Karnataka news paper

ಫ್ಲೈ ಓವರ್ ಮೇಲೆ ಪ್ರಧಾನಿ ಮೋದಿ 20 ನಿಮಿಷ ಕಾದು ಕುಳಿತ ಘಟನೆಗೆ ಕಾರಣಗಳ ಪಟ್ಟಿ ಕೊಟ್ಟ ಕಾಂಗ್ರೆಸ್..!


ಹೈಲೈಟ್ಸ್‌:

  • ಪಂಜಾಬ್ ಸರ್ಕಾರವು ಪ್ರಧಾನಿ ಮೋದಿ ಅವರ ಸಮಾವೇಶಕ್ಕೆ 10 ಸಾವಿರ ಭದ್ರತಾ ಸಿಬ್ಬಂದಿ ನಿಯೋಜಿಸಿತ್ತು
  • ಪ್ರಧಾನಿ ಭದ್ರತೆಯ ಹೊಣೆ ಹೊತ್ತಿರುವ ತಂಡದ ಜೊತೆ ನಿರಂತರ ಸಂಪರ್ಕದಲ್ಲಿತ್ತು
  • ಆದರೆ ಪ್ರಧಾನಿ ಮೋದಿ ಅವರು ಹುಸೇನ್‌ವಾಲಾಗೆ ರಸ್ತೆ ಮಾರ್ಗವಾಗಿ ಪ್ರಯಾಣಿಸುವ ನಿರ್ಧಾರ ಕೈಗೊಂಡರು ಎಂದ ಸುರ್ಜೇವಾಲಾ

ಹೊಸ ದಿಲ್ಲಿ: ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಅವರು ಪ್ರಯಾಣಿಸುತ್ತಿದ್ದ ಮಾರ್ಗ ಮಧ್ಯೆ ಪ್ರತಿಭಟನೆ ನಡೆಯುತ್ತಿದ್ದ ಕಾರಣ, ಫ್ಲೈ ಓವರ್ ಒಂದರ ಮೇಲೆ ಪ್ರಧಾನಿ ಮೋದಿ ಅವರು 20 ನಿಮಿಷ ಕಾಯುವಂತಾಯ್ತು. ಈ ಘಟನೆ ಇದೀಗ ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿದೆ.

ಖುದ್ದು ಪ್ರಧಾನಿ ಮೋದಿ ಅವರೇ ಭಟಿಂಡಾ ಏರ್‌ಪೋರ್ಟ್‌ನಿಂದ ದಿಲ್ಲಿಗೆ ರವಾನೆಯಾಗುವ ವೇಳೆ ‘ನಿಮ್ಮ ಸಿಎಂಗೆ ಧನ್ಯವಾದ ತಿಳಿಸಿ, ನಾನು ಜೀವಂತವಾಗಿ ವಾಪಸ್ ಹೋಗುತ್ತಿದ್ದೇನೆ’ ಎಂದು ಏರ್‌ಪೋರ್ಟ್‌ ಸಿಬ್ಬಂದಿಗೆ ಹೇಳಿದ್ದರು. ಇದರ ಬೆನ್ನಲ್ಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಕೂಡಾ ಪಂಜಾಬ್ ಸಿಎಂ ಹಾಗೂ ಅಲ್ಲಿನ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಈ ಎಲ್ಲಾ ಆರೋಪಗಳಿಗೆ ಕಾಂಗ್ರೆಸ್ ಪಕ್ಷ ತಿರುಗೇಟು ನೀಡಿದೆ.

ಟ್ವಿಟ್ಟರ್‌ನಲ್ಲಿ ಜೆ. ಪಿ. ನಡ್ಡಾ ಅವರಿಗೆ ಬಹಿರಂಗ ಪತ್ರ ಬರೆದಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ, ಪ್ರಧಾನಿ ಮೋದಿ ಅವರು ಫ್ಲೈ ಓವರ್ ಮೇಲೆ 20 ನಿಮಿಷ ಕಾಯುವಂತಾಗಲು ಕಾರಣವೇನು ಎಂದು ಪಟ್ಟಿ ನೀಡಿದ್ದಾರೆ.

