ಹೈಲೈಟ್ಸ್:
- ಅನಿರೀಕ್ಷಿತ ಮಳೆ, ನಿರೀಕ್ಷಿತ ಅನಾರೋಗ್ಯ; ಮತ್ತೆ ವಕ್ಕರಿಸಿದ ಡೆಂಗೆ, ಚಿಕ್ಯೂನ್ ಗುನ್ಯಾ
- ಶೀತ ವಾತಾವರಣದಿಂದ ಸಹಜವಾಗಿ ಕೀಟಜನ್ಯ ಸಾಂಕ್ರಾಮಿಕ ರೋಗ ಹಾವಳಿ ಲಗ್ಗೆ ಇಟ್ಟಿದ್ದರೂ ಪತ್ತೆ ಹಾಗೂ ನಿಯಂತ್ರಣ ಸವಾಲು
- ಕೋವಿಡ್ ಲಕ್ಷಣ ಸಾಮ್ಯತೆ, ತಪಾಸಣೆಗೆ ಹಿಂದೇಟು; ಎರಡು ವರ್ಷ ಕಾಣದ ಮೆದುಳು ಜ್ವರ ಪತ್ತೆ
ಧಾರವಾಡ: ಹವಾಮಾನ ವೈಪರೀತ್ಯದಿಂದ ಸುರಿದ ಅನಿರೀಕ್ಷಿತ ಮಳೆ ಹಾಗೂ ಶೀತ ವಾತಾವರಣದಿಂದ ಸಹಜವಾಗಿ ಕೀಟಜನ್ಯ ಸಾಂಕ್ರಾಮಿಕ ರೋಗ ಹಾವಳಿ ಲಗ್ಗೆ ಇಟ್ಟಿದ್ದರೂ ಪತ್ತೆ ಹಾಗೂ ನಿಯಂತ್ರಣ ಸವಾಲಾಗಿ ಪರಿಣಮಿಸಿದೆ. ಸಾಂಕ್ರಾಮಿಕ ರೋಗ ಹಾಗೂ ಕೋವಿಡ್-19 ಲಕ್ಷಣಗಳಲ್ಲಿ ಕೆಲ ಸಾಮ್ಯತೆ ಇರುವ ಹಿನ್ನೆಲೆಯಲ್ಲಿ ಜನರು ತಪಾಸಣೆಗೆ ಹಿಂದೇಟು ಹಾಕುತ್ತಿರುವುದು ತಜ್ಞರನ್ನು ಇಕ್ಕಟಿಗೆ ಸಿಲುಕಿಸಿದೆ.
ಮಳೆ, ಶೀತ ವಾತಾವರಣವು ಸೊಳ್ಳೆಗಳ ಉತ್ಪತ್ತಿಗೆ ಪೂರಕವಾಗಿದೆ. ಇದರಿಂದ ಡೆಂಗೆ, ಚಿಕ್ಯೂನ್ ಗುನ್ಯಾ ಕಾಣಿಸಿಕೊಂಡು ಜನರಿಗೆ ಜ್ವರ, ಮೈ-ಕೈ ನೋವು ಕಂಡು ಬಂದಾಗ ಕೋವಿಡ್ ಆತಂಕದಿಂದ ಆರೋಗ್ಯ ಪರೀಕ್ಷೆಗೆ ಹಿಂದೇಟು ಹಾಕುತ್ತಿದ್ದಾರೆ. ಇನ್ನು ಕೆಲವರು ಕೋವಿಡ್ ತಪಾಸಣೆ ಮಾಡಿಸಿ ನೆಗಟಿವ್ ಬಂದರೂ ಮುಂಜಾಗ್ರತೆ ವಹಿಸದೆ ನಿರ್ಲಕ್ಷ್ಯ ತಾಳುತ್ತಿದ್ದಾರೆ ಎಂಬ ಅಭಿಪ್ರಾಯ ಇರುವುದರಿಂದ ಸಾಂಕ್ರಾಮಿಕ ರೋಗಗಳ ಪತ್ತೆ, ನಿಯಂತ್ರಣಕ್ಕೆ ಹಿನ್ನಡೆಯಾಗುತ್ತಿದೆ.
