Karnataka news paper

WHO ಹೇಳಿಕೆಗಳಲ್ಲೇ ವಿರೋಧಾಭಾಸ: ಓಮಿಕ್ರಾನ್‌ನಿಂದ ಹೀಗೊಂದು ಅಪಾಯ ಇದೆ ಎಂದ ವಿಶ್ವ ಆರೋಗ್ಯ ಸಂಸ್ಥೆ!


ಹೈಲೈಟ್ಸ್‌:

  • ಓಮಿಕ್ರಾನ್ ತಳಿ ಪ್ರಕರಣದ ಏರಿಕೆಯಿಂದ ಹೊಸ ತಳಿಗಳು ಸೃಷ್ಟಿಯಾಗಬಹುದು
  • ಓಮಿಕ್ರಾನ್ ತಳಿ ಈಗ ಮಾರಕವಾಗುತ್ತಿದೆ, ಅದು ಸಾವಿಗೆ ಕಾರಣವಾಗಬಹುದು
  • ನಾವು ಬಹಳ ಅಪಾಯಕಾರಿ ಹಂತದಲ್ಲಿ ಇದ್ದೇವೆ- ಕ್ಯಾಥರಿನ್ ಸ್ಮಾಲ್‌ವುಡ್

ಸ್ಟಾಕ್‌ಹೋಮ್: ಓಮಿಕ್ರಾನ್ ತಳಿ ಸೋಂಕಿನ ಕೊರೊನಾ ವೈರಸ್, ಒಟ್ಟಾರೆ ಪ್ರಕರಣಗಳ ಭಾರಿ ಏರಿಕೆಗೆ ಕಾರಣವಾಗಲಿದ್ದರೂ, ಮಾರಣಾಂತಿಕವಲ್ಲ. ಹೀಗಾಗಿ ಕೋವಿಡ್ 19 ಪ್ರಕರಣಗಳ ಏರಿಕೆ ಬಗ್ಗೆ ತೀರಾ ಕಳವಳ ಪಡುವ ಅಗತ್ಯವಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ (WHO) ಓಮಿಕ್ರಾನ್ ಪ್ರಕರಣಗಳ ಏರಿಕೆ ಬಗ್ಗೆ ಮತ್ತೊಂದು ಆತಂಕ ವ್ಯಕ್ತಪಡಿಸಿದೆ. ಅದು ಹೊಸ ತಳಿಗಳ ಸೃಷ್ಟಿ. ಜಗತ್ತಿನಾದ್ಯಂತ ಓಮಿಕ್ರಾನ್ ಪ್ರಕರಣಗಳಲ್ಲಿ ಹೆಚ್ಚಳ ಆಗುತ್ತಿರುವುದು ಹೊಸ ಮತ್ತು ಇನ್ನೂ ಹೆಚ್ಚು ಅಪಾಯಕಾರಿಯಾದ ತಳಿಗಳ ಸೃಷ್ಟಿಗೆ ಎಡೆಮಾಡಿಕೊಡಲಿದೆ ಎಂದು ಡಬ್ಲ್ಯೂಎಚ್‌ಒ ಮಂಗಳವಾರ ಎಚ್ಚರಿಕೆ ನೀಡಿದೆ.

ಓಮಿಕ್ರಾನ್ ಸೋಂಕು ಜಗತ್ತಿನ ಎಲ್ಲೆಡೆ ಕಾಳ್ಗಿಚ್ಚಿನಂತೆ ವ್ಯಾಪಿಸುತ್ತಿದೆ. ಇದು ಆರಂಭದಲ್ಲಿ ಇದ್ದ ಆತಂಕಕ್ಕಿಂತ ಕಡಿಮೆ ತೀವ್ರತೆ ಹೊಂದಿದೆ. ಹೀಗಾಗಿ ಅದು ಹರಡಿದಷ್ಟೇ ವೇಗವಾಗಿ ಸಾಂಕ್ರಾಮಿಕವು ಕಡಿಮೆಯಾಗಿ, ಜನಜೀವನ ಸಹಜ ಸ್ಥಿತಿಗೆ ಮರಳಲಿದೆ ಎಂಬ ಭರವಸೆ ಮೂಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳ ಹೇಳಿಕೆಗಳೇ ಜನರಲ್ಲಿ ಗೊಂದಲ ಮೂಡಿಸುವಂತಿದೆ. ಕೆಲವು ದಿನಗಳ ಹಿಂದಷ್ಟೇ ಡಬ್ಲ್ಯೂಎಚ್‌ಒ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು, ಓಮಿಕ್ರಾನ್ ತಳಿ ಮಾರಕವಾಗುವುದಿಲ್ಲ. ಐಸಿಯು, ಆಕ್ಸಿಜನ್‌ ಹೊರೆ ಉಂಟಾಗುವುದಿಲ್ಲ. ಹೊರ ರೋಗಿಗಳ ವಿಭಾಗಕ್ಕೆ ಹೆಚ್ಚಿನ ಹೊರೆಯಾಗಲಿದೆ ಎಂದು ಹೇಳಿದ್ದರು.
ಹೊರ ರೋಗಿಗಳ ವಿಭಾಗದ ಮೇಲೆ ಭಾರಿ ಹೊರೆ ಬೀಳಲಿದೆ: ಸೌಮ್ಯಾ ಸ್ವಾಮಿನಾಥನ್ ಎಚ್ಚರಿಕೆ
ಆದರೆ ಡಬ್ಲ್ಯೂಎಚ್‌ಒದ ಹಿರಿಯ ತುರ್ತುಸೇವೆಗಳ ಅಧಿಕಾರಿ ಕ್ಯಾಥರಿನ್ ಸ್ಮಾಲ್‌ವುಡ್, ಅಪಾಯದ ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದ್ದಾರೆ. ಹೆಚ್ಚುತ್ತಿರುವ ಸೋಂಕಿನ ಪ್ರಮಾಣವು ವಿರುದ್ಧ ಪರಿಣಾಮ ಉಂಟುಮಾಡಬಹುದು ಎಂದು ಅವರು ಹೇಳಿದ್ದಾರೆ.

