ಹೈಲೈಟ್ಸ್:
- ಯಾವ ಕಾರಣಕ್ಕೂ ಪಾದಯಾತ್ರೆ ನಿಲ್ಲದು – ಕಾಂಗ್ರೆಸ್ ಘೋಷಣೆ
- ಪಾದಯಾತ್ರೆ ನಡೆಸಿದರೆ ಸರಕಾರದಿಂದ ಕ್ರಮದ ಎಚ್ಚರಿಕೆ
- ಚಿಂತನಾ ಬೈಠಕ್ ಕೈಬಿಟ್ಟು ಕಾಂಗ್ರೆಸ್ ಮೇಲೆ ಒತ್ತಡ ಹೇರಿದ ಬಿಜೆಪಿ
- ಭಾರೀ ಕುತೂಹಲ ಕೆರಳಿಸಿದ ಮೇಕೆದಾಟು ಪಾದಯಾತ್ರೆ, ಸರಕಾರದ ಪ್ರತಿಕ್ರಿಯೆ
ಪಾದಯಾತ್ರೆಯ ಜಂಟಿ ಹೇಳಿಕೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಇದು ನೀರಿನ ಹಕ್ಕಿಗಾಗಿನ ಹೋರಾಟ, ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಮೇಕೆದಾಟು ಪಾದಯಾತ್ರೆ ಸಂಬಂಧ ಕಳೆದೊಂದು ತಿಂಗಳಿಂದ ಕಾಂಗ್ರೆಸ್ ಸಿದ್ಧತೆಯಲ್ಲಿ ತೊಡಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹಿರಿ, ಕಿರಿಯ ಮುಖಂಡರನ್ನು ಜತೆಗೂಡಿಸಿಕೊಂಡು ಹೋಗುತ್ತಿದ್ದಾರೆ. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಯಾವುದೇ ರಾಜಕೀಯ ಸಮಾವೇಶ, ಸಭೆ, ಸಮಾರಂಭ, ಪ್ರತಿಭಟನೆ ನಡೆಸುವಂತಿಲ್ಲ ಎಂದು ಸರಕಾರ ನಿರ್ಬಂಧ ಹೇರಿದೆ.
ಸರಕಾರದ ಮಾರ್ಗಸೂಚಿ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿದ ಡಿ.ಕೆ. ಶಿವಕುಮಾರ್, ಮುಂದಿನ ತಂತ್ರಗಾರಿಕೆ ಬಗ್ಗೆ ಚರ್ಚಿಸಿದರು. ಜತೆಗೆ ಪಾದಯಾತ್ರೆ ಕೈಬಿಡುವುದಿಲ್ಲ. ಸರಕಾರ ಬೇಕಾದರೆ ಕ್ರಮ ಕೈಗೊಳ್ಳಲಿ ಎಂದು ಉಭಯ ನಾಯಕರೂ ಈ ವೇಳೆ ಹೇಳಿಕೆ ನೀಡಿದ್ದರು.
ನೀರಿಗಾಗಿ ನಡಿಗೆ
ಮೇಕೆದಾಟು ಪಾದಯಾತ್ರೆಯನ್ನು ನೀರಿಗಾಗಿ ನಡಿಗೆ ಎಂದು ಬದಲಾಯಿಸಲಾಗಿದ್ದು, ಇದು ನೀರಿನ ಹಕ್ಕಿಗಾಗಿ ಹೋರಾಟ ಎಂದು ಉಭಯ ನಾಯಕರು ಹೇಳಿದ್ದು ಗಮನ ಸೆಳೆಯಿತು.
