Karnataka news paper

ಇಂಧನ ಇಲಾಖೆಗೆ ಗ್ರಾಮ ಪಂಚಾಯಿತಿಗಳ ಬಾಕಿ ಪಾವತಿಗೆ ಕ್ರಮ: ಕೆ.ಎಸ್. ಈಶ್ವರಪ್ಪ


ಬೆಂಗಳೂರು: ಗ್ರಾಮ ಪಂಚಾಯಿತಿಗಳಲ್ಲಿನ ಕುಡಿಯುವ‌ ನೀರು ಸರಬರಾಜು ಮತ್ತು ಬೀದಿ ದೀಪಗಳಲ್ಲಿ ಬಳಸಿದ ವಿದ್ಯುತ್ ಬಾಬ್ತು ಇಂಧನ ಇಲಾಖೆಗೆ ನೀಡಬೇಕಿರುವ ₹4,229 ಕೋಟಿ ಬಾಕಿ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಪಂಚಾಯಿತಿಗಳಿಂದ ವಿದ್ಯುತ್ ಸರಬರಾಜು ಕಂಪನಿಗಳಿಗೆ ನೇರವಾಗಿ ಹಣ ಪಾವತಿಸಲು ಬಳಸುವ ‘ಇ-ಬೆಳಕು’ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾಮಗಾರಿಗಳಲ್ಲಿ ಪಾರದರ್ಶಕತೆ ತರಲು ರೂಪಿಸಿರುವ ‘ಗಾಂಧಿ ಸಾಕ್ಷಿ ಕಾಯಕ 2.0’ ತಂತ್ರಾಂಶಗಳಿಗೆ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

2017ರಿಂದಲೂ ಪಂಚಾಯಿತಿಗಳ ವಿದ್ಯುತ್ ಬಿಲ್ ಪಾವತಿ ಬಾಕಿ ಇದೆ. ₹3,518.05 ಕೋಟಿ ಮತ್ತು ₹711.55 ಕೋಟಿ ಅಸಲು ಬಾಕಿ ಇದೆ. ಬಾಕಿ ಪಾವತಿ ಕುರಿತು ಇಂಧನ ಸಚಿವ ವಿ. ಸುನಿಲ್ ಕುಮಾರ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೂ ಚರ್ಚಿಸಲಾಗುವುದು ಎಂದರು.

ಇ-ಬೆಳಕು ತಂತ್ರಾಂಶ ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳ 1,378 ಗ್ರಾಮ ಪಂಚಾಯಿತಿಗಳಲ್ಲಿ ತಕ್ಷಣದಿಂದ ಅನುಷ್ಠಾನಕ್ಕೆ ಬರಲಿದೆ.    ಉಳಿದ ಜಿಲ್ಲೆಗಳಲ್ಲಿ ಎರಡು ತಿಂಗಳಲ್ಲಿ ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.

ಹೊಸ ತಂತ್ರಾಂಶದ ಬಳಕೆಯಿಂದ ಗ್ರಾಮ ಪಂಚಾಯಿತಿಗಳ ವಿದ್ಯುತ್ ಬಿಲ್ ಬಾಕಿ ಉಳಿಯುವುದಿಲ್ಲ. ನೇರವಾಗಿ ವಿದ್ಯುತ್ ಸರಬರಾಜು ಕಂಪನಿಗಳಿಗೆ ಹಣ ಪಾವತಿಯಾಗಲಿದೆ ಎಂದರು.

‘ಗಾಂಧಿ ಸಾಕ್ಷಿ ಕಾಯಕ 2.0’ ತಂತ್ರಾಂಶದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲ ಕಾಮಗಾರಿಗಳ ವಿವರ ದಾಖಲಿಸಲಾಗುವುದು. ಇದರಿಂದ ಹಣ ಸೋರಿಕೆ ತಡೆಯಲು ಸಾಧ್ಯವಾಗಲಿದೆ ಎಂದು ಹೇಳಿದರು.

ಇಂಧನ ಸಚಿವ ವಿ. ಸುನಿಲ್‌ ಕುಮಾರ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಉಪಸ್ಥಿತರಿದ್ದರು.



Read more from source

[wpas_products keywords=”deal of the day sale today kitchen”]