Source : Online Desk
ಅಮೆರಿಕ: ಅಮೆರಿಕದ ಕನಿಷ್ಠ 5 ರಾಜ್ಯಗಳಲ್ಲಿ ಚಂಡಮಾರುತದ ಹೊಡೆತಕ್ಕೆ ಸಿಲುಕಿ 80ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಕೆಂಟುಕಿ ರಾಜ್ಯದಲ್ಲಿಯೇ 70 ಜನರು ಸಾವಿಗೀಡಾಗಿದ್ದಾರೆಂದು ಅಂದಾಜಿಸಲಾಗಿದೆ. ಇನ್ನೂ ಹಲವು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮೇ ಫಿಲ್ಡ್ ನಲ್ಲಿ ವಿನಾಶಕಾರಿ ಚಂಡಮಾರುತ: ಮೇ ಫೀಲ್ಡ್ ನಲ್ಲಿ ಚಂಡಮಾರುತದಿಂದ ಕ್ಯಾಂಡಲ್ ಫ್ಯಾಕ್ಟರಿ ಕುಸಿದು 18 ಮಂದು ದುರ್ಮರಣಕ್ಕೀಡಾದರೆ, ಇಲಿನಾಯ್ಸ್ ರಾಜ್ಯದಲ್ಲಿ ಅಮೆಜಾನ್ ಕಂಪನಿಯ ಗೋದಾಮು ಕುಸಿದಿದ್ದು, ಸುಮಾರು 100 ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದಾರೆ. ಇದಲ್ಲದೇ ಅರ್ಕಾನ್ಸಾಸ್ ನಲ್ಲಿ ನರ್ಸಿಂಗ್ ಹೋಂ ಕಟ್ಟಡ ಕುಸಿದು ಬಿದಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ವಿನಾಶಕಾರಿ ಚಂಡುಮಾರುತ ಕುರಿತಂತೆ ಪ್ರತಿಕ್ರಿಯಿಸಿರುವ ಕೆಂಟುಕಿ ಗವರ್ನರ್ ಆಂಡಿ ಬೆಶಿಯರ್, ರಾಜ್ಯದ ಇತಿಹಾಸದಲ್ಲಿ ಅತ್ಯಂತ ಭಯಾನಕ ಚಂಡಮಾರುತ ಇದಾಗಿದೆ. ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ರಕ್ಷಣಾ ತಂಡಗಳು ಹಾನಿ ಸಂಭವಿಸಿದ ಪ್ರದೇಶದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಸಾವಿನ ಸಂಖ್ಯೆ 100 ದಾಟಬಹುದು ಎಂದಿರುವ ಅವರು, ಕೆಂಟುಕಿಯಲ್ಲಿ 2 ಮಿಲಿಯನ್ ಗಿಂತಲೂ ಹೆಚ್ಚು ಮನೆಗಳು ವಿದ್ಯುತ್ ಸಂಪರ್ಕ ಕಳೆದುಕೊಂಡಿವೆ ಅಂತಾ ತಿಳಿಸಿದ್ದಾರೆ.
ಅರ್ಕಾನ್ಸಾಸ್ ರಾಜ್ಯದಲ್ಲಿನ ನರ್ಸಿಂಗ್ ಹೋಮ್ ಕೂಡಾ ಚಂಡಮಾರುತದ ಹೊಡೆತಕ್ಕೆ ಸಿಲುಕಿದ್ದರಿಂದ ಇಬ್ಬರು ಸಾವಿಗೀಡಾಗಿದ್ದಾರೆ. ಇನ್ನು ಇಲಿನಾಯ್ಸ್ ನ ಎಡ್ವರ್ಡ್ ವಿಲ್ಲೆ ಬಳಿಯ ಅಮೆಜಾನ್ ಗೋದಾಮು ಕುಸಿದು ಬಿದಿದ್ದು, ಗಾಯಾಳುಗಳ ನಿಖರ ಸಂಖ್ಯೆ ಇನ್ನೂ ಬಹಿರಂಗಗೊಂಡಿಲ್ಲ. ಆದರೆ, ವ್ಯಕ್ತಿಯೊಬ್ಬ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಮಿಸೌರಿ ಪ್ರದೇಶದಲ್ಲಿ ಪ್ರತಿ ಗಂಟೆಗೆ 112 ಎಂಪಿಹೆಚ್ ವೇಗದಲ್ಲಿ ಗಾಳಿ ಬೀಸಿರುವ ಬಗ್ಗೆ ವರದಿಯಾಗಿದ್ದು, ಸೇಂಟ್ ಚಾರ್ಲ್ಸ್ ಕೌಂಟಿಯ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮೆರಿಕದಲ್ಲಿನ ಚಂಡಮಾರುತದ ಬಗ್ಗೆ ಅಧ್ಯಕ್ಷ ಬಿಡೆನ್ ಟ್ವೀಟ್ ಮಾಡಿ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ತಮ್ಮ ಆಡಳಿತಾಧಿಕಾರಿಗಳಿಗೆ ಸಂಕಷ್ಟದಲ್ಲಿ ಸಿಲುಕಿರುವವರ ನೆರವಿಗೆ ಧಾವಿಸುವಂತೆ ಆದೇಶಿಸಿದ್ದಾರೆ.