ಹೈಲೈಟ್ಸ್:
- ಬುಲ್ಲಿ ಬಾಯಿ ಆಪ್‌ನಲ್ಲಿ ಮಹಿಳೆಯರ ಚಿತ್ರ ಬಳಸಿ ಹರಾಜು ಪ್ರಕರಣ
- ಉತ್ತರಾಖಂಡದಲ್ಲಿ 18 ವರ್ಷದ ಶ್ವೇತಾ ಸಿಂಗ್ ಎಂಬ ಯುವತಿ ಬಂಧನ
- ಕೋವಿಡ್‌ಗೆ ತಂದೆ, ಕ್ಯಾನ್ಸರ್‌ಗೆ ತಾಯಿಯನ್ನು ಕಳೆದುಕೊಂಡಿದ್ದ ಆರೋಪಿ
- ನೇಪಾಳದ ಸ್ನೇಹಿತ ಹೇಳಿದಂತೆ ಚಟುವಟಿಕೆ ನಡೆಸುತ್ತಿದ್ದ ಆರೋಪಿ ಶ್ವೇತಾ ಸಿಂಗ್
ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಕೆಲವು ಮುಸ್ಲಿಂ ಮಹಿಳೆಯರ ಚಿತ್ರಗಳನ್ನು ಅವರ ಒಪ್ಪಿಗೆ ಇಲ್ಲದ ಬಳಸಿಕೊಂಡು, ವರ್ಚ್ಯುವಲ್ ಹರಾಜು ಮಾಡುವ ಮೂಲಕ ವಿಕೃತಿ ಮೆರೆಯುತ್ತಿದ್ದ ‘ಬುಲ್ಲಿ ಬಾಯಿ’ ಆಪ್ ಪ್ರಕರಣದಲ್ಲಿ ಶ್ವೇತಾ ಸಿಂಗ್ ಪ್ರಮುಖ ಶಂಕಿತ ಆರೋಪಿಯಾಗಿದ್ದಾಳೆ. ಹಣಕ್ಕಾಗಿ ಆಕೆ ಈ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.
ಯಾರೀಕೆ ಶ್ವೇತಾ ಸಿಂಗ್?
ಮಹಿಳೆಯರನ್ನು ಹರಾಜಿಗೆ ಹಾಕುವ ಹೀನ ಕೃತ್ಯದಲ್ಲಿ ಪ್ರಮುಖ ಆರೋಪಿಯಾಗಿರುವ ಶ್ವೇತಾ ಸಿಂಗ್‌ಳದ್ದು ದುರಂತಮಯ ಬದುಕು. ಆದರೆ ಆಕೆ ಆ ದುರಂತವನ್ನು ಪಾಠವನ್ನಾಗಿ ಕಲಿತು ಸಮಾಜಮುಖಿಯಾಗಿ ಬದುಕುವ ದಾರಿ ಹಿಡಿಯಲಿಲ್ಲ. ಬದಲಾಗಿ ಚಿಕ್ಕ ವಯಸ್ಸಿನಲ್ಲಿಯೇ ದುರ್ಮಾರ್ಗಕ್ಕೆ ಕಾಲಿರಿಸಿದ್ದಾಳೆ. ಬಡ ಕುಟುಂಬದ ಆಕೆಗೆ ಇಬ್ಬರೂ ಪೋಷಕರಿಲ್ಲ. ಕಳೆದ ವರ್ಷ ಕೋವಿಡ್ 19 ಸೋಂಕಿಗೆ ತಂದೆಯನ್ನು ಕಳೆದುಕೊಂಡಿದ್ದಳು. ಅದಕ್ಕೂ ಮುನ್ನ ಆಕೆಯ ತಾಯಿ ಕ್ಯಾನ್ಸರ್‌ಗೆ ಬಲಿಯಾಗಿದ್ದರು. ಆಕೆಯ ಅಕ್ಕ ವಾಣಿಜ್ಯ ಪದವೀಧರೆ. ತಂಗಿ ಮತ್ತು ತಮ್ಮ ಇಬ್ಬರೂ ಶಾಲಾ ವಿದ್ಯಾರ್ಥಿಗಳು. ಶ್ವೇತಾ ಸಿಂಗ್ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದಳು.