ಧಾರವಾಡ ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಜನವರಿ ಒಂದರಿಂದ ಜೂನ್ ಅಂತ್ಯಕ್ಕೆ ಆರೋಗ್ಯ ಇಲಾಖೆ ನೀಡಿರುವ ಅಂಕಿ-ಅಂಶಗಳ ಪ್ರಕಾರ, ಕೀಟಜನ್ಯ ಸಾಂಕ್ರಾಮಿಕ ರೋಗಗಳ ಹಾವಳಿ ಪ್ರಮಾಣ ತಗ್ಗಿತ್ತು. ಆದರೆ ಜೂನ್ ನಂತರ ಮಳೆ ಹಾಗೂ ಶೀತದಿಂದ ರೋಗಗಳ ಹಾವಳಿ ಹೆಚ್ಚಾಗುತ್ತ ಸಾಗಿದ್ದು ಆರೋಗ್ಯ ತಜ್ಞರನ್ನು ನಿದ್ದೆಗಡಿಸಿದೆ.
ಅದರಲ್ಲೂ ಡೆಂಗೆ, ಚಿಕ್ಯೂನ್ ಗುನ್ಯಾ ಹಾವಳಿ ಹೆಚ್ಚಾಗಿದೆ. ಈ ನಡುವೆ, ಎರಡು ವರ್ಷ ಇರದಿದ್ದ ಮೆದುಳು ಜ್ವರ ಈ ವರ್ಷ ನವೆಂಬರ್ ಅಂತ್ಯಕ್ಕೆ ನಾಲ್ವರಲ್ಲಿ ಕಾಣಿಸಿಕೊಂಡಿದೆ. ಮಲೇರಿಯಾ ಭೀತಿಯೂ ಹೆಚ್ಚಾಗಿದೆ.
ಧಾರವಾಡ ಜಿಲ್ಲೆ ಚಿತ್ರಣ
ವರ್ಷ-ಡೆಂಗೆಚಿಕ್ಯೂನ್ ಗುನ್ಯಾ
- 2018- 112- 85
- 2019- 250- 121
- 2020 -36- 17
- 2021 -29- 5
(ಜನವರಿ-ಜೂನ್)
2021- 119 -62
ಕೀಟನಾಶಕ ಅಂತರ್ಗತ ಸೊಳ್ಳೆ ಪರದೆ
ಕೀಟಜನ್ಯ ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ಪಡೆಯಲು ಆರೋಗ್ಯ ಇಲಾಖೆ ಕೀಟನಾಶಕ ಅಂತರ್ಗತ ಸೊಳ್ಳೆ ಪರದೆ ಪರಿಚಯಿಸಲಾಗಿತ್ತು. ಈ ಪರದೆಗೆ ಬಳಸಿರುವ ದಾರದಲ್ಲಿಯೇ ಕೀಟಜನ್ಯಗಳನ್ನು ನಾಶ ಮಾಡುವ, ದೂರವಿಡುವ ಔಷಧಿಯ ಗುಣವಿದೆ. ಧಾರವಾಡ ಜಿಲ್ಲೆಗೆ ಬಂದಿದ್ದ 1800 ಸೊಳ್ಳೆ ಪರದೆಗಳನ್ನು ಧಾರವಾಡ, ಕಲಘಟಗಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಹಾಗೂ ಹುಬ್ಬಳ್ಳಿಯ ಗೋಕುಲ್ ರಸ್ತೆಯ ಮತ್ತು ಬೇಲೂರು ಕೈಗಾರಿಕಾ ಪ್ರದೇಶದಲ್ಲಿನ ಅನ್ಯ ರಾಜ್ಯ ವಲಸಿಗ ಕಾರ್ಮಿಕರಿಗೆ ವಿತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನಿರೀಕ್ಷಿತ ಮಳೆ ಮುಂದುವರಿಕೆಯಿಂದ ಸೊಳ್ಳೆಗಳ ಸಂತತಿ ಹೆಚ್ಚುತ್ತಿದೆ. ಸಹಜವಾಗಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಸೊಳ್ಳೆಗಳ ನಿವಾರಣೆಗಾಗಿ ವ್ಯಾಪಕ ಕ್ರಮ ಕೈಗೊಳ್ಳಲಾಗಿದೆ.
ಮಂಜುನಾಥ ಎಸ್., ಧಾರವಾಡ ಜಿಲ್ಲಾಮಲೇರಿಯಾ ನಿಯಂತ್ರಣಾಧಿಕಾರ