Karnataka news paper

ಪಾದಯಾತ್ರೆ ತಡೆಯಲು ಗೃಹ ಸಚಿವರು ಮತ್ತೊಂದು ಜನ್ಮ ತಾಳಿ ಬರಬೇಕು: ಡಿಕೆಶಿ 


ಬೆಂಗಳೂರು: ‘ಜನರ ನೀರಿಗಾಗಿ, ರಾಜ್ಯದ ಹಿತಕ್ಕಾಗಿ ಕಾಂಗ್ರೆಸ್ ಪಕ್ಷ ನಡಿಗೆ ಮಾಡುತ್ತಿದ್ದು, ಇದನ್ನು ತಡೆಯಲು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮತ್ತೊಂದು ಜನ್ಮ ಹುಟ್ಟಿ ಬರಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸವಾಲು ಹಾಕಿದರು. 

‘ಮೇಕೆದಾಟು ಪಾದಯಾತ್ರೆಗೆ ಅನುಮತಿ ಇಲ್ಲ, ಪಾದಯಾತ್ರೆ ಮಾಡಿದರೆ ಕಾಂಗ್ರೆಸ್ ನಾಯಕರನ್ನು ಬಂಧಿಸುತ್ತೇವೆ’ ಎಂದು ಗೃಹ ಸಚಿವರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಯಾರನ್ನು ಬೇಕಾದರೂ ಬಂಧಿಸಲಿ. ನನ್ನನ್ನು ಬೇಕಾದರೂ ಬಂಧಿಸಲಿ, ಸಿದ್ದರಾಮಯ್ಯ ಅವರನ್ನಾದರೂ ಬಂಧಿಸಲಿ, ಶಾಸಕರನ್ನಾದರೂ ಬಂಧಿಸಲಿ. ನಾವು ಕೋವಿಡ್ ನಿಯಮ ಪಾಲಿಸಿ ಕಾರ್ಯಕ್ರಮ ಮಾಡುತ್ತೇವೆ’ ಎಂದರು. 

‘ರಾಜ್ಯದಲ್ಲಿ ಕೋವಿಡ್ ಇದೆ ಎಂದು ನಿರ್ಬಂಧ ಹಾಕಿದ್ದರೂ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಿದೆ. ಅಲ್ಲಿ ಸಾವಿರಾರು ಜನ ಸೇರಿದ್ದಾರೆ. ಸರ್ಕಾರ ಏನು ಮಾಡುತ್ತಿದೆ. ಗೃಹ ಮಂತ್ರಿಗಳು ಇಲ್ಲಿರುವ ಯಾರನ್ನಾದರೂ ಮುಟ್ಟಲು ಸಾಧ್ಯವೇ? ಇವರ ಮೇಲೆ ಯಾಕೆ ಪ್ರಕರಣ ದಾಖಲಿಸಿಲ್ಲ? ಇದು ಸಭೆ, ಸಮಾರಂಭವಲ್ಲವೇ ನೂತನ ಸದಸ್ಯರಿಗೆ ಪ್ರಮಾಣ ವಚನ ನೀಡುವುದಾದರೆ ವರ್ಚುವಲ್ ಸಭೆ ಮಾಡಬೇಕಿತ್ತು ಅಥವಾ ಪರಿಷತ್ ಒಳಗೆ ಪ್ರಮಾಣ ಬೋಧಿಸಬೇಕಿತ್ತು. ಗೃಹ ಸಚಿವರು ಏನು ಮಾಡುತ್ತಿದ್ದಾರೆ? ನಮ್ಮನ್ನು ಹೆದರಿಸುತ್ತಾರಾ? ಗೊಡ್ಡು ಬೆದರಿಕೆಗೆ ಕಾಂಗ್ರೆಸ್ ಹೆದರುವುದಿಲ್ಲ’ ಎಂದರು. 

‘ನಾವು 40 ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ಅವರು ಯಾರನ್ನು ಹೆದರಿಸುತ್ತಿದ್ದಾರೆ? ನಾವು ನಾಡಿನ ಜನರ ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಅವರು ರಾಜ್ಯದ ಜನರಿಗೆ ನ್ಯಾಯ ಒದಗಿಸದಿದ್ದಾಗ, ನ್ಯಾಯ ಒದಗಿಸುವಂತೆ ಮನವಿ ಮಾಡಿ ಪಾದಯಾತ್ರೆ ಮಾಡುತ್ತಿದ್ದೇವೆ. ನಮ್ಮನ್ನು ಬಂಧಿಸಲಿ, ಅವರ ತಾಕತ್ತು ತೋರಿಸಲಿ, ನಂತರ ನಾವು ಏನು ಮಾಡುತ್ತೇವೆ ಎಂಬುದನ್ನು ನಾವು ತೋರಿಸುತ್ತೇವೆ’ ಎಂದೂ ಹೇಳಿದರು. 

‘ಜನರಿಗೆ ತೊಂದರೆ ನೀಡಬೇಕು ಎನ್ನುವ ಉದ್ದೇಶದಿಂದಲೇ ಸರ್ಕಾರ ನಿರ್ಬಂಧ ಹಾಕುತ್ತಿದೆ. ಮುಖ್ಯಮಂತ್ರಿ ಈ ವಿಚಾರವಾಗಿ ಏನು ಹೇಳುತ್ತಾರೆ ನೋಡಿಕೊಂಡು ನಾನು ಮಾತನಾಡುತ್ತೇನೆ. ಇವರಿಗೆ, ಇವರ ಪಕ್ಷಕ್ಕೆ ಅನುಕೂಲವಾಗುವಂತೆ ಬೇಕಾದಂತೆ ನಿಯಮ ಮಾಡಿಕೊಂಡರೆ ಆಗುವುದಿಲ್ಲ. ಅವರು ತಮಗೆ ಬೇಕಾದ ಅಧಿಕಾರಿ ಹಾಕಿಸಿಕೊಂಡು, ನಮ್ಮನ್ನು ಬಂಧಿಸಿಸಲಿ. ಆ ಮೇಲೆ ನಮ್ಮ ಮಾತು. ಪಾದಯಾತ್ರೆ ನಡೆಯುತ್ತದೆ, ಬಸವನಗುಡಿ ತಲುಪುತ್ತೇವೆ’ ಎಂದರು.

ಇದನ್ನೂ ಓದಿ.. ನಾನು, ಡಿ. ಕೆ. ಶಿವಕುಮಾರ್ ಇಬ್ಬರೇ ಪಾದಯಾತ್ರೆ ಮಾಡುತ್ತೇವೆ: ಸಿದ್ದರಾಮಯ್ಯ
 



Read more from source

[wpas_products keywords=”deal of the day sale today kitchen”]