Karnataka news paper

ಪರಿಷತ್‌ ಪ್ರತಿಪಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸ್ಪರ್ಧೆ? ಕುತೂಹಲ ಮೂಡಿಸಿದ ಸಿಎಂ ಇಬ್ರಾಹಿಂ -ಸಿದ್ದರಾಮಯ್ಯ ಭೇಟಿ


ಬೆಂಗಳೂರು: ಜನವರಿ 5ಕ್ಕೆ ತೆರವಾಗಲಿರುವ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ನಡೆದಿದೆ. ಪರಿಷತ್‌ ಪ್ರತಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ್‌ ಅವರ ಸದಸ್ಯತ್ವ ಜ. 5ಕ್ಕೆ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಲವರು ಸ್ಥಾನ ಪಡೆಯಲು ಪ್ರಯತ್ನ ನಡೆಸಿದ್ದಾರೆ.

ಪ್ರತಿಪಕ್ಷ ನಾಯಕ ಸ್ಥಾನದ ಕೆಲ ಆಕಾಂಕ್ಷಿಗಳು ಪಕ್ಷದ ಹಿರಿಯ ನಾಯಕರನ್ನು ಭೇಟಿಯಾಗತೊಡಗಿದ್ದಾರೆ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಅವರು ಭಾನುವಾರ ಭೇಟಿಯಾಗಿ ಕೆಲಹೊತ್ತು ಚರ್ಚಿಸಿದರು. ಈ ಸಂದರ್ಭದಲ್ಲಿ ಪರಿಷತ್‌ ಪ್ರತಿಪಕ್ಷ ಸ್ಥಾನದ ಬಗ್ಗೆಯೂ ಚರ್ಚೆಯಾಯಿತು ಎನ್ನಲಾಗಿದೆ. ಭೇಟಿ ಬಳಿಕ ಪ್ರತಿಕ್ರಿಯಿಸಿದ ಸಿ.ಎಂ. ಇಬ್ರಾಹಿಂ, ‘ಯೌವನದಲ್ಲಿ ಮದುವೆ ಬೇಡ ಎಂದು ಯಾರು ಹೇಳುತ್ತಾರೆ. ಪರಿಷತ್‌ನಲ್ಲಿ ನನಗೆ ಈಗ ಯೌವನ. ಪರಿಷತ್‌ ಪ್ರತಿಪಕ್ಷ ಸ್ಥಾನದ ಬಗ್ಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಇಬ್ಬರೂ ನನ್ನೊಂದಿಗೆ ಮಾತನಾಡಿದ್ದಾರೆ. ದಿಲ್ಲಿಯಿಂದಲೂ ಕರೆ ಬಂದಿತ್ತು. ಏನಾಗುವುದೋ ನೋಡೋಣ’ ಎಂದು ಹೇಳಿದರು.
ಅಧಿವೇಶನದಲ್ಲಿ ಗದ್ದಲ, ಬಹಿಷ್ಕಾರಕ್ಕೆ ಅವಕಾಶ ಕೊಡಬಾರದು ಎಂದು ತಿಳಿಸಿದ್ದೇವೆ; ಹೊರಟ್ಟಿ
ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಲಿದ್ದಾರೆ ಎಂಬ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿ, ‘ನಾನು ಪಕ್ಷ ತೊರೆಯುವುದಾಗಿ ಯಾರು ಚರ್ಚಿಸಿದ್ದಾರೆ. ಮಾಧ್ಯಮಗಳಲ್ಲಷ್ಟೇ ಚರ್ಚೆಯಾಗುತ್ತಿದೆ. ಇದೆಲ್ಲಾ ಬಜಾರ್‌ನಲ್ಲಿ ಚರ್ಚಿಸುವ ವಿಚಾರವಲ್ಲ. ದೇಶದಲ್ಲಿ ಕೆಟ್ಟ ಪರಿಸ್ಥಿತಿ ಇದೆ. ಕೋವಿಡ್‌ ಕಾಣಿಸಿಕೊಂಡು ಆರ್ಥಿಕ ಸ್ಥಿತಿಯೂ ಹದಗೆಟ್ಟಿದೆ. ಈ ದೇಶ ಉಳಿಯಬೇಕು. ಕಾಂಗ್ರೆಸ್‌ ನಾಯಕರು ನ್ಯಾಯ ನೀಡುತ್ತಾರೆ ಎಂಬ ವಿಶ್ವಾಸವಿದೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಜತೆಗೂ ವಿಶ್ವಾಸವಿದೆ’ ಎಂದು ಮಾರ್ಮಿಕವಾಗಿ ನುಡಿದರು.

ಕೆಪಿಸಿಸಿ ಕಾಯಾಧ್ಯಕ್ಷ ಸಲೀಂ ಅಹ್ಮದ್‌, ಪರಿಷತ್‌ ಸದಸ್ಯ ಅಲ್ಲಂ ವೀರಭದ್ರಪ್ಪ ಅವರು ಭಾನುವಾರ ಸಿದ್ದರಾಮಯ್ಯ ಅವರನ್ನು ನಿವಾಸದಲ್ಲಿ ಭೇಟಿಯಾಗಿ ಕೆಲ ಹೊತ್ತು ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.



Read more