ನಡ್ಡಾ ಅವರೇ ತಾಳ್ಮೆ ಕಳೆದುಕೊಳ್ಳಬೇಡಿ, ನಾವು ಹೇಳುವ ಸಂಗತಿಗಳನ್ನು ಗಮನವಿಟ್ಟು ಕೇಳಿ ಎಂದು ರಣದೀಪ್ ಸಿಂಗ್ ಸುರ್ಜೇವಾಲಾ ತಮ್ಮ ಪತ್ರವನ್ನು ಆರಂಭಿಸಿದ್ದಾರೆ.

ಪಂಜಾಬ್ ಸರ್ಕಾರವು ಪ್ರಧಾನಿ ಮೋದಿ ಅವರ ಸಮಾವೇಶಕ್ಕೆ 10 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿತ್ತು. ಎಸ್‌ಪಿಜಿ ಸೇರಿದಂತೆ ಪ್ರಧಾನಿ ಭದ್ರತೆಯ ಹೊಣೆ ಹೊತ್ತಿರುವ ತಂಡದ ಜೊತೆ ನಿರಂತರ ಸಂಪರ್ಕದಲ್ಲಿದ್ದು ಎಲ್ಲಾ ರೀತಿಯ ಸಿದ್ದತೆ ಮಾಡಲಾಗಿತ್ತು. ಹರಿಯಾಣ ಹಾಗೂ ರಾಜಸ್ಥಾನದಿಂದ ಬಂದ ಬಿಜೆಪಿ ಕಾರ್ಯಕರ್ತರ ಬಸ್‌ಗಳ ಸಂಚಾರಕ್ಕೂ ಮಾರ್ಗ ನಿಗದಿ ಮಾಡಲಾಗಿತ್ತು. ಆದ್ರೆ, ಪ್ರಧಾನಿ ಮೋದಿ ಅವರು ಹುಸೇನ್‌ವಾಲಾಗೆ ರಸ್ತೆ ಮಾರ್ಗವಾಗಿ ಪ್ರಯಾಣಿಸುವ ನಿರ್ಧಾರ ಕೈಗೊಂಡರು. ಆದ್ರೆ, ಇದು ಪ್ರಧಾನಿ ಅವರ ಟೂರ್ ಪ್ಲಾನ್‌ನಲ್ಲಿ ಇರಲಿಲ್ಲ ಎಂದು ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.

ಜೀವಂತವಾಗಿ ವಾಪಸ್ ಬಂದೆ, ಪಂಜಾಬ್ ಸಿಎಂಗೆ ಧನ್ಯವಾದ ತಿಳಿಸಿ: ಏರ್‌ಪೋರ್ಟ್‌ ಸಿಬ್ಬಂದಿಗೆ ಪ್ರಧಾನಿ ಮೋದಿ ಸೂಚನೆ..!
ಇನ್ನು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯವರು ಪ್ರಧಾನಿ ಮೋದಿ ಭೇಟಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾಕಾರರ ಜೊತೆ ಕೇಂದ್ರ ಸಚಿವ ಗಜೇಂದ್ರ ಶೇಖಾವತ್ ಅವರು ಈಗಾಗಲೇ 2 ಸುತ್ತಿನ ಸಂಧಾನ ಮಾತುಕತೆಯನ್ನು ನಡೆಸಿದ್ದಾರೆ. ಈ ಎಲ್ಲಾ ವಿಚಾರ ನಿಮಗೆ ಗೊತ್ತೇ..? ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಹಾಗೂ ರೈತರು ಪ್ರಧಾನಿ ಮೋದಿ ವಿರುದ್ಧ ಪ್ರತಿಭಟನೆ ಏಕೆ ನಡೆಸುತ್ತಿದ್ದಾರೆ ಗೊತ್ತಾ ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ.

