Karnataka news paper

ಪುತ್ತೂರಿನ ಕಾರಂತ ಸ್ಮಾರಕ ಕೆಡವಿದ್ದೇ ಬಿಇಒ ಕಚೇರಿ ಕಟ್ಟಲು..? ಪ್ರಕರಣ ಇತ್ಯರ್ಥಕ್ಕೆ ಮುನ್ನವೇ ಹೊಸ ಯೋಜನೆ..!


ಹೈಲೈಟ್ಸ್‌:

  • ಸಾಹಿತಿ ಕೆ. ಶಿವರಾಮ ಕಾರಂತರ ಕಾರ್ಯಕ್ಷೇತ್ರವಾಗಿದ್ದ ಸ್ಥಳ
  • 40ರ ದಶಕದಲ್ಲಿ ರಂಗಭೂಮಿ ಚಟುವಟಿಕೆಯ ತಾಣವಾಗಿ ಅಭಿವೃದ್ಧಿಪಡಿಸಲಾಗಿತ್ತು
  • ನೆಲ್ಲಿಕಟ್ಟೆ ಶಾಲೆಯ ಕಟ್ಟಡದಲ್ಲಿ ಗ್ರೀಕ್‌ ಮಾದರಿಯ ರಂಗ ವೇದಿಕೆಯೂ ಇತ್ತು

ಪುತ್ತೂರು (ದಕ್ಷಿಣ ಕನ್ನಡ): ನಗರ ಮಧ್ಯದ ನೆಲ್ಲಿ ಕಟ್ಟೆಯಲ್ಲಿ ಪಾರಂಪರಿಕ ತಾಣವಾಗಿ ಕಂಗೊಳಿಸುತ್ತಿದ್ದ 156 ವರ್ಷ ಹಳೆಯ ಸರಕಾರಿ ಶಾಲೆಯ ಕಟ್ಟಡವನ್ನು ಮಧ್ಯ ರಾತ್ರಿ ಏಕಾಏಕಿ ಧ್ವಂಸ ಮಾಡಿದ ಪ್ರಕರಣ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಆಗಲೇ ಅದೇ ಜಮೀನಿನಲ್ಲಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಹೊಸ ಕಟ್ಟಲು ಮುಂದಡಿ ಇಡಲಾಗಿದೆ.

ಈ ಬೆಳವಣಿಗೆ ಇದೀಗ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಾಚೀನ ಪಾರಂಪರಿಕ ಕಟ್ಟಡವನ್ನು ಉದ್ದೇಶಪೂರ್ವಕವಾಗಿ ಕೆಡವಲಾಯಿತೇ? ಬಿಇಒ ಕಚೇರಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಚಾರಿತ್ರಿಕ ಕಟ್ಟಡ ಧ್ವಂಸ ಮಾಡಲಾಯಿತೇ ಎಂಬ ಪ್ರಶ್ನೆ ಕೇಳಲಾರಂಭಿಸಿವೆ.

ಸಾಹಿತಿ ಕೆ. ಶಿವರಾಮ ಕಾರಂತರು 40ರ ದಶಕದಲ್ಲಿ ರಂಗಭೂಮಿ ಚಟುವಟಿಕೆಯ ತಾಣವಾಗಿ ಅಭಿವೃದ್ಧಿಪಡಿಸಿದ್ದ ನೆಲ್ಲಿಕಟ್ಟೆ ಶಾಲೆಯ ಕಟ್ಟಡದಲ್ಲಿ ಗ್ರೀಕ್‌ ಮಾದರಿಯ ರಂಗ ವೇದಿಕೆಯೂ ಇದ್ದು, ಡಾ. ಕಾರಂತರ ಹೆಸರಿನಲ್ಲಿ ಇಲ್ಲೊಂದು ಭವ್ಯ ಸ್ಮಾರಕ ನಿರ್ಮಿಸುವ ಪ್ರಸ್ತಾವನೆಗಳು, ಆಗ್ರಹಗಳೂ ಇದ್ದವು. ಇದಾವುದನ್ನೂ ಗಮನಕ್ಕೆ ತಂದುಕೊಳ್ಳದೆ ಎಸ್‌ಡಿಎಂಸಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಡಿಸೆಂಬರ್‌ 12ರಂದು ರಾತ್ರಿ ಜೆಸಿಬಿ ಮೂಲಕ ಕೆಡವಲಾಗಿತ್ತು. ಎಸ್‌ಡಿಎಂಸಿಯನ್ನು ಮುಂದಿಟ್ಟುಕೊಂಡು ವ್ಯವಸ್ಥಿತವಾಗಿ ಕಟ್ಟಡ ಕೆಡವಲಾಯಿತೇ ಎಂಬ ಪ್ರಶ್ನೆಗಳು ಈಗ ಕೇಳಲಾರಂಭಿಸಿವೆ.

