ಹೈಲೈಟ್ಸ್:
- ವೈವಾಹಿಕ ಬದುಕಿಗೆ ನಾಂದಿ ಹಾಡಿದ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್
- ಮೆಹೆಂದಿ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್
- ಮೆಹೆಂದಿ ಶಾಸ್ತ್ರಕ್ಕೆ ನವರತ್ನಗಳನ್ನೊಳಗೊಂಡ ಆಭರಣಗಳನ್ನು ಧರಿಸಿದ್ದ ಕತ್ರಿನಾ ಕೈಫ್
ಬಳಿಕ ಹಳದಿ ಸಮಾರಂಭದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಇದೀಗ ಮೆಹೆಂದಿ ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮದರಂಗಿಯ ರಂಗಿನಲ್ಲಿ ಮದುಮಗಳು ಕತ್ರಿನಾ ಕೈಫ್ ಸಂಭ್ರಮ ಪಡುತ್ತಿರುವ ಹಾಗೂ ವರ ವಿಕ್ಕಿ ಕೌಶಲ್ ಕುಣಿದು ಕುಪ್ಪಳಿಸುತ್ತಿರುವ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
ತಮ್ಮ ಮೆಹೆಂದಿ ಸಮಾರಂಭಕ್ಕೆ ಖ್ಯಾತ ಸೆಲೆಬ್ರಿಟಿ ಫ್ಯಾಶನ್ ಡಿಸೈನರ್ ಸಬ್ಯಸಾಚಿ ಮುಖರ್ಜಿ ಡಿಸೈನ್ ಮಾಡಿದ್ದ ಉಡುಪುಗಳನ್ನೇ ವರ ವಿಕ್ಕಿ ಕೌಶಲ್ ಹಾಗೂ ವಧು ಕತ್ರಿನಾ ಕೈಫ್ ಧರಿಸಿದ್ದರು. ಬಹು ಬಣ್ಣದ ಮಟ್ಕಾ ರೇಷ್ಮೆಯಲ್ಲಿ ಸಿದ್ಧಪಡಿಸಿದ್ದ ಲೆಹೆಂಗಾ ಹಾಗೂ ಹಳದಿ ಬಣ್ಣದ ದುಪಟ್ಟಾವನ್ನು ಮದುಮಗಳು ಕತ್ರಿನಾ ಕೈಫ್ ತೊಟ್ಟಿದ್ದರು. ಮಹೆಂದಿ ಸಮಾರಂಭಕ್ಕೆ ಪಚ್ಚೆ, ವಜ್ರ, ಮುತ್ತುಗಳು, ರೂಬಿ ಸೇರಿದಂತೆ ನವರತ್ನಗಳನ್ನೊಳಗೊಂಡ ಸಬ್ಯಸಾಚಿಯ ಹೆರಿಟೇಜ್ ಆಭರಣಗಳನ್ನು ವಧು ಕತ್ರಿನಾ ಕೈಫ್ ಧರಿಸಿದ್ದರು. ಇನ್ನೂ ವರ ವಿಕ್ಕಿ ಕೌಶಲ್ ಕೂಡ ಹಸಿರು ಬಣ್ಣದ ಕುರ್ತಾ ಧರಿಸಿದ್ದರು.
17 ಲಕ್ಷ ರೂಪಾಯಿ ಮೌಲ್ಯದ ಲೆಹೆಂಗಾ
ರಾಜಸ್ಥಾನದ ಐತಿಹಾಸಿಕ ಬಾರ್ವಾರ ಕೋಟೆಯಲ್ಲಿ ಮದುವೆಯಾದ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್.. ಮದುವೆಯ ಉಡುಪಿನಲ್ಲಿ ಥೇಟ್ ರಾಜ ರಾಣಿಯಂತೆಯೇ ಕಾಣುತ್ತಿದ್ದರು. ಪಂಜಾಬಿ ಸಂಪ್ರದಾಯದಂತೆ ವಿವಾಹ ಮಹೋತ್ಸವ ನಡೆದಿದ್ದು, ಮದುವೆಗೆ ಕೆಂಪು ಬಣ್ಣದ ಸಬ್ಯಸಾಚಿ ಡಿಸೈನರ್ ಲೆಹೆಂಗಾವನ್ನು ಕತ್ರಿನಾ ಕೈಫ್ ಧರಿಸಿದ್ದರು. ಇನ್ನೂ, ವರ ವಿಕ್ಕಿ ಕೌಶಲ್ ಐವೆರಿ ಹಾಗೂ ಗೋಲ್ಡ್ ಬಣ್ಣದ ಶೇರ್ವಾನಿ ತೊಟ್ಟಿದ್ದರು. ವರದಿಗಳ ಪ್ರಕಾರ, ಮದುವೆಗೆ ವಧು ಕತ್ರಿನಾ ಕೈಫ್ ತೊಟ್ಟಿದ್ದ ಕೆಂಪು ಬಣ್ಣದ ಸಬ್ಯಸಾಚಿ ಲೆಹೆಂಗಾದ ಬೆಲೆ ಬರೋಬ್ಬರಿ 17 ಲಕ್ಷ ರೂಪಾಯಿ.
ಇನ್ನೂ, ಮದುವೆಗೆ ವಧು ಕತ್ರಿನಾ ಕೈಫ್ ವಜ್ರಖಚಿತ ನೀಲಮಣಿಯ ಉಂಗುರವನ್ನು ಧರಿಸಿದ್ದರು. ಅದೇ ಕತ್ರಿನಾ ಕೈಫ್ ಅವರ ಎಂಗೇಜ್‌ಮೆಂಟ್ ರಿಂಗ್ ಎನ್ನಲಾಗಿದೆ. ನೀಲಮಣಿ ಮತ್ತು ವಜ್ರಗಳನ್ನು ಒಳಗೊಂಡಿರುವ ಕತ್ರಿನಾ ಕೈಫ್ ತೊಟ್ಟಿದ್ದ ಆ ಉಂಗುರ ಪ್ರಿನ್ಸೆಸ್ ಡಯಾನಾ ಅವರ ಐಕಾನಿಕ್ ನೀಲಮಣಿ ಉಂಗುರದಿಂದ ಪ್ರೇರಿತವಾಗಿದೆ. ಇದರ ಬೆಲೆ ಬರೋಬ್ಬರಿ 7.41 ಲಕ್ಷ ರೂಪಾಯಿ ಎಂದು ವರದಿಯಾಗಿದೆ.