Online Desk
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಗೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರದಿಂದ ಗಂಭೀರ ಮತ್ತು ಉದ್ದೇಶಪೂರ್ವಕ ಲೋಪ ಆಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿ ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠ, ಸುಪ್ರೀಂ ಕೋರ್ಟ್ನಲ್ಲಿ ಪಂಜಾಬ್ ಸರ್ಕಾರದ ಸ್ಥಾಯಿ ವಕೀಲರಿಗೆ ಅರ್ಜಿಯ ಪ್ರತಿಯನ್ನು ಸಲ್ಲಿಸಲು ಲಾಯರ್ಸ್ ವಾಯ್ಸ್ ಗೆ ತಿಳಿಸಿದ್ದು, ಶುಕ್ರವಾರ ವಿಚಾರಣೆಗೆ ಬರಲಿದೆ. ಹಿರಿಯ ವಕೀಲ ಮಣಿಂದರ್ ಸಿಂಗ್ ಅವರು ತುರ್ತು ವಿಚಾರಣೆಯನ್ನು ಕೋರಿ ನ್ಯಾಯಮೂರ್ತಿ ರಮಣ ಅವರ ಪೀಠದ ಮುಂದೆ ವಿಷಯವನ್ನು ಪ್ರಸ್ತಾಪಿಸಿದ ನಂತರ ಸಿಜೆಐ ಈ ನಿರ್ದೇಶನ ನೀಡಿದ್ದಾರೆ.
ಇದನ್ನು ಓದಿ: ಪ್ರಧಾನಿ ಮೋದಿ ಭೇಟಿ ವೇಳೆ ಭದ್ರತಾ ಲೋಪ: ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಿದ ಪಂಜಾಬ್ ಸರ್ಕಾರ
“ಪಂಜಾಬ್ನಲ್ಲಿ ಪ್ರಧಾನ ಮಂತ್ರಿಯ ಭದ್ರತೆಯಲ್ಲಿ ಗಂಭೀರ ಲೋಪಕ್ಕೆ ಸಂಬಂಧಿಸಿದಂತೆ ತುರ್ತು ವಿಷಯ ಪ್ರಸ್ತಾಪಿಸುತ್ತಿದ್ದೇನೆ” ಎಂದು ಸಿಂಗ್ ಅವರು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು. ಇದಕ್ಕೆ ಸಿಜೆಐ, “ನೀವು ನಮ್ಮಿಂದ ಏನನ್ನು ನಿರೀಕ್ಷಿಸುತ್ತಿದ್ದೀರಿ?” ಎಂದು ಸಿಂಗ್ ಅವರನ್ನು ಪ್ರಶ್ನಿಸಿದರು.
“ಪ್ರಧಾನಿ ಭದ್ರತೆ ಲೋಪದ ಜವಾಬ್ದಾರಿಯನ್ನು ಸರಿಪಡಿಸಬೇಕು. ಇಂತಹ ಘಟನೆ ಮರುಕಳಿಸಬಾರದು ಎಂಬುದು ನಮ್ಮ ಅಪೇಕ್ಷೆ. ಬಂದೋಬಸ್ತ್ ಕುರಿತು ವೃತ್ತಿಪರ ಮತ್ತು ಪರಿಣಾಮಕಾರಿ ತನಿಖೆಯ ಅಗತ್ಯವಿದೆ. ಪ್ರಧಾನಿ ಭೇಟಿ ವೇಳೆ ಪಂಜಾಬ್ ಪೋಲೀಸರ ಚಲನವಲನ ಮತ್ತು ನಿಯೋಜನೆಯ ಸಂಪೂರ್ಣ ದಾಖಲೆಗಳನ್ನು ಬಟಿಂಡಾದ ಜಿಲ್ಲಾ ನ್ಯಾಯಾಧೀಶರು ಕಸ್ಟಡಿಗೆ ತೆಗೆದುಕೊಳ್ಳಲು ನಿಮ್ಮ ಮೇಲ್ವಿಚಾರಣೆಯಲ್ಲಿ ಸೂಕ್ತವಾಗಿರುತ್ತದೆ ಎಂದು ಸಿಂಗ್ ಪೀಠವನ್ನು ಒತ್ತಾಯಿಸಿದರು.
ಜಿಲ್ಲಾ ನ್ಯಾಯಾಧೀಶರು ದಾಖಲೆಗಳನ್ನು ಸಲ್ಲಿಸಿದ ನಂತರ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸಬಹುದು. ದಯವಿಟ್ಟು ಇಂದೇ ಆದೇಶವನ್ನು ರವಾನಿಸುವುದನ್ನು ಪರಿಗಣಿಸಿ ಎಂದು ಹಿರಿಯ ವಕೀಲರು ಮನವಿ ಮಾಡಿದರು. ಈ ವೇಳೆ ಸಿಜೆಐ ಅವರು ತಮ್ಮ ಅರ್ಜಿಯ ಪ್ರತಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದರು. ಅಲ್ಲದೆ, ನಾಳೆ ಈ ಅರ್ಜಿಯ ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ಈ ಪಿಐಎಲ್ ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು ಮತ್ತು ಕೇಂದ್ರ ಸರ್ಕಾರದ ಕಕ್ಷಿದಾರರನ್ನು ಪ್ರಕರಣಕ್ಕೆ ಒಳಪಡಿಸಿದೆ.
ಬುಧವಾರ ರಾಜ್ಯಕ್ಕೆ ಪ್ರಧಾನಿ ಮೋದಿಯವರ ಭೇಟಿಗೆ ಸುರಕ್ಷಿತ ಮಾರ್ಗವನ್ನು ಖಾತ್ರಿಪಡಿಸುವಲ್ಲಿ ರಾಜ್ಯ ಸರ್ಕಾರ, ಅದರ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಯ ಕಡೆಯಿಂದ “ಗಂಭೀರ ಮತ್ತು ಉದ್ದೇಶಪೂರ್ವಕ ಲೋಪವಾಗಿದೆ ಎಂದು ಲಾಯರ್ ವಾಯ್ಸ್ ಸುಪ್ರೀಂಕೋರ್ಟ್ ಗೆ ತಿಳಿಸಿದೆ.
“ಪ್ರತಿವಾದಿ ನಂ. 2 (ಮುಖ್ಯ ಕಾರ್ಯದರ್ಶಿ) ಮತ್ತು ಪ್ರತಿವಾದಿ ನಂ.3 (ಡಿಜಿಪಿ) ರವರಿಗೆ ಹಾಗೂ ಪ್ರತಿವಾದಿ ಸಂಖ್ಯೆ. 4 (ಕೇಂದ್ರ) ಇಲಾಖಾ ಕ್ರಮ ಕೈಗೊಳ್ಳಿ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
Read more
[wpas_products keywords=”deal of the day”]