ಪುತ್ತೂರಿನಲ್ಲಿ 156 ವರ್ಷ ಹಿಂದಿನ ಸರಕಾರಿ ಶಾಲಾ ಕಟ್ಟಡ ರಾತೋರಾತ್ರಿ ನೆಲಸಮ; ಪ್ರಕರಣಕ್ಕೆ ಹೊಸ ತಿರುವು!
ಜನವರಿ 5ರಂದು ಶಾಸಕ ಮಠಂದೂರು ಇದೇ ಸ್ಥಳಕ್ಕೆ ತೆರಳಿ ನೂತನ ಬಿಇಒ ಕಚೇರಿ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದ್ದಾರೆ. ನಗರಸಭೆ ಅಧ್ಯಕ್ಷ ಜೀವಂಧರ ಜೈನ್‌, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌, ಲೋಕೋಪಯೊಗಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ನಗರದ ಸೈನಿಕ ಭವನ ರಸ್ತೆಯ ಪಕ್ಕದಲ್ಲಿರುವ ಬಿಇಒ ಕಚೇರಿ 85 ವರ್ಷಗಳಷ್ಟು ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿದೆ. ಹೊಸ ಬಿಇಒ ಕಚೇರಿ ನಿರ್ಮಾಣಕ್ಕೆ 1 ಕೋಟಿ ರೂ. ಮಂಜೂರಾಗಿದೆ. ಹಾಲಿ ಸ್ಥಳದಲ್ಲೇ ಹೊಸ ಕಟ್ಟಡ ಕಟ್ಟಲು ಸ್ಥಳಾವಕಾಶ ಇಲ್ಲದಿರುವ ಕಾರಣ ವಿಶಾಲ ಸ್ಥಳದಲ್ಲಿ ನಿರ್ಮಿಸುವ ಉದ್ದೇಶವಿದೆ ಎಂದು ಶಾಸಕ ಸಂಜೀವ ಮಠಂದೂರು ಬುಧವಾರ ನೆಲ್ಲಿಕಟ್ಟೆ ಸರಕಾರಿ ಶಾಲೆಯ ಆವರಣದಲ್ಲಿ ಹೇಳಿಕೆ ನೀಡಿದ್ದಾರೆ.

ಪಾರಂಪರಿಕ ಕಟ್ಟಡ ನೆಲಸಮಗೊಂಡ ಬೆನ್ನಲ್ಲೇ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.ತನಿಖೆಗೆ ಆದೇಶ ನೀಡಿದ್ದರು. ಡಿಡಿಪಿಐ ಸ್ಥಳಕ್ಕೆ ಭೇಟಿ ನೀಡಿ, ಬಿಇಒ ಉಪಸ್ಥಿತಿಯಲ್ಲೇ ತನಿಖೆ ಮಾಡಿದ್ದರು. ಎಲ್ಲ ನಿಯಮಾವಳಿ ಮೀರಿ ಕಟ್ಟಡ ಧ್ವಂಸ ಮಾಡಲಾಗಿದೆ ಎಂಬುದನ್ನು ಸ್ವತಃ ಬಿಇಒ ಒಪ್ಪಿಕೊಂಡಿದ್ದರು. ಈ ಬಗ್ಗೆ ನಡೆದ ತನಿಖೆ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಆಗಲೇ ಅದೇ ಸ್ಥಳದಲ್ಲಿ ನೂತನ ಬಿಇಒ ಕಟ್ಟಡ ಕಟ್ಟಲು ಮುಂದಾಗಿರುವುದು, ಡಿಸೆಂಬರ್ 12ರಂದು ನಡೆದ ಘಟನೆ ಪಕ್ಕಾ ಪೂರ್ವ ನಿರ್ಧರಿತ ಎಂಬ ಸಂಶಯ ಬರುವಂತೆ ಮಾಡಿದೆ.

