ಹೈಲೈಟ್ಸ್:
- ಕೇಂದ್ರ ಸರಕಾರದ ಪೈಪ್ ಗ್ಯಾಸ್ ಯೋಜನೆಯು ಮೈಸೂರಿಗೂ ಮಂಜೂರು; ಕಾಮಗಾರಿ ಆರಂಭ
- ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಕನಸಿನ ಯೋಜನೆ
- ಎಜಿ ಅಂಡ್ ಪಿ ಪ್ರಥಮ್ ಇಂಡಿಯಾ ಕಂಪನಿಯು 3.75 ಲಕ್ಷ ಮನೆಗಳಿಗೆ ಅಡುಗೆ ಅನಿಲ ಪೂರೈಸುವ ಗುರಿ ಹೊಂದಿದೆ
ಮೈಸೂರು: ಕೇಂದ್ರ ಸರಕಾರದ ಪೈಪ್ ಗ್ಯಾಸ್ ಯೋಜನೆಯು ಸಾಂಸ್ಕೃತಿಕ ನಗರಿ ಮೈಸೂರಿಗೂ ಮಂಜೂರಾಗಿದ್ದು, ಮನೆಮನೆಗೆ ಪೈಪ್ ಲೈನ್ ಮುಖಾಂತರ ಅಡುಗೆ ಅನಿಲ ಪೂರೈಸುವ ಯೋಜನೆಯ ಕಾಮಗಾರಿ ಆರಂಭವಾಗಿದೆ.
ಇದು ದೇಶದ ಅತಿದೊಡ್ಡ ಯೋಜನೆಯಾಗಿದ್ದು, ಬೆಂಗಳೂರು ಹಾಗೂ ಮಂಗಳೂರಿನ ನಂತರ ಇದೀಗ ಮೈಸೂರಿನಲ್ಲೂ 16,917 ಚದರ ಕಿ.ಮೀ. ವ್ಯಾಪ್ತಿಯನ್ನು ಪೈಪ್‌ಲೈನ್ ಅನಿಲ ಸಂಪರ್ಕ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಕನಸಿನ ಯೋಜನೆ ಇದಾಗಿದ್ದು, ನಗರದ ಪ್ರತಿ ಮನೆಗಳಿಗೆ ನೈಸರ್ಗಿಕ ಅಡುಗೆ ಅನಿಲವನ್ನು ಪೈಪ್ ಲೈನ್ ಮುಖಾಂತರ ಪೂರೈಸಲಾಗುತ್ತದೆ. ಎಜಿ ಅಂಡ್ ಪಿ ಪ್ರಥಮ್ ಇಂಡಿಯಾ ಕಂಪನಿಯು 3.75 ಲಕ್ಷ ಮನೆಗಳಿಗೆ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಪೂರೈಸುವ ಗುರಿ ಹೊಂದಿದೆ. 2023ರ ವೇಳೆಗೆ 40 ಸಾವಿರಕ್ಕೂ ಹೆಚ್ಚು ಕುಟುಂಬಗಳ ಮನೆಗಳಿಗೆ ನೈಸರ್ಗಿಕ ಅನಿಲವನ್ನು ಪೂರೈಸುವ ಮತ್ತು ಅದನ್ನು ಹಂತ ಹಂತವಾಗಿ ನಗರದ ಉಳಿದ ಭಾಗಕ್ಕೂ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.
