Source : Online Desk
ಮುಂಬೈ: ಎಲ್ಗಾರ್ ಪರಿಷತ್- ಮಾವೊವಾದಿ ಸಂಪರ್ಕ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ 16 ಜನರ ಪೈಕಿ ಒಬ್ಬರಾಗಿದ್ದ ವಕೀಲೆ, ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್ ಮೂರು ವರ್ಷ ಜೈಲಿನಲ್ಲಿ ಕಳೆದ ಬಳಿಕ ಇಂದು ಬೆಳಗ್ಗೆ ಬಿಡುಗಡೆಯಾಗಿದ್ದಾರೆ.
ಬಾಂಬೆ ಹೈಕೋರ್ಟ್ ಡಿಸೆಂಬರ್ 1 ರಂದು ನೀಡಿರುವ ಜಾಮೀನು ಮಂಜೂರು ಆದೇಶಕ್ಕೆ ತಡೆ ನೀಡಬೇಕೆಂದು ರಾಷ್ಟ್ರೀಯ ತನಿಖಾ ದಳ- ಎನ್ ಐಎ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ಎರಡು ದಿನಗಳ ಹಿಂದೆ ತಿರಸ್ಕರಿಸಿತ್ತು.
ಹೈಕೋರ್ಟ್ ಆದೇಶದೊಂದಿಗೆ ಕಾರಣವಿಲ್ಲದೆ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ್ದ ನ್ಯಾಯಮೂರ್ತಿಗಳಾದ ಯು.ಯು ಲಲಿತ್, ಎಸ್ ಆರ್ ಭಟ್ ಮತ್ತು ಬೆಲಾ ಎಂ ತ್ರಿವೇದಿ ಅವರನ್ನೊಳಗೊಂಡ ನ್ಯಾಯಪೀಠ, ಸುಧಾ ಭಾರದ್ವಾಜ್ ಅವರ ಬಿಡುಗಡೆಯನ್ನು ಸ್ಪಷ್ಪಪಡಿಸಿತ್ತು. ಎನ್ ಐಎ ನ್ಯಾಯಾಲಯ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಸುಧಾ ಭಾರದ್ವಾಜ್ ಬೈಕುಲಾ ಮಹಿಳಾ ಕಾರಾಗೃಹದಿಂದ ಹೊರಗೆ ಬಂದರು.
60 ವರ್ಷದ ಸಾಮಾಜಿಕ ಕಾರ್ಯಕರ್ತೆ, ಪಾಸ್ ಪೋರ್ಟ್ ಸಲ್ಲಿಸಬೇಕು, ಮುಂಬೈನಲ್ಲಿಯೇ ವಾಸಿಸಬೇಕು, ನಗರದ ಹೊರಗೆ ಹೋಗಬೇಕಾದರೆ ನ್ಯಾಯಾಲಯದಿಂದ ಅನುಮತಿ ಪಡೆಯಬೇಕು ಎಂಬ ಷರತ್ತಿನೊಂದಿಗೆ ಎನ್ ಐಎ ವಿಶೇಷ ನ್ಯಾಯಾಲಯ ಹೇಳಿತು. 50 ಸಾವಿರ ರೂ. ತಾತ್ಕಾಲಿಕ ಬಾಂಡ್ ನಲ್ಲಿ ಸುಧಾ ಭಾರದ್ವಾಜ್ ಅವರನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯ ಸೂಚಿಸಿತ್ತು.
ಆಗಸ್ಟ್ 28, 2018ರಲ್ಲಿ ಭಾರದ್ವಾಜ್ ಅವರನ್ನು ಬಂಧಿಸಲಾಗಿತ್ತು. ನಂತರ ಗೃಹ ಬಂಧನದಲ್ಲಿ ಇಡಲಾಗಿತ್ತು. ತದನಂತರ ಅಕ್ಟೋಬರ್ 27, 2018ರಲ್ಲಿ ಕಸ್ಟಡಿಗೆ ಪಡೆಯಲಾಗಿತ್ತು.