ನಾವಿಬ್ಬರೇ ನಡೆಯುತ್ತೇವೆ
“ಕಾನೂನು ಚೌಕಟ್ಟಿನಲ್ಲಿಯೇ ನಿಯಪ ಪಾಲಿಸಿ ನಡಿಗೆ ಮಾಡಲಾಗುವುದು. ಸಾರ್ವಜನಿಕರು ಈ ನಡಿಗೆಯಲ್ಲಿ ಭಾಗಿಯಾಗಲು ಸರಕಾರ ಅವಕಾಶ ನೀಡದಿದ್ದರೆ ನಾನು ಮತ್ತು ಸಿದ್ದರಾಮಯ್ಯ ಇಬ್ಬರೇ ನಡೆಯುತ್ತೇವೆ,” ಎಂದು ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
ಸರಕಾರದ ತಂತ್ರಗಾರಿಕೆ, ಬಿಜೆಪಿ ಬೈಠಕ್ ಮುಂದಕ್ಕೆ
ಈ ಮಧ್ಯೆ ಕಾಂಗ್ರೆಸ್ ಪಾದಯಾತ್ರೆಗೆ ಕಡಿವಾಣ ಹಾಕುವ ಉದ್ದೇಶದಿಂದಲೇ ತಕ್ಷಣ ನಿರ್ಬಂಧ ವಿಧಿಸುವ ತೀರ್ಮಾನಕ್ಕೆ ಬರಲಾಗಿದೆ ಎಂಬ ಆಪಾದನೆಯೂ ಕೇಳಿ ಬಂದಿದೆ. ಇದರ ಬೆನ್ನಿಗೇ ಜನವರಿ 7-9ರ ವರೆಗೆ ನಡೆಯಬೇಕಿದ್ದ ಬಿಜೆಪಿ ಚಿಂತನ ಬೈಠಕ್ ಮುಂದೂಡಿಕೆಯಾಗಿದೆ.
“ಕೋವಿಡ್ ಇರುವುದರಿಂದ ಜನರ ಆರೋಗ್ಯ ರಕ್ಷಣೆ ಮುಖ್ಯ. ಅದಕ್ಕಾಗಿ ನಮ್ಮ ಪಕ್ಷದ ಸಭೆ ಮುಂದೂಡಲಾಗಿದೆ. ಹಾಗಿರುವಾಗ ಕಾಂಗ್ರೆಸ್‌ಗೆ ಪ್ರತಿಷ್ಠೆಯೇಕೆ? ಕಾಂಗ್ರೆಸ್ ಕೂಡ ತನ್ನ ಹೋರಾಟವನ್ನು ಮುಂದೂಡಿ ಈ ತುರ್ತು ಸಂದರ್ಭದಲ್ಲಿ ಜನರ ಆರೋಗ್ಯ ರಕ್ಷಣೆಯತ್ತ ಗಮನ ಹರಿಸಬೇಕು. ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕೋವಿಡ್ ವಿರುದ್ಧದ ಸಮರದಲ್ಲಿ ನಮ್ಮೊಂದಿಗೆ ನಿಲ್ಲಬೇಕು,” ಎಂಬ ತಂತ್ರಗಾರಿಕೆ ಸರಕಾರದ್ದಾಗಿದೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.
ಇದರ ಮಧ್ಯೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿಕೆ ಗಮನ ಸೆಳೆದಿದ್ದು, ”ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯಾದವರು, ಮಂತ್ರಿಯಾದವರು ಬಹಳ ಜನರಿದ್ದಾರೆ. ಜನರ ಹಿತದೃಷ್ಟಿಯಿಂದ ಇವರು ಒಳ್ಳೆಯ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದುಕೊಂಡಿದ್ದೇನೆ. ಹಠ ಮುಂದುವರಿಸಿದರೆ ಕಾನೂನು ರೀತ್ಯ ಕ್ರಮವಾಗುತ್ತದೆ,” ಎಂದಿದ್ದಾರೆ.
ಜನಹಿತಕ್ಕಾಗಿ ಪಕ್ಷಾತೀತವಾಗಿ ಈ ನಡಿಗೆ ಆಯೋಜಿಸಲಾಗಿದೆ. ಆದರೆ, ರಾಜ್ಯ ಸರಕಾರ ಮತ್ತು ಕೆಲ ಪಕ್ಷಗಳಿಗೆ ಇದನ್ನು ಸಹಿಸಲು ಆಗುತ್ತಿಲ್ಲ. ಅವರ ಅಸೂಯೆಗೆ ಮದ್ದಿಲ್ಲ. ನೀರಿಗಾಗಿ ನಡಿಗೆಗೆ ಜನ ತೋರುತ್ತಿರುವ ಉತ್ಸಾಹ ನೋಡಿ ಇದನ್ನು ತಡೆಯಲು ದೊಡ್ಡ ಪಿತೂರಿ ನಡೆಸಿದ್ದಾರೆ. ಕೋವಿಡ್ ನೆಪದಲ್ಲಿ ನಿರ್ಬಂಧ ಹೇರಿದ್ದಾರೆ ಎಂದು ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ದೂರಿದ್ದಾರೆ.
Read more
[wpas_products keywords=”deal of the day sale today offer all”]