ಪ್ರತಿಭಟನಾ ನಿರತ ರೈತರು ಕೇಂದ್ರ ಸಚಿವ ಅಜಯ್ ಮಿಶ್ರಾರನ್ನು ವಜಾಗೊಳಿಸಲು ಆಗ್ರಹಿಸುತ್ತಿದ್ದಾರೆ. ಹರ್ಯಾಣ, ದಿಲ್ಲಿ ಹಾಗೂ ಉತ್ತರ ಪ್ರದೇಶದಲ್ಲಿ ರೈತರ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಮೊಕದ್ದಮೆ ಕೈಬಿಡುವಂತೆ ಆಗ್ರಹಿಸುತ್ತಿದ್ದಾರೆ. ಕೃಷಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಜೀವ ಬಿಟ್ಟ 700 ಕೃಷಿಕರ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಅಷ್ಟೇ ಅಲ್ಲ, ಕನಿಷ್ಟ ಬೆಂಬಲ ಬೆಲೆ ಕುರಿತಂತೆ ಸಮಿತಿ ರಚಿಸಿ ಆದಷ್ಟು ಬೇಗ ನಿರ್ಧಾರ ಕೈಗೊಳ್ಳುವಂತೆ ಕೃಷಿಕರು ಆಗ್ರಹಿಸುತ್ತಿದ್ದಾರೆ ಎಂದು ಸುರ್ಜೇವಾಲಾ ವಿವರಿಸಿದ್ದಾರೆ.

ಕೃಷಿ ಕಾಯ್ದೆ ವಿರುದ್ಧ ಹೋರಾಟ ನಡೆಸುತ್ತಿದ್ದ ರೈತರು, ತಮ್ಮ ಪ್ರತಿಭಟನೆ ಕೈಬಿಟ್ಟ ವೇಳೆ ಸರ್ಕಾರ ನೀಡಿದ್ದ ಎಲ್ಲ ಭರವಸೆಗಳನ್ನೂ ಪ್ರಧಾನಿ ಮೋದಿ ಮರೆತಿದ್ದಾರೆ ಎಂದು ಟೀಕಿಸಿರುವ ರಣದೀಪ್ ಸಿಂಗ್ ಸುರ್ಜೇವಾಲಾ, ಪ್ರಧಾನಿ ಮೋದಿ ಅವರು ಸಮಾವೇಶ ನಡೆಸದೇ ವಾಪಸ್ ಹೋಗಿರೋದು ಅಲ್ಲಿ ಜನರೇ ಸೇರಿರಲಿಲ್ಲ ಎಂಬ ಕಾರಣಕ್ಕೆ ಎಂದು ಟಾಂಗ್ ಕೊಟ್ಟಿದ್ದಾರೆ.

ಅಂತಿಮವಾಗಿ ದೋಷಾರೋಪಣೆ ರಾಜಕೀಯ ಕೈಬಿಡಿ ಎಂದು ಆಗ್ರಹಿಸಿರುವ ರಣದೀಪ್ ಸಿಂಗ್ ಸುರ್ಜೇವಾಲಾ, ಬಿಜೆಪಿ ತನ್ನ ಕೃಷಿಕರ ವಿರೋಧಿ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು, ಸಮಾವೇಶ ನಡೆಸುವ ಮುನ್ನ ರೈತರ ಮಾತು ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಭಟನೆಯಿಂದ ಪಂಜಾಬ್‌ ಫ್ಲೈಓವರ್‌ನಲ್ಲಿ 20 ನಿಮಿಷ ಸಿಲುಕಿದ ಪ್ರಧಾನಿ ಮೋದಿ; ಭದ್ರತಾ ಲೋಪ ಎಂದ ಕೇಂದ್ರ



Read more

[wpas_products keywords=”deal of the day sale today offer all”]