ಕೋಟಿ ಕೊಟ್ಟರೂ ಅಭಿವೃದ್ಧಿಯಾಗಿಲ್ಲ ಶಿವರಾಮ ಕಾರಂತರ ಕರ್ಮಭೂಮಿ..!
1 ಕೋಟಿ ಅನುದಾನ ಮಂಜೂರು

1865ರಲ್ಲಿ ಬ್ರಿಟಿಷ್‌ ಸರಕಾರ ಪುತ್ತೂರು ಸರಕಾರಿ ಪ್ರಾಥಮಿಕ ಶಾಲೆ ಕಟ್ಟಡ ನಿರ್ಮಿಸಿತ್ತು. ಉಪ ವಿಭಾಗ ವ್ಯಾಪ್ತಿಯ ಮೊದಲ ಸರಕಾರಿ ಶಾಲಾ ಕಟ್ಟಡ ಇದಾಗಿತ್ತು. ಇದರಲ್ಲಿ ಗ್ರೀಕ್‌ ಮಾದರಿಯ ರಂಗಮಂಟಪವೂ ಇದ್ದು, ಸಾಹಿತಿ ಡಾ. ಕೆ. ಶಿವರಾಮ ಕಾರಂತರು 1930ರ ದಶಕದಲ್ಲಿ ರಂಗ ತರಬೇತಿ, ಪ್ರದರ್ಶನ ಆರಂಭಿಸಿದ್ದರು. ನಾಡಹಬ್ಬ ದಸರಾ ಆರಂಭಿಸಿದ್ದರು. ಪ್ರಾಚೀನ ಕಟ್ಟಡ ಶಿಥಿಲಗೊಂಡ ಮೇಲೆ ಶಾಲೆಯನ್ನು ಇದೇ ವಠಾರದ ಪ್ರತ್ಯೇಕ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಶಾಲೆಗೆ 3.25 ಎಕರೆ ಜಾಗವಿದೆ. ಮೂಲಗಳ ಪ್ರಕಾರ, ಈ ಜಾಗದ ಒಂದು ಮೂಲೆಯ ತಗ್ಗು ಪ್ರದೇಶವನ್ನು ಎತ್ತರಿಸಿ, ಪಿಲ್ಲರ್‌ ಹಾಕಿ ಅಲ್ಲಿ ಬಿಇಒ ಕಚೇರಿ ನಿರ್ಮಿಸಲಾಗುತ್ತದೆ. ಶಾಲೆಯ ಜಾಗವನ್ನೇ ಇದಕ್ಕೆ ಬಳಸಲಾಗುತ್ತದೆ. ರಸ್ತೆ ಸಂಪರ್ಕ ಹೊರಗಿನಿಂದ ಪ್ರತ್ಯೇಕ ಕೊಡುವ ಯೋಚನೆ ಇದೆ. ಈಗಾಗಲೇ ಇಲ್ಲಿ ಬಿಆರ್‌ಸಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ನೆಲ್ಲಿಕಟ್ಟೆ ಶಾಲೆಯೂ ಪಕ್ಕದ ಕಟ್ಟಡದಲ್ಲಿದೆ. ಮೈದಾನದ ಮಧ್ಯ ಭಾಗದಲ್ಲಿದ್ದ ಪಾರಂಪರಿಕ ಕಟ್ಟಡ ಡಾ.ಕಾರಂತರ ಸ್ಮಾರಕವಾಗಿ ಅಭಿವೃದ್ಧಿಗೊಳ್ಳುವ ಅವಕಾಶ ಕೈತಪ್ಪಿದೆ. ಬಿಇಒ ಕಚೇರಿ ಕಟ್ಟಲು 1 ಕೋಟಿ ರೂ. ಅನುದಾನ ಬಂದಿರುವುದನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌ ಖಚಿತಪಡಿಸಿದ್ದಾರೆ.

‘ಪಾರಂಪರಿಕ ಕಟ್ಟಡವನ್ನು ಕಾರಂತರ ಸ್ಮಾರಕವಾಗಿ ಅಭಿವೃದ್ಧಿಪಡಿಸುವುದು ನಮ್ಮಂಥ ಅನೇಕರ ಆಶಯವಾಗಿತ್ತು. ಅದನ್ನೇ ಕೆಡವಿರುವ ಕಾರಣ ಇನ್ನು ಆ ಬಗ್ಗೆ ಏನೂ ಹೇಳಲಾಗದು. ಪ್ರಸ್ತುತ ಅಲ್ಲಿ ಬಿಇಒ ಕಚೇರಿ ಕಟ್ಟುತ್ತಾರೆ ಎಂದರೆ ಅದನ್ನು ವಿರೋಧಿಸುವುದೂ ಸರಿಯಾಗುವುದಿಲ್ಲ. ಕೆಡಹುವ ಮುನ್ನವೇ ಸ್ಮಾರಕವಾಗಿ ಅಭಿವೃದ್ಧಿಪಡಿಸಿದ್ದರೆ ಚೆನ್ನಾಗಿತ್ತು’ ಎನ್ನುತ್ತಾರೆ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ್..

ವಿದ್ವಾಂಸ ಪ್ರೊ.ಅಮೃತ ಸೋಮೇಶ್ವರರಿಗೆ ಡಾ ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ



Read more

[wpas_products keywords=”deal of the day sale today offer all”]