ಹೆಬ್ಬಾಳದಲ್ಲಿ ಸ್ಥಾವರ
ಮೈಸೂರಿನಿಂದ ಮಂಡ್ಯ ಮತ್ತು ಚಾಮರಾಜನಗರಕ್ಕೂ ನೈಸರ್ಗಿಕ ಅನಿಲ ಪೂರೈಸಬೇಕಾಗಿರುವ ಹಿನ್ನೆಲೆಯಲ್ಲಿ ನಗರದ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ಅನಿಲ ಸರಬರಾಜು ಸ್ಥಾವರವನ್ನು ಸ್ಥಾಪಿಸಲಾಗಿದೆ. ಇದಕ್ಕಾಗಿ ಬೆಂಗಳೂರಿನ ಬಿಡದಿ ಮಾರ್ಗವಾಗಿ 104 ಕಿ.ಮೀ ಉದ್ದದ ನೈಸರ್ಗಿಕ ಅನಿಲ ಪೈಪ್‌ಲೈನ್ ಮೈಸೂರು ಹೆಬ್ಬಾಳು ಕೈಗಾರಿಕಾ ಪ್ರದೇಶದ ಸ್ಥಾವರ ತಲುಪಿದೆ. ಮುಂದೆ ಹೆಬ್ಬಾಳು ನೈಸರ್ಗಿಕ ಅನಿಲ ಸ್ಥಾವರದಿಂದ ರಿಂಗ್ ರಸ್ತೆ ಮಾರ್ಗವಾಗಿ ಕೊಲಂಬಿಯಾ ಏಷಿಯಾ ಆಸ್ಪತ್ರೆವರೆಗೆ 7 ಕಿ.ಮೀ ಹಾಗೂ ಸ್ಥಾವರದಿಂದ ರಿಂಗ್ ರಸ್ತೆ ಮಾರ್ಗವಾಗಿ ಬಂಡಿಪಾಳ್ಯದವರೆಗೂ 19 ಕಿ.ಮೀ ವರೆಗೂ ಈ ನೈಸರ್ಗಿಕ ಅನಿಲದ ಪೈಪ್‌ಲೈನ್ ವಿಸ್ತರಿಸಲಾಗುತ್ತದೆ.
ಕಾಮಗಾರಿ ಎಲ್ಲಿ?
ಸದ್ಯ ಮೈಸೂರು ಹೆಬ್ಬಾಳಿನ ಲಕ್ಷ್ಮೀಕಾಂತನಗರ, ಮಯೂರ ವೃತ್ತ, ಕಾವೇರಿ ವೃತ್ತದಲ್ಲಿನ ಸುಮಾರು 40ಕ್ಕೂ ಹೆಚ್ಚು ಮನೆಗಳಿಗೆ ಈಗಾಗಲೇ ಪೈಪ್‌ಲೈನ್, ಮೀಟರ್‌ಗಳನ್ನು ಅಳವಡಿಸಲಾಗಿದೆ. ಈ ಭಾಗದಲ್ಲಿ 6000 ಸಾವಿರ ಮನೆಗಳಿದ್ದು, ಮಾರ್ಚ್ ಅಂತ್ಯದ ವೇಳೆಗೆ ಈ ಪ್ರಕ್ರಿಯೆ ಮುಗಿಯುತ್ತದೆ.
ಉಕ್ಕಿನ ಪೈಪ್ ಅಳವಡಿಕೆ?
ಯಾವುದೇ ಸಂದರ್ಭದಲ್ಲೂ ಅನಿಲ ಸೋರಿಕೆಯಾಗದಂತೆ ಸುಮಾರು 1.2 ಮೀಟರ್‌ನಷ್ಟು ಭೂಮಿ ಅಗೆದು ಉಕ್ಕಿನ ಹಾಗೂ ಎಂಡಿಪಿ (ಮೀಡಿಯಂ ಡೆನ್ಸಿಟಿ ಪಾಲಿಥಲೀನ್) ಪೈಪ್ ಅಳವಡಿಸಲಾಗುತ್ತದೆ. ಅಲ್ಲದೆ, ನಿತ್ಯ ಅನಿಲ ಪೂರೈಕೆಯಾಗುವ ಪೈಪ್‌ಲೈನ್ ಮೇಲೆ ನಿಗಾ ವಹಿಸಲಾಗುತ್ತಿದೆ. ಒಂದು ವೇಳೆ ಅನಾಹುತ ಸಂಭವಿಸಿದಲ್ಲಿ ವಾಲ್ವ್ಗಳ ಮೂಲಕ ಅನಿಲ ಪೂರೈಕೆಯಾಗುವುದನ್ನು ನಿಲ್ಲಿಸಬಹುದು.
