ಹೈಲೈಟ್ಸ್:
- ಮೂರನೇ ಅಲೆಗೆ ‘ಮನೆ ಮದ್ದು’: ಆಸ್ಪತ್ರೆ ದಾಖಲು ಕ್ಷೀಣ
- ಶೇ.81ರಷ್ಟು ಸೋಂಕಿತರು ಹೋಂ ಐಸೋಲೇಷನ್
- ಬೆಂಗಳೂರು ಪ್ರಯಾಣಿಕರ ಬಗ್ಗೆ ಎಚ್ಚರ ಅಗತ್ಯ
ಕೋವಿಡ್ ಮೂರನೇ ಅಲೆ ಈ ಹಿಂದಿನಂತೆ ಭೀಕರವಾಗಿರುವುದಿಲ್ಲ ಎನ್ನುವ ತಜ್ಞರ ಅಭಿಪ್ರಾಯಕ್ಕೆ ಪೂರಕ ಎಂಬಂತೆ ಸೋಂಕಿತರ ಆಸ್ಪತ್ರೆ ದಾಖಲು ವಿರಳವಾಗಿದ್ದು, ಮನೆ ಕ್ವಾರಂಟೈನ್‌ನಲ್ಲಿ ಔಷಧ ಪಡೆಯುತ್ತಿದ್ದಾರೆ. ಮೈಸೂರಿನಲ್ಲಿಯೂ ಆಸ್ಪತ್ರೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮನೆಯಲ್ಲಿಯೇ ಇದ್ದಾರೆ.
ಎರಡನೇ ಅಲೆಯ ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ಅಪಾಯಕಾರಿಯಾಗಿದ್ದು, ಉಸಿರಾಟದ ತೊಂದರೆಯಿಂದಾಗಿ ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಇದರಿಂದಾಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಹಾಗೂ ಆಮ್ಲಜನಕದ ಕೊರತೆ ಕಂಡು ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಹಲವು ಕಟ್ಟಡಗಳು, ಹೋಟೆಲ್‌ಗಳನ್ನು ಕೂಡ ಕೋವಿಡ್ ಕೇರ್ ಸೆಂಟರ್‌ಗಳಾಗಿ ಪರಿವರ್ತಿಸಲಾಗಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕಿಂಗ್ ದಂಧೆಯೇ ನಡೆಯಿತು. ಆದರೆ, ಮೂರನೇ ಅಲೆಯಲ್ಲಿ ಇಂತಹ ಪರಿಸ್ಥಿತಿ ಕಂಡು ಬರಲಿಕ್ಕಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.
ಆಸ್ಪತ್ರೆಗೆ ದಾಖಲು ಕ್ಷೀಣ!
ಸದ್ಯಕ್ಕೆ ಬೆಂಗಳೂರು, ಮೈಸೂರು ಸೇರಿದಂತೆ ಕೋವಿಡ್ ಸೋಂಕಿತರು ಆಸ್ಪತ್ರೆಯಲ್ಲಿ ದಾಖಲಾಗಿರುವುದು ಬೆರಳೆಣಿಕೆ ಮಾತ್ರ. ಬುಧವಾರದವರೆಗೆ ಬೆಂಗಳೂರಿನಲ್ಲಿ ಜನವರಿ 1 ರಿಂದ 8432 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡರೆ ಇವರಲ್ಲಿ ಆಸ್ಪತ್ರೆಗೆ ದಾಖಲಾಗಿರುವವರ ಸಂಖ್ಯೆ ಕೇವಲ 349 ಮಾತ್ರ. ಅಂದರೆ, ಶೇ.4.14 ರಷ್ಟು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿಯೇ ವಾರ್‌ರೂಂನ ಕಟ್ಟೆಚ್ಚರದ ಕಣ್ಗಾವಲಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇಶದಲ್ಲಿ 1700ಕ್ಕೆ ತಲುಪಿದ ಒಮಿಕ್ರಾನ್ ಸೋಂಕಿತರ ಸಂಖ್ಯೆ : ಒಂದೇ ದಿನದಲ್ಲಿ 33,750 ಕೊರೊನಾ ಕೇಸ್
ಅದೇ ರೀತಿ ಮೈಸೂರಿನಲ್ಲಿ ಜನವರಿ 1 ರಿಂದ 170 ಮಂದಿಯಲ್ಲಿ ಹೊಸ ಪ್ರಕರಣ ಪತ್ತೆಯಾಗಿದೆ. ಇವರಲ್ಲಿ 137 ಮಂದಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಕೇವಲ 33 ಸೋಂಕಿತರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶೇ.81 ರಷ್ಟು ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಒಟ್ಟಾರೆಯಾಗಿ 640 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಮೂರನೇ ಅಲೆ ಅಪಾಯಕಾರಿಯಾಗಿಲ್ಲ ಎಂದು ಹೇಳಬಹುದಾಗಿದೆ.
ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್. ಪ್ರಸಾದ್ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದ ಮಾಹಿತಿಯಂತೆ ”ಹೆಚ್ಚು ಮಂದಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದು. ಜಿಲ್ಲೆಯಲ್ಲಿ ವಾರ್‌ರೂಂ ಕಾರ್ಯನಿರ್ವಹಿಸುತ್ತಿದ್ದು, ಅವರು ನಿತ್ಯ ಹೋಂ ಐಸೋಲೇಷನ್‌ನಲ್ಲಿಇರುವವರ ಸಂಪರ್ಕದಲ್ಲಿದ್ದಾರೆ. ಅವರಿಗೆ ಸೂಕ್ತ ವೈದ್ಯಕೀಯ ಸಲಹೆಗೆ ಏರ್ಪಾಡು ಮಾಡಲಾಗಿದೆ.” ಎಂದು ಹೇಳುತ್ತಾರೆ.
ಬೆಂಗಳೂರು ಪ್ರಯಾಣಿಕರೇ ಗಮನಿಸಿ
ಬೆಂಗಳೂರಿನಲ್ಲಿ ಹೆಚ್ಚು ಪ್ರಕರಣ ವರದಿಯಾಗುತ್ತಿವೆ. ಕಳೆದ ಐದು ದಿನಗಳಲ್ಲಿ ಸೋಂಕಿತರ ಸಂಖ್ಯೆ 8432. ಸದ್ಯಕ್ಕೆ ಮೈಸೂರು ಸೇಫ್ ಜೋನ್‌ನಲ್ಲಿದೆ. ಮೈಸೂರಿನ ಪಾಸಿಟಿವಿಟಿ ರೇಟ್ ಶೇ. 0.92ನಲ್ಲಿದೆ. ಆದರೆ, ಆತಂಕ ಇರುವುದೇ ಬೆಂಗಳೂರಿನ ನಂಟು ಹೊಂದಿರುವವರಿಗೆ. ನಿತ್ಯ ಉದ್ಯೋಗ, ವ್ಯವಹಾರ ಸೇರಿದಂತೆ ಸಾಕಷ್ಟು ಮಂದಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾರೆ. ಅದೇ ರೀತಿ ಬೆಂಗಳೂರಿನಿಂದಲೂ ಮೈಸೂರಿಗೆ ಬರುತ್ತಿದ್ದಾರೆ. ಪರಸ್ಪರ ಹೋಗಿ ಬರುವವರ ಸಂಖ್ಯೆ ದಿನಕ್ಕೆ ಎರಡು ಸಾವಿರಕ್ಕೂ ಹೆಚ್ಚು. ಇವರಿಂದಾಗಿ ಸೋಂಕು ಹರಡುವ ಅಪಾಯವಿದ್ದು, ಈ ಕುರಿತು ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.
ಹಾಸನದ ಎಸ್ಟೇಟ್‌ಗಳಲ್ಲಿ ಕಾರ್ಯನಿರ್ವಹಿಸುವ ಪಶ್ಚಿಮ ಬಂಗಾಳದ 23 ಕಾರ್ಮಿಕರಿಗೆ ಸೋಂಕು
ನಿಲ್ದಾಣಗಳಲ್ಲಿ ಪರೀಕ್ಷೆ
ಸದ್ಯ ನಿತ್ಯ 7 ಸಾವಿರ ಮಂದಿಗೆ ಕೋವಿಡ್ ಪರೀಕ್ಷೆಯ ಗುರಿ ಹೊಂದಲಾಗಿದೆ. ಬುಧವಾರ 6386 ಮಂದಿಯ ಸ್ಯಾಂಪಲ್ ಪಡೆಯಲಾಗಿದೆ. ಬೆಂಗಳೂರಿನಲ್ಲಿ ಹೆಚ್ಚು ಪ್ರಕರಣಗಳು ಇರುವುದರಿಂದ ಬಸ್‌ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲು ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿದೆ.
ದಿನಾಂಕ ಹೊಸ ಪ್ರಕರಣ
ಜ.1 29
ಜ.2 20
ಜ.3 14
ಜ.4 48
ಜ.5 50
ತಾಲೂಕು ಸಕ್ರಿಯ ಪ್ರಕರಣ
ಮೈಸೂರು ನಗರ 170
ಮೈಸೂರು ತಾಲೂಕು 20
ಎಚ್.ಡಿ.ಕೋಟೆ 1
ಹುಣಸೂರು 2
ಕೆ.ಆರ್.ನಗರ 7
ನಂಜನಗೂಡು 7
ಪಿರಿಯಾಪಟ್ಟಣ 3
ತಿ.ನರಸೀಪುರ 5
—
ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ 0.9 ಇದ್ದು, ಸದ್ಯಕ್ಕೆ ಮೂರನೇ ಅಲೆ ಇಲ್ಲ. ಇರುವ ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದ್ದು, ಹೆಚ್ಚು ಮಂದಿ ಹೋಂ ಐಸೋಲೇಷನ್‌ಲ್ಲಿದ್ದಾರೆ. ವಾರ್‌ರೂಂನಿಂದ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ವ್ಯವಸ್ಥೆ ಮಾಡಲಾಗಿದೆ.
-ಡಾ.ಕೆ.ಎಚ್.ಪ್ರಸಾದ್, ಜಿಲ್ಲಾಆರೋಗ್ಯಾಧಿಕಾರಿ.
Read more
[wpas_products keywords=”deal of the day sale today offer all”]