Karnataka news paper

ವೀಕೆಂಡ್‌ ಕರ್ಫ್ಯೂಗೆ ವ್ಯಾಪಕ ಪ್ರತಿರೋಧ..! ಸಂಪುಟ ಸಭೆಯಲ್ಲಿ ಹಲವು ಸಚಿವರಿಂದಲೂ ಅಪಸ್ವರ..!


ಸಚಿವರಿಂದಲೇ ಅಪಸ್ವರ..!

ಇಡೀ ರಾಜ್ಯದಲ್ಲಿ ವಾರಾಂತ್ಯ ಕರ್ಫ್ಯೂ ಹೇರಿರುವುದಕ್ಕೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಸಚಿವರಿಂದಲೇ ಆಕ್ಷೇಪ ವ್ಯಕ್ತವಾಗಿದೆ.

ಪ್ರಮುಖವಾಗಿ ಕೆ. ಎಸ್‌. ಈಶ್ವರಪ್ಪ ಅವರು ಧ್ವನಿ ಎತ್ತಿದರೆ ಉಳಿದ ಸಚಿವರೂ ತಮ್ಮ ಭಾಗದಲ್ಲಿ ಕರ್ಫ್ಯೂ ಅವಶ್ಯಕತೆ ಇರಲಿಲ್ಲ ಎಂದು ಧ್ವನಿಗೂಡಿಸಿದರು. ರಾಜ್ಯಾದ್ಯಂತ ನಿರ್ಬಂಧ ಕ್ರಮಗಳ ಜಾರಿ ಅಗತ್ಯವಿದೆಯೇ? ಸೋಂಕು ಇಲ್ಲದ / ಕಡಿಮೆಯಿರುವ ಪ್ರದೇಶಗಳಲ್ಲಿ ನಿರ್ಬಂಧ ಕ್ರಮಗಳು ಬೇಕೆ? ಪಾಸಿಟಿವಿಟಿ ದರ ಕಡಿಮೆಯಿರುವ ಕಡೆಯೂ ನಿರ್ಬಂಧ ಏಕೆ ಎಂದು ಕೆಲವರು ಪ್ರಶ್ನೆ ಎತ್ತಿದರು.

​ಜಿಲ್ಲಾವಾರು ತೀರ್ಮಾನಿಸಲು ಮನವಿ

ಹಿಂದೆ ಸೋಂಕಿನ ಸಂಖ್ಯೆಗೆ ಅನುಗುಣವಾಗಿ ನಿರ್ಬಂಧ ವಿಧಿಸಲಾಗಿತ್ತು. ಸೋಂಕು ಕಡಿಮೆ ಇರುವ ಜಿಲ್ಲೆಗಳಲ್ಲಿ ಇತರೆ ಚಟುವಟಿಕೆಗೆ ಅವಕಾಶ ನೀಡಲಾಗಿತ್ತು. ಆದರೆ ಮೂರನೆ ಅಲೆ ಸಂದರ್ಭದಲ್ಲಿ ಇತರೆ ಜಿಲ್ಲೆಗಳಲ್ಲಿರುವ ಪರಿಸ್ಥಿತಿಯನ್ನು ಪರಿಗಣಿಸದೆ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂಬ ಆಕ್ಷೇಪಗಳು ಕೇಳಿ ಬಂದಿವೆ.

‘ಸೋಂಕು ಹರಡುವುದನ್ನು ಬ್ರೇಕ್‌ ಮಾಡಲು ಸರಕಾರ ಈಗ ಅನುಸರಿಸುತ್ತಿರುವ ನಿಯಮದಿಂದ ಯಾವುದೇ ಪ್ರಯೋಜನವಿಲ್ಲ. ಕಠಿಣ ನಿಯಮಗಳನ್ನು ಜಾರಿಗೆ ತಂದು ಜನದಟ್ಟಣೆ ಇಲ್ಲದಂತೆ ವಹಿವಾಟು ಸಹಜವಾಗಿ ನಡೆಯಲು ಅನುಮತಿ ನೀಡಲಿ. ತೀರ್ಮಾನ ಮರು ಪರಿಶೀಲನೆ ಮಾಡಲಿ’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಐ. ಎಸ್‌. ಪ್ರಸಾದ್‌ ಆಗ್ರಹಿಸಿದ್ದಾರೆ.

