Karnataka news paper

ಸೈನಿಕರ ಸಾಧನೆ, ಸಾಹಸಗಳನ್ನು ಪಠ್ಯದಲ್ಲಿ ಅಳವಡಿಸಿ ಬೋಧಿಸಬೇಕು : ಸಚಿವ ಸುನಿಲ್‌ ಕುಮಾರ್


ಮಂಗಳೂರು: ಪ್ರಾಣದ ಹಂಗನ್ನು ತೊರೆದು ರಾತ್ರಿ ಹಗಲೆನ್ನದೆ ದೇಶಸೇವೆ ಮಾಡುವ ದೇಶಪ್ರೇಮಿ ಸೈನಿಕರ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಹೊಂದಿರಬೇಕು. ಸೈನಿಕರ ಸಾಧನೆ, ಸಾಹಸಗಳನ್ನು ಪಠ್ಯದಲ್ಲಿ ಅಳವಡಿಸಿ ಬೋಧಿಸಬೇಕು ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌ ಹೇಳಿದರು.

ನಗರದ ಡೊಂಗರಕೇರಿ ಕೆನರಾ ಶಿಕ್ಷಣ ಸಂಸ್ಥೆಯ ಸುಧೀಂದ್ರ ಸಭಾಂಗಣದಲ್ಲಿ ಭಾನುವಾರ ಭಾರತೀಯ ಭೂ ಸೇನೆಯ ಬಾರ್ಡರ್‌ ರೋಡ್‌ ಆರ್ಗನೈಸೇಶನ್‌ (ಬಿಆರ್‌ಒ) ಹಮ್ಮಿಕೊಂಡಿರುವ ಇಂಡಿಯಾ ಎಟ್‌ 75 ಬಿಆರ್‌ಒ ಮೋಟರ್‌ ಸೈಕಲ್‌ ಎಕ್ಸ್‌ಪೆಡಿಷನ್‌ 2021 ಮೋಟರ್‌ ಬೈಕ್‌ ರ್ಯಾಲಿಯ ಮುಂದಿನ ಪ್ರಯಾಣಕ್ಕೆ ಹಸಿರು ನಿಶಾನೆ ತೋರುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುವಜನಾಂಗದಲ್ಲಿ ತಾನೂ ಸೈನಿಕನಾಗಿ, ದೇಶ ರಕ್ಷಣೆಯ ಹೊಣೆ ಹೊರಬೇಕು ಎಂಬ ಭಾವನೆ ಮೂಡಬೇಕು. ದೇಶದ ಜನತೆಯ ಮನಸ್ಸುಗಳು ದೇಶಕ್ಕಾಗಿ ಮಿಡಿದಾಗ ಯಾವುದೇ ಸಮಸ್ಯೆಗಳು ತಲೆದೋರದು. ದೇಶಾಭಿಮಾನ ಹೊಂದಿರಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಜನಸಾಗರದ ಮಧ್ಯೆ ನಿರಂತರ 36 ಗಂಟೆ ಸಾಗಿದ ಮೂಡಬಿದ್ರೆ ಕಂಬಳ; ದಾಖಲೆಯ 221 ಜತೆ ಕೋಣಗಳು ಭಾಗಿ
ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ದೇಶಕ್ಕಾಗಿ ಸೇವೆ ಮಾಡುವ ಸೈನಿಕರನ್ನು ನಾವು ಗೌರವಿಸಬೇಕು. ಈ ಮಣ್ಣಿನ ಬಗ್ಗೆ ನಮಗೆ ಹೆಮ್ಮೆ ಇರಬೇಕು. ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಮಡಿದಾಗ ವ್ಯತಿರಿಕ್ತ ಹೇಳಿಕೆ ನೀಡುವ ಮಾನಸಿಕತೆ ಬದಲಾಗಲು ಇಂಥ ಕಾರ್ಯಕ್ರಮ ಅಗತ್ಯ ಎಂದರು. ಶಾಸಕ ಯು.ಟಿ.ಖಾದರ್‌ ಮಾತನಾಡಿ, ಹಲವಾರು ಬಲಿದಾನಗಳಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, 75 ವರ್ಷಗಳ ತ್ಯಾಗದಿಂದ ವಿವಿಧತೆಯಲ್ಲೂ ಏಕತೆ ಉಳಿದಿದೆ. ಮಾತು, ಕೃತಿಗಳ ಮೂಲಕ ಏಕತೆಯನ್ನು ಬಲಿಷ್ಠಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ಮೇಯರ್‌ ಪ್ರೇಮಾನಂದ ಶೆಟ್ಟಿ, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್‌.ಯಡಪಡಿತ್ತಾಯ, ನಗರ ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌, ಬಿಆರ್‌ಒ ತಂಡದ ನಾಯಕ ಕರ್ನಲ್‌ ಪಿ.ಎಸ್‌.ರೆಡ್ಡಿ, ಮಾಜಿ ಸೈನಿಕರ ಸಂಘದ ಕರ್ನಲ್‌ ಎನ್‌.ಶರತ್‌ ಭಂಡಾರಿ, ಬ್ರಿಗೇಡಿಯರ್‌ ಐ.ಎನ್‌.ರೈ, ನಿವೃತ್ತ ಯೋಧ ಕ್ಯಾ.ರಮೇಶ್‌ ಕಾರ್ಣಿಕ್‌, ಬ್ರಿಗೇಡಿಯರ್‌ ಪೂರ್ವಿಮಾತ್‌ ಡಿ.ಎಂ., ಸಚಿನ್‌ ಕುಲಕರ್ಣಿ, ಮಿಥುನ್‌ ಚೌಟರ್‌, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಸ್‌.ಎಂ.ಐರನ್‌ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಘಟಕ, ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಂಗಳೂರು ಎನ್‌ಸಿಸಿ ಗ್ರೂಪ್‌ ಕಮಾಂಡರ್‌ ಎ.ಕೆ.ಶರ್ಮಾ ವಂದಿಸಿದರು.



Read more