ಏನೆಲ್ಲಾ ಪ್ರಯೋಜನ?
ಹೊಸ ಮಾದರಿಯ ಈ ಪೈಪ್ ಲೈನ್ ಜೋಡಣೆಯಿಂದ ಹಲವು ಅನುಕೂಲಗಳಿವೆ. ಮೊದಲಿಗೆ ಸುರಕ್ಷತೆ ದೃಷ್ಟಿಯಿಂದ ಇದು ಒಳ್ಳೆಯ ಯೋಜನೆ. ಅಲ್ಲದೆ, ಯಾವುದೇ ಅಡ್ಡಿ ಇಲ್ಲದೆ ಗ್ರಾಹಕರಿಗೆ ನಿರಂತರವಾಗಿ ಅನಿಲ ಪೂರೈಕೆ ಆಗುತ್ತದೆ. ಬೆಲೆ ಕೂಡ ಕಡಿಮೆ ಇದ್ದು, ಅನಿಲ ವ್ಯರ್ಥವಾಗುವುದಿಲ್ಲ, ಸಿಲಿಂಡರ್ ಬುಕ್ ಮಾಡುವ ಅಗತ್ಯವಿಲ್ಲ. ಪರಿಸರಕ್ಕೆ ಹಾನಿಕರವಲ್ಲ, ಬಳಕೆಯೂ ಸುಲಭ. ಮೇಲಿನ ಮಹಡಿಗಳಿಗೆ ಕೊಂಡೊಯ್ಯುವ ಸಂಕಟವೂ ಇರುವುದಿಲ್ಲ
ನೋಂದಣಿ ಹೇಗೆ?
- ಮನೆಗಳಿಗೆ ಭೇಟಿ ನೀಡುವ ಯೋಜನೆ ಸದಸ್ಯರಿಗೆ ಆಧಾರ್ ಮತ್ತು ಇತ್ತೀಚಿನ ವಿದ್ಯುತ್ ಬಿಲ್ ಪ್ರತಿ ನೀಡಬೇಕು.
- ಪೈಪ್‌ಲೈನ್ ಹಾಗೂ ಮೀಟರ್ ಅಳವಡಿಕೆ ಉಚಿತವಾಗಿರುತ್ತದೆ.
- 6 ಸಾವಿರ ರೂ. ಠೇವಣಿ ಇಡಬೇಕು.
- ಅನಿಲ ಪೂರೈಕೆ ವೇಳೆಗೆ ಸೇವಾ ಶುಲ್ಕವಾಗಿ 2 ಸಾವಿರ ರೂ. ಪಡೆದು ಪೂರೈಕೆ ಮಾಡಲಾಗುತ್ತದೆ. ಬಾಕಿ 1 ಸಾವಿರ ರೂ. ಹಿಂದಿರುಗಿಸಲಾಗುತ್ತದೆ.
- ಪ್ರತಿ ತಿಂಗಳು ಸಾಮಾರು 700 ರೂ. ಪಾವತಿಸಬೇಕಾಗುತ್ತದೆ.
ಯೋಜನೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಮುಂದಿನ ವರ್ಷ ಏಪ್ರಿಲ್ ಒಳಗೆ ಮುಗಿಸುವ ಗುರಿ ಇದೆ. ಮೀಟರ್ ಅಳವಡಿಸುವ ಮುನ್ನ ಉತ್ತಮವಾದ ಗಾಳಿ, ಬೆಳಕು ಹೊಂದಿರುವ ಸ್ಥಳವನ್ನು ಆಯ್ಕೆ ಮಾಡಿ ಮನೆಯ ಹೊರ ಭಾಗದಲ್ಲಿ ಅಳವಡಿಸಲಾಗುವುದು. ಸುರಕ್ಷತೆಗೆ ಪ್ರತಿ 5 ಕಿ.ಮೀ.ಗೆ ವಿಶೇಷ ತಂಡದ ಕಚೇರಿಯನ್ನು ಸ್ಥಾಪಿಸಲಾಗುವುದು.
ಪ್ರತಾಪ ಸಿಂಹ, ಸಂಸದ