Karnataka news paper

’60 ರಿಂದ 70 ರನ್ ಕಡಿಮೆಯಾಯಿತು’ 2ನೇ ಟೆಸ್ಟ್‌ ಸೋಲಿಗೆ ಕಾರಣ ತಿಳಿಸಿದ ರಾಹುಲ್‌!


ಹೈಲೈಟ್ಸ್‌:

  • ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್‌ ಸರಣಿ.
  • ಎರಡನೇ ಟೆಸ್ಟ್‌ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಸೋತ ಟೀಮ್‌ ಇಂಡಿಯಾ.
  • ನಮಗೆ 60 ರಿಂದ 70 ರನ್‌ ಕಡಿಮೆಯಾಗಿದೆ ಎಂದು ಹೇಳಿದ ಕೆ.ಎಲ್‌ ರಾಹುಲ್‌.

ಜೊಹಾನ್ಸ್‌ಬರ್ಗ್‌:ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ನಮಗೆ 60 ರಿಂದ 70 ರನ್‌ ಕಡಿಮೆಯಾಯಿತು. ಈ ಕಾರಣದಿಂದಲೇ ಹಿನ್ನಡೆ ಅನುಭವಿಸಬೇಕಾಯಿತು ಎಂದು ಭಾರತ ತಂಡದ ಹಂಗಾಮಿ ನಾಯಕ ಕೆ.ಎಲ್‌ ರಾಹುಲ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ದಿ ವಾಂಡರರ್ಸ್‌ ಸ್ಟೇಡಿಯಂನಲ್ಲಿ ಗುರುವಾರ ಮುಕ್ತಾಯವಾಗಿದ್ದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ನಾಯಕ ಡೀನ್‌ ಎಲ್ಗರ್‌ (96*) ಅವರ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ, 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆತಿಥೇಯರು 1-1 ಸಮಬಲ ಮಾಡಿಕೊಂಡರು.

ನಿಯಮಿತ ನಾಯಕ ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದ ಕೆ.ಎಲ್‌ ರಾಹುಲ್ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದರು. ಆದರೆ, ಹರಿಣಗಳ ಮಾರಕ ದಾಳಿಯನ್ನು ದೀರ್ಘಕಾಲ ಮೆಟ್ಟಿ ನಿಲ್ಲುವಲ್ಲಿ ವಿಫಲವಾಗಿ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 202 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು.

ಎಲ್ಗರ್‌ ಬೊಂಬಾಟ್‌ ಆಟ: ದಕ್ಷಿಣ ಆಫ್ರಿಕಾಗೆ 7 ವಿಕೆಟ್‌ ಭರ್ಜರಿ ಗೆಲುವು!

ನಂತರ, ಪ್ರಥಮ ಇನಿಂಗ್ಸ್‌ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ 229 ರನ್‌ ಗಳಿಸುವ ಮೂಲಕ 27 ರನ್‌ ಮುನ್ನಡೆ ಪಡೆದಿತ್ತು. ಬಳಿಕ ದ್ವಿತೀಯ ಇನಿಂಗ್ಸ್‌ನಲ್ಲಿ ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ ಹಾಗೂ ಹನುಮ ವಿಹಾರಿ ಅವರ ಬ್ಯಾಟಿಂಗ್ ಸಹಾಯದಿಂದ ಭಾರತ ತಂಡ ಎದುರಾಳಿ ತಂಡಕ್ಕೆ 240 ರನ್‌ ಸ್ಪರ್ಧಾತ್ಮಕ ಗುರಿ ನೀಡಿತ್ತು. ಬಳಿಕ ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ 67.4 ಓವರ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿತು.

ಪಂದ್ಯದ ಬಳಿಕ ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಕೆ.ಎಲ್‌ ರಾಹುಲ್‌, “ಪಂದ್ಯದಲ್ಲಿ ಟಾಸ್‌ ಗೆದ್ದ ನಾವು ಪ್ರಥಮ ಇನಿಂಗ್ಸ್‌ನಲ್ಲಿ ಇನ್ನಷ್ಟು ದೀರ್ಘವಾಗಿ ಬ್ಯಾಟಿಂಗ್‌ ಪ್ರದರ್ಶನ ತೋರಬೇಕಾಗಿತ್ತು. ಆ ಮೂಲಕ 60 ರಿಂದ 70 ರನ್‌ ಹೆಚ್ಚಿನದಾಗಿ ಗಳಿಸಬೇಕಾಗಿತ್ತು. ಈ ಕಾರಣದಿಂದಲೇ ನಾವು ಹಿನ್ನಡೆ ಅನುಭವಿಸಿದ್ದೇವೆ,” ಎಂದು ಹೇಳಿದರು.

‘ಶೌರ್ಯವಲ್ಲ, ಇದು ಮೂರ್ಖತನ’: ಪಂತ್‌ ವಿರುದ್ಧ ಗಂಭೀರ್‌ ಗುಡುಗು!