‘ಓಮಿಕ್ರಾನ್ ಹೆಚ್ಚು ಹರಡಿದಂತೆ, ಅದು ಹೆಚ್ಚು ಪ್ರಸಾರವಾದಂತೆ ಮತ್ತು ಅದು ಹೆಚ್ಚು ಪುನರಾವರ್ತನೆಯಾದಂತೆ ಅದು ಹೊಸ ತಳಿಯನ್ನು ಹೊರ ಹಾಕುವ ಸಾಧ್ಯತೆ ಅಧಿಕ. ಈಗ ಓಮಿಕ್ರಾನ್ ಮಾರಕವಾಗಿದೆ. ಅದು ಸಾವಿಗೆ ಕಾರಣವಾಗಬಹುದು. ಅದು ಬಹುಶಃ ಡೆಲ್ಟಾಗಿಂತ ಸ್ವಲ್ಪ ಕಡಿಮೆ ಇರಬಹುದು. ಆದರೆ ಮುಂದಿನ ತಳಿ ಯಾವ ಸ್ವರೂಪದ್ದಾಗಿರಬಹುದು ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ’ ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

‘ನಾವು ಬಹಳ ಅಪಾಯಕಾರಿ ಹಂತದಲ್ಲಿ ಇದ್ದೇವೆ. ಪೂರ್ವ ಯುರೋಪ್ ಭಾಗದಲ್ಲಿ ಸೋಂಕಿನ ಪ್ರಮಾಣ ಬಹಳ ಗಣನೀಯವಾಗಿ ಏರಿಕೆಯಾಗುತ್ತಿರುವುದನ್ನು ನೋಡುತ್ತಿದ್ದೇವೆ. ಅದರ ಪೂರ್ಣ ಮಟ್ಟದ ಪರಿಣಾಮ ನಮಗೆ ಇನ್ನೂ ಸ್ಪಷ್ಟವಾಗಿಲ್ಲ’ ಎಂದು ಸ್ಮಾಲ್‌ವುಡ್ ತಿಳಿಸಿದ್ದಾರೆ. Omicron: ಬರಲಿದೆ ಕೋವಿಡ್ ‘ಸುನಾಮಿ’, ನೆಲಕಚ್ಚಲಿದೆ ಆರೋಗ್ಯ ವ್ಯವಸ್ಥೆ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ಡೆಲ್ಟಾ ತಳಿಗೆ ಹೋಲಿಸಿದರೆ ಆಸ್ಪತ್ರೆಗೆ ದಾಖಲಾಗುವ ವ್ಯಕ್ತಿಗಳ ಸಂಖ್ಯೆಯಲ್ಲಿ ಕಡಿಮೆ ಅಪಾಯ ಇರಬಹುದು. ಒಟ್ಟಾರೆಯಾಗಿ ಓಮಿಕ್ರಾನ್ ಅಧಿಕ ಸಂಖ್ಯೆಯ ಪ್ರಕರಣಗಳ ಕಾರಣದಿಂದ ಬಹುದೊಡ್ಡ ಅಪಾಯ ತಂದೊಡ್ಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿರುವುದನ್ನು ನೀವು ಗಮನಿಸಿದಾಗ, ಅದು ಭಾರಿ ಸಂಖ್ಯೆಯ ಜನರನ್ನು ತೀವ್ರ ಕಾಯಿಲೆಗೆ ನೂಕಬಹುದು. ಬಳಿಕ ಆಸ್ಪತ್ರೆ ದಾಖಲಿಸುವಿಕೆ ಹಾಗೂ ಮರಣ ಪ್ರಮಾಣವೂ ಹೆಚ್ಚಬಹುದು’ ಎಂದು ಹೇಳಿದ್ದಾರೆ.

‘ಉತ್ತಮ ಸೌಲಭ್ಯದ, ಸಾಮರ್ಥ್ಯದ ಆರೋಗ್ಯ ವ್ಯವಸ್ಥೆಗಳು ಕೂಡ ಈ ಸನ್ನಿವೇಶದಲ್ಲಿ ಪರದಾಡುತ್ತಿವೆ. ಓಮಿಕ್ರಾನ್ ಪ್ರಕರಣಗಳು ಮೇಲ್ಮುಖವಾಗಿ ಸಾಗುತ್ತಿರುವ ಕಡೆಗಳಲ್ಲಿ ಇದು ಇನ್ನಷ್ಟು ಬಿಕ್ಕಟ್ಟು ಸೃಷ್ಟಿಸಬಹುದು’ ಎಂದು ತಿಳಿಸಿದ್ದಾರೆ.



Read more

[wpas_products keywords=”deal of the day sale today offer all”]