Karnataka news paper

ಸೇನಾ ಹೆಲಿಕಾಪ್ಟರ್ ದುರಂತ; ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ಆರಂಭ: ರಕ್ಷಣಾ ಸಚಿವ ರಾಜನಾಥ್ ಸಿಂಗ್


Source : ANI

ನವದೆಹಲಿ: ತಮಿಳು ನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಮಿ-17 ವಿ-5(Mi-17 V-5 )ಭೀಕರ ದುರಂತಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಸಭೆ ಕಲಾಪದ ಆರಂಭದಲ್ಲಿ ಹೇಳಿಕೆ ನೀಡಿದ್ದಾರೆ.

ಭಾರತೀಯ ವಾಯುಪಡೆ (ಐಎಎಫ್) ಸೇನಾ ಹೆಲಿಕಾಪ್ಟರ್ ಅಪಘಾತದ ಬಗ್ಗೆ ತ್ರಿ-ಸೇವಾ ತನಿಖೆಗೆ ಆದೇಶಿಸಲಾಗಿದೆ. ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ತನಿಖಾ ತಂಡ ನಿನ್ನೆಯೇ ವೆಲ್ಲಿಂಗ್ಟನ್ ತಲುಪಿ ತನಿಖೆ ಆರಂಭಿಸಿದೆ ಎಂದು ಸದನಕ್ಕೆ ತಿಳಿಸಿದ್ದಾರೆ.

ಹೆಲಿಕಾಪ್ಟರ್ ದುರಂತದಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರನ್ನು ಹೊರತುಪಡಿಸಿ ಬೇರೆಲ್ಲರೂ ನಿಧನರಾಗಿದ್ದಾರೆ. ವರುಣ್ ಸಿಂಗ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಸ್ಥಿರವಾಗಿದೆ. ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ಅಗತ್ಯವಿದ್ದರೆ ಮಿಲಿಟರಿ ಆಸ್ಪತ್ರೆಯಿಂದ ವೆಲ್ಲಿಂಗ್ಟನ್ ಕಮಾಂಡ್ ಆಸ್ಪತ್ರೆಗೆ ವರ್ಗಾಯಿಸಲಾಗುವುದು ಎಂದರು.

ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ವೆಲ್ಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಯಲ್ಲಿ ಜೀವರಕ್ಷಕರಾಗಿದ್ದಾರೆ. ಅವರ ಜೀವ ಉಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.

ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಅಂತಿಮ ಸಂಸ್ಕಾರವನ್ನು ಸಂಪೂರ್ಣ ಸೇನಾ ಗೌರವಗಳೊಂದಿಗೆ ನೆರವೇರಿಸಲಾಗುವುದು. ಇತರ ಸೇನಾ ಸಿಬ್ಬಂದಿಯ ಅಂತಿಮ ಸಂಸ್ಕಾರವನ್ನು ಸೂಕ್ತ ಸೇನಾ ಗೌರವದೊಂದಿಗೆ ನೆರವೇರಿಸಲಾಗುವುದು ಎಂದರು.

ಇದನ್ನೂ ಓದಿ: ಕೂನೂರ್ ಹೆಲಿಕಾಫ್ಟರ್ ದುರಂತ: ಗಾಯಗೊಂಡಿದ್ದ ವ್ಯಕ್ತಿ ನೀರು ಕೇಳಿದ್ದರು-ಪ್ರತ್ಯಕ್ಷದರ್ಶಿ

ಇದಕ್ಕೂ ಮೊದಲು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಗಲಿದ ಸೇನಾಧಿಕಾರಿಗಳಿಗೆ ಸದಸ್ಯರು ಎರಡು ನಿಮಿಷ ಮೌನಾಚರಣೆ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.

ಲೋಕಸಭೆಯಲ್ಲಿ ಇಂದು ರಾಜನಾಥ್ ಸಿಂಗ್ ನೀಡಿದ ಹೇಳಿಕೆಯ ಸಂಪೂರ್ಣ ವಿವರ: ಅತ್ಯಂತ ಭಾರವಾದ ಹೃದಯದಿಂದ ನಿನ್ನೆ ಸಂಭವಿಸಿದ ಮಿಲಿಟರಿ ಹೆಲಿಕಾಪ್ಟರ್ ದುರಂತದ ಸುದ್ದಿಯ ವಿವರವನ್ನು ಸದನದ ಮುಂದಿಡುತ್ತಿದ್ದೇನೆ. 