ದಕ್ಷಿಣ ಆಫ್ರಿಕಾ ಪ್ರಥಮ ಇನಿಂಗ್ಸ್‌ನಲ್ಲಿ 7 ವಿಕೆಟ್‌ ಹಾಗೂ ಭಾರತದ ದ್ವಿತೀಯ ಇನಿಂಗ್ಸ್‌ನಲ್ಲಿ 28 ರನ್‌ ಗಳಿಸಿದ್ದ ಶಾರ್ದುಲ್‌ ಠಾಕೂರ್‌ ಅವರನ್ನು ನಾಯಕ ಕೆ.ಎಲ್‌ ರಾಹುಲ್‌ ಮುಕ್ತಕಂಠದಿಂದ ಗುಣಗಾನ ಮಾಡಿದರು.

“ಶಾರ್ದುಲ್‌ ಠಾಕೂರ್‌ ಪಾಲಿಗೆ ಅದ್ಭುತ ಟೆಸ್ಟ್‌ ಪಂದ್ಯ ಇದಾಗಿದೆ. ಅವರು ಆಡಿರುವ ಕೆಲವೇ ಪಂದ್ಯಗಳಾಗಿದ್ದರೂ ಪಂದ್ಯದ ಗೆಲುವಿನಲ್ಲಿ ಗಾಢವಾದ ಪ್ರಭಾವವನ್ನು ಬೀರಿದ್ದಾರೆ. ಬ್ಯಾಟಿಂಗ್‌ನಲ್ಲಿ ಅವರು ನೀಡಿದ ಕೊಡುಗೆ ನಿಜಕ್ಕೂ ತಂಡಕ್ಕೆ ನಿರ್ಣಾಯಕವಾಗಿತ್ತು. ಮುಂದಿನ ಪಂದ್ಯದಲ್ಲಿ ಇನ್ನಷ್ಟು ಮಂದಿ ಪುಟಿದೇಳುವ ಮೂಲಕ ತಂಡದ ಗೆಲುವಿಗೆ ಕೈ ಜೋಡಿಸಲಿದ್ದಾರೆಂಬ ನಿರೀಕ್ಷೆ ಇದೆ,” ಎಂದರು.

3ನೇ ಟೆಸ್ಟ್‌ಗೆ ರಹಾನೆ ಬದಲು ಈತನಿಗೆ ಚಾನ್ಸ್ ನೀಡಿ ಎಂದ ಗಂಭೀರ್‌!

“ಪ್ರತಿಯೊಂದು ಪಂದ್ಯಾಡಿದಾಗಲೂ ನಾವು ಗೆಲ್ಲಬೇಕೆಂಬ ಭಾವನೆಯೊಂದಿಗೆ ಕಣಕ್ಕೆ ಇಳಿಯುತ್ತೇವೆ. ಈ ರೀತಿಯ ಒಂದು ತಂಡ ನಮ್ಮದಾಗಿದೆ, ನಾವು ಕಠಿಣ ಪರಿಶ್ರಮ ಪಡುತ್ತಿದ್ದು ಮೈದಾನದಲ್ಲಿ ಗರಿಷ್ಠ ಪ್ರಯತ್ನವನ್ನು ಹಾಕುತ್ತೇವೆ. ಹೌದು, ಸೋತಿದ್ದರಿಂದ ಸ್ವಲ್ಪ ನಿರಾಶೆಯಾಗಿದೆ ಆದರೆ ಇದರ ಶ್ರೇಯ ದಕ್ಷಿಣ ಆಫ್ರಿಕಾ ತಂಡಕ್ಕೆ ಸಲ್ಲಬೇಕು,” ಎಂದು ಆರಂಭಿಕ ಬ್ಯಾಟ್ಸ್‌ಮನ್‌ ತಿಳಿಸಿದರು.

“ದಕ್ಷಿಣ ಆಫ್ರಿಕಾ ತಂಡ ನಿಜವಾಗಿಯೂ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದೆ. ಮೈದಾನದಲ್ಲಿ ಎಲ್ಲವನ್ನೂ ಪಡೆಯಲು ನಾವು ಪ್ರಯತ್ನಿಸುತ್ತೇವೆ. ಇನ್ನಷ್ಟು ವಿಶೇಷತೆಯಿಂದ ಏನಾದರೂ ಮಾಡಬೇಕಾಗಿತ್ತೆಂದು ನಮಗೆ ಸೋಲಿನ ಬಳಿಕ ಅನಿಸಿದೆ. 122 ರನ್ ಗಳಿಸುವುದು ಸುಲಭವಾಗಿರಲಿಲ್ಲ. ಪಿಚ್‌ ಸಾಕಷ್ಟು ಏರಿಳಿತಗಳನ್ನು ಹೊಂದಿತ್ತು. ಆದರೆ, ಎದುರಾಳಿ ಬ್ಯಾಟ್ಸ್‌ಮನ್‌ಗಳು ಸಾಕಷ್ಟು ಬದ್ದತೆಯಿಂದ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು,” ಎಂದು ಕೆ.ಎಲ್‌ ರಾಹುಲ್‌ ಆತಿಥೇಯರನ್ನು ಶ್ಲಾಘಿಸಿದರು.

ಭಾರತ Vs ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್‌ ಸ್ಕೋರ್‌ಕಾರ್ಡ್



Read more

[wpas_products keywords=”deal of the day gym”]