ಹೈಲೈಟ್ಸ್:
- ವಿಶಾಖ ಪಟ್ಟಣಂನಲ್ಲಿ ಮೀನುಗಾರರ ನಡುವೆ ಮಾರಾಮಾರಿ
- ಬೋಟ್‌ಗೆ ಬೆಂಕಿ ಹಂಚಿ ಪ್ರತೀಕಾರ, ಸ್ಥಳದಲ್ಲಿ ಉದ್ವಿಗ್ನ ವಾತಾವರಣ
- ಸಮುದ್ರ ತೀರದ ಗ್ರಾಮದಲ್ಲಿ 144 ಸೆಕ್ಷನ್‌ನಡಿ ನಿಷೇಧಾಜ್ಞೆ ಜಾರಿ
ಸಾಂಪ್ರದಾಯಿಕ ದೋಣಿಯಲ್ಲಿ ಮೀನುಗಾರಿಕೆ ಮಾಡುವವರು ಹಾಗೂ ರಿಂಗ್ ನೆಟ್ ಬಳಸಿ ಮೀನುಗಾರಿಕೆ ಮಾಡುವ ಮೀನುಗಾರರ ನಡುವೆ ಸಂಘರ್ಷ ನಡೆದಿದೆ. ನಿಷೇಧಿತ ಪ್ರದೇಶದಲ್ಲಿ ಮೀನುಗಾರರ ಗುಂಪೊಂದು ರಿಂಗ್ ನೆಟ್ ಬಳಸಿ ಮೀನುಗಾರಿಕೆ ಮಾಡಿದ್ದೇ ಸಂಘರ್ಷ ಉಂಟಾಗಲು ಕಾರಣ.
ನಿಷೇಧಿತ ವಲಯದಲ್ಲಿ ರಿಂಗ್ ನೆಟ್ ಬಳಸಿ ಮೀನುಗಾರಿಕೆ ಮಾಡುತ್ತಿದ್ದ ಮೀನುಗಾರರಲ್ಲಿ, ಇಲ್ಲಿ ಮೀನುಗಾರಿಕೆ ನಡೆಸಿದರೆ ನಮಗೆ ಏನೂ ಸಿಗುವುದಿಲ್ಲ. ಹೀಗಾಗಿ ಇಲ್ಲಿ ಮೀನುಗಾರಿಕೆ ನಡೆಸಬೇಡಿ ಎಂದು ಪೆಡಾ ಜಲರಿಪೆಟ್ಟ ಪ್ರದೇಶದ ಸಾಂಪ್ರದಾಯಿಕ ಮೀನುಗಾರರು ಮನವಿ ಮಾಡಿದ್ದರು.
ಇದಾದ ಬಳಿಕ ಗುರುವಾರ ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಘಟನೆಯಲ್ಲಿ ಆರು ಮಂದಿಗೆ ಗಾಯ ಉಂಟಾಗಿದೆ.
ಅಲ್ಲದೇ ಒಂದು ಗುಂಪು ಮತ್ತೊಂದು ಗುಂಪನ್ನು ಯಾಂತ್ರೀಕೃತ ಬೋಟ್‌ನಲ್ಲಿ ಹಿಂಬಾಲಿಸಿಕೊಂಡು ಹೋಗಿ ಒಂದು ದೋಣಿಗೆ ಬೆಂಕಿ ಹಚ್ಚಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿದೆ. ಈ ಸಂಬಂಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸಮುದ್ರ ದಡದಲ್ಲಿರುವ ಮೀನುಗಾರರ ಕುಟುಂಬ ಸಾಂಪ್ರದಾಯಿ ದೋಣಿ ಬಳಸಿ ಮೀನುಗಾರಿಕೆ ನಡೆಸುತ್ತಿತ್ತು. ಅಲ್ಲದೇ ಅವರು ಮೀನುಗಾರಿಕೆ ನಡೆಸುವ ಪ್ರದೇಶದಲ್ಲಿ, ಯಾವುದೇ ಅತ್ಯಾಧುನಿಕ ಬೋಟ್ ಹಾಗೂ ರಿಂಗ್ ನೆಟ್‌ಗಳನ್ನು ಬಳಸಿ ಮೀನುಗಾರಿಕೆ ಮಾಡುವುದನ್ನು ನಿಷೇಧಿಸಲಾಗಿತ್ತು. ಅಲ್ಲದೇ ಹೈ ಕೋರ್ಟ್ ಕೂಡ, ಸಮುದ್ರ ತೀರದಿಂದ 8 ಕಿ.ಮಿ ಆಚೆಯಷ್ಟೇ ರಿಂಗ್ ನೆಟ್ ಬಳಸಿ ಮೀನುಗಾರಿಕೆ ನಡೆಸಬೇಕು ಎಂದು ಆದೇಶ ಕೂಡ ನೀಡಿತ್ತು. ಈ ಆದೇಶವನ್ನು ಆಗಂತುಕ ಮೀನುಗಾರರ ಗುಂಪು ಉಲ್ಲಂಘಿಸಿದೆ ಎಂದು ಸ್ಥಳೀಯ ಮೀನುಗಾರರು ಆರೋಪಿಸಿದ್ದಾರೆ.
ಇನ್ನು ಘಟನೆಯಿಂದ ಸಮುದ್ರ ತೀರದಲ್ಲಿರುವ ಹಳ್ಳಿಗಳಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದ್ದು, ಪೆಡಾ ಜಲರಿಪೆಟ್ಟ ಹಳ್ಳಿಯಾದ್ಯಂತ ಐಪಿಸಿ ಕಾಯ್ದೆ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ. ಅಲ್ಲದೇ ಸಮುದ್ರ ತೀರ ಹಾಗೂ ಹಳ್ಳಿಯಾದ್ಯಂತ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರತಿತೊಬ್ಬರ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎರಡೂ ಗುಂಪುಗಳ ನಡುವೆ ಮಾತುಕತೆ ನಡೆಸಿ ಸಮಸ್ಯೆಯನ್ನು ಇತ್ಯರ್ಥ ಮಾಡಲಾಗುವುದು ಎಂದು ಸ್ಥಳೀಯ ಪೊಲೀಸ್ ಆಯುಕ್ತ ಮನೀಶ್ ಕುಮಾರ್ ಹೇಳಿದ್ದಾರೆ. ಋಷಿಕೊಂಡ ಕರಾವಳಿ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಪ್ರಾರಂಭ ಮಾಡಿದ್ದಾರೆ.
Read more
[wpas_products keywords=”deal of the day sale today offer all”]