ಕಾಯ್ದೆ. ನಾವು ಕರ್ನಾಟಕದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮಹಾಪಂಚಾಯತ್ ನಡೆಸಿ ಸಚಿವರುಗಳಿಗೆ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ. ಸರ್ಕಾರ ರೈತರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.



Read more