ಆಕೆ ಜಾಟ್‌ಖಲ್ಸಾ07 ಎಂಬ ಹೆಸರಿನ ನಕಲಿ ಟ್ವಿಟ್ಟರ್ ಖಾತೆ ನಿರ್ವಹಣೆ ಮಾಡುತ್ತಿದ್ದಳು. ಇದರಲ್ಲಿ ಆಕೆ ದ್ವೇಷ ಹೇಳಿಕೆಗಳು ಮತ್ತು ಆಕ್ಷೇಪಾರ್ಹ ಫೋಟೊ ಹಾಗೂ ಕಾಮೆಂಟ್‌ಗಳನ್ನು ಹಾಕುತ್ತಿದ್ದಳು. ಆಕೆಯದೇ ನಿಲುವುಗಳನ್ನು ಹೊಂದಿದ್ದ ಅನೇಕರು ಟ್ವಿಟ್ಟರ್‌ನಲ್ಲಿ ಆಕೆಯನ್ನು ಹಿಂಬಾಲಿಸುತ್ತಿದ್ದರು.
ನೇಪಾಳ ನಂಟು
ಶ್ವೇತಾ ಸಿಂಗ್, ನೇಪಾಳ ಮೂಲದ ಸ್ನೇಹಿತನ ಸೂಚನೆಯಂತೆ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಗಿಯೊಯು ಎಂದು ಗುರುತಿಸಲಾದ ನೇಪಾಳ ಪ್ರಜೆ ಆಪ್‌ನಲ್ಲಿ ನಡೆಸಬೇಕಾದ ಚಟುವಟಿಕೆಗಳ ಬಗ್ಗೆ ಸೂಚನೆ ನೀಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ಶ್ವೇತಾ ಸಿಂಗ್ ಬಾಯಿ ಬಿಟ್ಟಿರುವುದಾಗಿ ತನಿಖಾ ತಂಡ ತಿಳಿಸಿದೆ. ನೇಪಾಳ ಪ್ರಜೆ ಹಾಗೂ ಆರೋಪಿಗಳ ಜತೆಗೆ ಸೇರಿಕೊಂಡಿರಬಹುದಾದ ಇತರರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆಕೆಯನ್ನು ಉದಾಮ್ ಸಿಂಗ್ ನಗರ ಜಿಲ್ಲೆಯ ರುದ್ರಾಪುರದಲ್ಲಿ ವಶಕ್ಕೆ ಪಡೆಯಲಾಗಿತ್ತು. ಬಳಿಕ ಜನವರಿ 5ರವರೆಗೂ ಮುಂಬಯಿ ಪೊಲೀಸರು ಪ್ರಯಾಣ ಬಂಧನಕ್ಕೆ ಕೋರಿದ್ದರು. ಬೆಂಗಳೂರಿನಲ್ಲಿ ಬಂಧಿತನಾಗಿದ್ದ ವಿಶಾಲ್ ಕುಮಾರ್, ಆಕೆಯ ಹೆಸರನ್ನು ಬಾಯ್ಬಿಟ್ಟಿದ್ದ. ಇದಕ್ಕೂ ಮುನ್ನ ವಿವಾದ ಸೃಷ್ಟಿಸಿದ್ದ ‘ಸುಲ್ಲಿ ಡೀಲ್ಸ್’ ಆಪ್‌ನಲ್ಲಿ ಕೂಡ ವಿಶಾಲ್ ಪಾತ್ರದ ಬಗ್ಗೆ ಮುಂಬಯಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಿಟ್‌ಹಬ್ ಎಂಬ ವೇದಿಕೆ ಮೂಲಕ ಈ ಎರಡೂ ಆಪ್‌ಗಳು ಚಟುವಟಿಕೆ ನಡೆಸುತ್ತಿದ್ದವು.
Read more
[wpas_products keywords=”deal of the day sale today offer all”]