‘ಕರ್ಫ್ಯೂ ಜಾರಿ ಮಾಡುವ ಬದಲು ವಾರಾಂತ್ಯದಲ್ಲಿ ವ್ಯಾಪಾರ ವಹಿವಾಟಿಗೆ ಸಮಯ ನಿಗದಿಪಡಿಸಲಿ. ಸಗಟು ವ್ಯಾಪಾರಕ್ಕೆ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆ ಹಾಗೂ ರಿಟೇಲ್‌ ವ್ಯಾಪಾರಕ್ಕೆ ಬೆಳಗ್ಗೆ 9 ರಿಂದ ಸಂಜೆ 7 ಗಂಟೆವರೆಗೆ ಅವಕಾಶ ಮಾಡಿಕೊಡಲಿ. ಜನದಟ್ಟಣೆ ಇಲ್ಲದಂತೆ ವಹಿವಾಟು ನಡೆಸಲು ನಿಯಮ ಜಾರಿಗೆ ತರಲಿ’ ಎಂದು ಫೆಡರೇಷನ್‌ ಆಫ್‌ ಕರ್ನಾಟಕ ಟ್ರೇಡರ್ಸ್ ಅಸೋಸಿಯೇಷನ್‌ ಅಧ್ಯಕ್ಷ ಪ್ರಕಾಶ್‌ ಮಂಡೋತ್‌ ಅಭಿಪ್ರಾಯಪಟ್ಟಿದ್ಧಾರೆ.

ಶನಿವಾರ ಎಲ್ಲಾ ಶಾಲಾ, ಕಾಲೇಜಿಗೆ ರಜೆ

ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ ರಾಜ್ಯದ ಎಲ್ಲಾ ಸರಕಾರಿ, ಅನುದಾನಿತ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಕಾರ ರಜೆ ಘೋಷಿಸಿದೆ. ಪ್ರಾಥಮಿಕ, ಪ್ರೌಢ ಶಾಲೆ, ಪಿಯು, ಪದವಿ, ಎಲ್ಲ ವೃತ್ತಿಪರ ಕಾಲೇಜುಗಳಿಗೂ ಇದು ಅನ್ವಯ ಆಗಲಿದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 10ನೇ ತರಗತಿವರೆಗೆ ಕಲಿಸುವ ಎಲ್ಲಾ ಕೋಚಿಂಗ್‌ ಕೇಂದ್ರಗಳನ್ನು ಜನವರಿ 19ರವರೆಗೆ ಮುಚ್ಚಲು ಸೂಚಿಸಲಾಗಿದೆ.

‘ನಿರ್ಬಂಧಗಳಿಗೆ ಸಂಬಂಧಿಸಿ ಹಲವು ಸಂಘ ಸಂಸ್ಥೆಗಳು ತಮ್ಮ ಅನಿಸಿಕೆ, ಬೇಡಿಕೆಯನ್ನು ತಿಳಿಸಿವೆ. ಸಂಪುಟ ಸಭೆಯಲ್ಲೂ ಚರ್ಚೆಯಾಗಿದೆ. ಮುಂದಿನ ದಿನಗಳಲ್ಲಿ ಕೋವಿಡ್‌ ತೀವ್ರತೆ ಆಧರಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

‘ಇನ್ನು 4- 5 ದಿನ ಕಳೆಯಲಿ. ಜನವರಿ 14, 15ರ ಹೊತ್ತಿಗೆ ಮತ್ತೊಮ್ಮೆ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಚರ್ಚಿಸಿ ಯಾವೆಲ್ಲಾ ಪ್ರದೇಶಗಳಲ್ಲಿ ಆತಂಕದ ಸ್ಥಿತಿಯಿಲ್ಲವೋ ಅಲ್ಲಿ ಸಾಧ್ಯವಾದಷ್ಟು ವಿನಾಯಿತಿ ನೀಡಲು ಸಂಪುಟ ಸಭೆಯಲ್ಲಿ ಚಿಂತಿಸಲಾಗಿದೆ’ ಎಂದು ಕಾನೂನು ಸಚಿವ ಜೆ. ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.

ಮದ್ಯ ಮಾರಾಟಕ್ಕೂ ಬ್ರೇಕ್‌

ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಗ್ಗೆವರೆಗೆ ಮದ್ಯ ಮಾರಾಟಕ್ಕೂ ಬ್ರೇಕ್‌ ಬೀಳಲಿದೆ. ಅಗತ್ಯ ಸಾಮಗ್ರಿಗಳ ಖರೀದಿಗೆ ಅವಕಾಶವಿರುವಂತೆ ಮದ್ಯ ಮಾರಾಟಕ್ಕೂ ವಿನಾಯಿತಿ ದೊರೆಯಬಹುದು ಎಂಬ ಉದ್ಯಮದ ನಿರೀಕ್ಷೆ ಹುಸಿಯಾಗಿದೆ. ಈ ನಿರ್ಧಾರ ಮತ್ತು ವೀಕೆಂಡ್‌ ಕರ್ಫ್ಯೂವನ್ನೇ ಹಿಂದಕ್ಕೆ ಪಡೆಯುವಂತೆ ಉದ್ಯಮದಿಂದ ಆಗ್ರಹ ಕೇಳಿಬಂದಿದೆ.



Read more

[wpas_products keywords=”deal of the day sale today offer all”]