ಜನರಲ್ ಬಿಪಿನ್ ರಾವತ್ ಅವರು ತಮಿಳು ನಾಡಿನ ವೆಲ್ಲಿಂಗ್ಟನ್ ನ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಭಾರತೀಯ ವಾಯುಪಡೆಯ ಮಿ 17 ವಿ 5 ಹೆಲಿಕಾಪ್ಟರ್ ಸೂಲೂರ್ ವಾಯುನೆಲೆಯಿಂದ ನಿನ್ನೆ ಬೆಳಗ್ಗೆ 11.48ಕ್ಕೆ ಟೇಕ್ ಆಫ್ ಆಯಿತು. ವೆಲ್ಲಿಂಗ್ಟನ್ ನಲ್ಲಿ ಮಧ್ಯಾಹ್ನ 12.15ಕ್ಕೆ ಲ್ಯಾಂಡ್ ಆಗಬೇಕಾಗಿತ್ತು. ಸೂಲೂರ್ ವಾಯುನೆಲೆಯ ವಾಯುಸಂಚಾರ ನಿಯಂತ್ರಣ ಕೇಂದ್ರ ನಿನ್ನೆ ಮಧ್ಯಾಹ್ನ 12.8ಕ್ಕೆ ಸಂಪರ್ಕ ಕಳೆದುಕೊಂಡಿತು. 

ಅದೇ ಹೊತ್ತಿಗೆ ತಮಿಳು ನಾಡಿನ ನೀಲಗಿರಿಯ ಕೂನೂರು ಹತ್ತಿರ ಅರಣ್ಯ ಪ್ರದೇಶದಲ್ಲಿ ಸ್ಥಳೀಯರು ಬೆಂಕಿ ಹೊಗೆ ಬರುತ್ತಿರುವುದು ಕಂಡಿದ್ದಾರೆ. ಮಿಲಿಟರಿ ಹೆಲಿಕಾಪ್ಟರ್ ಬೆಂಕಿಯ ಜ್ವಾಲೆಯಲ್ಲಿ ಹೊತ್ತಿ ಉರಿಯುತ್ತಿತ್ತು. ಕಂಡ ತಕ್ಷಣವೇ ಸ್ಥಳೀಯ ರಕ್ಷಣಾ ತಂಡ ಸ್ಥಳಕ್ಕೆ ಧಾವಸಿ ಹೆಲಿಕಾಪ್ಟರ್ ನಲ್ಲಿದ್ದವರನ್ನು ರಕ್ಷಣೆ ಮಾಡಲು ಪ್ರಯತ್ನಿಸಿತು. 

ಇದನ್ನೂ ಓದಿ: ಭಾರತ ಮಾತೆಯ ಹೆಮ್ಮೆಯ ಪುತ್ರ ಜ.ಬಿಪಿನ್ ರಾವತ್: ಸೇನಾ ಕುಟುಂಬದಲ್ಲಿ ಹುಟ್ಟಿ ರಕ್ಷಣಾ ಪಡೆಯ ಮುಖ್ಯಸ್ಥ ಹುದ್ದೆಗೆ ಸಾಗಿದ ರೋಚಕ ಪಯಣ

ಅಪಘಾತದಲ್ಲಿ ಬಹುತೇಕ ಬೆಂದು ಬದುಕುಳಿದವರನ್ನು ಕೂಡಲೇ ವೆಲ್ಲಿಂಗ್ಟನ್ ನ ಮಿಲಿಟರಿ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಹೆಲಿಕಾಪ್ಟರ್ ನಲ್ಲಿದ್ದ 14 ಮಂದಿಯಲ್ಲಿ 13 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಅವರ ರಕ್ಷಣಾ ಸಲಹೆಗಾರ ಬ್ರಿಗ್ ಲಖ್ಬಿಂದರ್ ಸಿಂಗ್ ಲಿಡ್ಡರ್, ಸಿಬ್ಬಂದಿ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಮತ್ತು ವಾಯುಪಡೆಯ ಹೆಲಿಕಾಪ್ಟರ್ ಸಿಬ್ಬಂದಿ ಸೇರಿದಂತೆ ಒಂಬತ್ತು ಇತರ ಸಶಸ್ತ್ರ ಪಡೆಗಳ ಸಿಬ್ಬಂದಿಯಿದ್ದರು. 

ಹೆಲಿಕಾಪ್ಟರ್ ದುರಂತದಲ್ಲಿ ಮಡಿದವರ ಹೆಸರುಗಳು: ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್, ಸ್ಕ್ವಾಡ್ರನ್ ಲೀಡರ್ ಕುಲದೀಪ್ ಸಿಂಗ್, ಜೂನಿಯರ್ ವಾರಂಟ್ ಅಧಿಕಾರಿ ರಾಣಾ ಪ್ರತಾಪ್ ದಾಸ್, ಕಿರಿಯ ವಾರಂಟ್ ಅಧಿಕಾರಿ ಅರಕ್ಕಲ್ ಪ್ರದೀಪ್, ಹವಾಲ್ದಾರ್ ಸತ್ಪಾಲ್ ರೈ, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದ್ರ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ ಸಾಯಿ ತೇಜಾ. ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ವೆಲ್ಲಿಂಗ್ಟನ್‌ನಲ್ಲಿರುವ ಮಿಲಿಟರಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದು, ಅವರ ಜೀವ ಉಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ರಾಜನಾಥ್ ಸಿಂಗ್ ವಿವರ ನೀಡಿದ್ದಾರೆ. 



Read more

Leave a Reply

Your email address will not be published. Required fields are marked *