Karnataka news paper

ಲಸಿಕೆ ಹಾಕಿಸಿದ ಬಳಿಕವೂ ದಕ್ಷಿಣ ಆಫ್ರಿಕಾ ಅಧ್ಯಕ್ಷರಿಗೆ ಕೋವಿಡ್


ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೊಸಾ (69) ಅವರಿಗೆ ಭಾನುವಾರ ಕೋವಿಡ್ ದೃಢಪಟ್ಟಿದೆ ಎಂದು ಅಲ್ಲಿನ ಕಾರ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ಓಮೈಕ್ರಾನ್ ಪ್ರಕರಣ ಹೆಚ್ಚುತ್ತಿದ್ದು, ಲಸಿಕೆ ಪಡೆದ ಬಳಿಕವೂ ಅಧ್ಯಕ್ಷರಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದು ಕಳವಳಕ್ಕೆ ಕಾರಣವಾಗಿದೆ.

ಇದನ್ನೂ ಓದಿ: 

ಸಿರಿಲ್ ರಾಮಾಫೊಸಾ ಅವರಲ್ಲಿ ಸೌಮ್ಯ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ. ಕೇಪ್ ಟೌನ್‌ನಲ್ಲಿ ಪ್ರತ್ಯೇಕವಾಸದಲ್ಲಿದ್ದು, ಅವರ ಆರೋಗ್ಯದ ಮೇಲೆ ದಕ್ಷಿಣ ಆಫ್ರಿಕಾದ ಮಿಲಿಟರಿ ಹೆಲ್ತ್ ಸರ್ವಿಸ್ ನಿಗಾ ವಹಿಸುತ್ತಿದೆ.

ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಮುಂದಿನ ವಾರದ ಎಲ್ಲ ಜವಾಬ್ದಾರಿಗಳನ್ನು ಉಪಾಧ್ಯಕ್ಷ ಡೇವಿಡ್ ಮಬುಜಾ ಅವರಿಗೆ ವಹಿಸಿಕೊಡಲಾಗಿದೆ.

ಕಳೆದ ವಾರ ರಾಮಾಫೊಸಾ, ಪಶ್ಚಿಮ ಆಫ್ರಿಕಾದ ನಾಲ್ಕು ದೇಶಗಳಿಗೆ ಭೇಟಿ ಕೊಟ್ಟಿದ್ದರು. ಪ್ರವಾಸದ ವೇಳೆ ನಿಯೋಗದಲ್ಲಿದ್ದ ಎಲ್ಲ ಸದಸ್ಯರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ನೈಜೀರಿಯಾದಲ್ಲಿ ಕೋವಿಡ್ ದೃಢಪಟ್ಟ ಕೆಲವು ಸದಸ್ಯರು ತವರಿಗೆ ಮರಳಿದ್ದರು.

ಆದರೆ ಪ್ರವಾಸದ ವೇಳೆ ದಕ್ಷಿಣ ಆಫ್ರಿಕಾ ಅಧ್ಯಕ್ಷರಲ್ಲಿ ಸೋಂಕು ಕಾಣಿಸಿಕೊಂಡಿರಲಿಲ್ಲ. ಡಿಸೆಂಬರ್ 8ರಂದು ಸೆನೆಗಲ್‌ನಿಂದ ಮರಳಿದ್ದರು. ಬಳಿಕ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ.

‘ಲಸಿಕೆ ಹಾಕಿಸಿದ ಬಳಿಕವೂ ಕೋವಿಡ್ ಸೋಂಕು ತಗುಲಲಿದೆ ಎಂಬುದಕ್ಕೆ ನಾನೇ ಉದಾಹರಣೆ. ಹಾಗಾಗಿ ದಕ್ಷಿಣ ಆಫ್ರಿಕಾದ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಮತ್ತು ಅತೀವ ಜಾಗರೂಕರಾಗಿರಬೇಕು. ಲಸಿಕೆ ಹಾಕಿಸಿಕೊಳ್ಳುವುದರಿಂದ ತೀವ್ರ ಅನಾರೋಗ್ಯ ಹಾಗೂ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿಯನ್ನು ತಪ್ಪಿಸಬಹುದಾಗಿದೆ’ ಎಂದು ಸಿರಿಲ್ ರಾಮಾಫೊಸಾ ಹೇಳಿಕೆಯನ್ನು ಅಧ್ಯಕ್ಷರ ಕಾರ್ಯಾಲಯವು ಉಲ್ಲೇಖಿಸಿದೆ.

ರಾಮಾಫೊಸಾ ಅವರ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಕೋವಿಡ್ ಪರೀಕ್ಷೆಗೆ ಒಳಗಾಗಲು ಸೂಚಿಸಲಾಗಿದೆ.



Read more from source