Karnataka news paper

ವೆಂಟಿಲೇಟರ್‌ ಇಲ್ಲದೆ ಶಸ್ತ್ರ ಚಿಕಿತ್ಸೆ ನಡೆಸಿ, ಮಹಿಳೆ ಸಾವಿಗೆ ಕಾರಣರಾದ ವೈದ್ಯರಿಗೆ ಶಿಕ್ಷೆ


| Vijaya Karnataka | Updated: Jan 5, 2022, 7:52 AM

ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸೌಲಭ್ಯ ಇಲ್ಲದೆಯೂ ಮಹಿಳೆಗೆ ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ಬೀದರ್‌ನ ಜೆಎಂಎಫ್‌ಸಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಅಲ್ಲದೆ ಆ ಮಹಿಳೆ ಮೃತಪಟ್ಟ ಬಳಿಕವೂ ಚಿಕಿತ್ಸೆ ನೀಡಿದ್ದ ಮತ್ತೊಬ್ಬ ವೈದ್ಯರಿಗೂ ಶಿಕ್ಷೆ ವಿಧಿಸಲಾಗಿದೆ. ಇದು ಎಂಟು ವರ್ಷಗಳ ಹಳೆಯ ಪ್ರಕರಣವಾಗಿದೆ.

 

court

ಹೈಲೈಟ್ಸ್‌:

  • 2014ರಲ್ಲಿ ಗರ್ಭಕೋಶದ ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯ ಸಾವು ಪ್ರಕರಣ
  • ಮೂವರು ವೈದ್ಯರಿಗೆ ಜೆಎಂಎಫ್‌ಸಿ ನ್ಯಾಯಾಲಯದಿಂದ ಶಿಕ್ಷೆ ಪ್ರಕಟ
  • ಐದು ಗಂಟೆ ಶಸ್ತ್ರಚಿಕಿತ್ಸೆ ಮಾಡಿ ಬೇರೆ ಆಸ್ಪತ್ರೆಗೆ ಸಾಗಿಸಿದ್ದ ವೈದ್ಯರು
  • ಮಹಿಳೆ ಮೃತಪಟ್ಟಿದ್ದರೂ ಅದನ್ನು ಮುಚ್ಚಿಟ್ಟು ಚಿಕಿತ್ಸೆ ಮುಂದುವರಿಕೆ

ಬೀದರ್‌: ವೆಂಟಿಲೇಟರ್‌ ಇಲ್ಲದೆ ಗರ್ಭಕೋಶದ ಶಸ್ತ್ರ ಚಿಕಿತ್ಸೆ ಮಾಡಿ, ರೋಗಿಯ ಸಾವಿಗೆ ಕಾರಣರಾದ ಇಬ್ಬರು ವೈದ್ಯರಿಗೆ ಹಾಗೂ ಒಬ್ಬ ಸಿಬ್ಬಂದಿ ಹಾಗೂ ಮೃತ ಮಹಿಳೆಗೆ ಚಿಕಿತ್ಸೆ ನೀಡಿದ್ದ ಮತ್ತೋರ್ವ ವೈದ್ಯನಿಗೆ ಇಲ್ಲಿನ 2ನೇ ಸಿವಿಲ್‌ (ಹಿ) ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಜೈಲು ಶಿಕ್ಷೆ ಜತೆಗೆ ದಂಡ ವಿಧಿಸಿ ತೀರ್ಪು ನೀಡಿದೆ.

ಬೀದರ್‌ನ 2ನೇ ಸಿವಿಲ್‌ (ಹಿ) ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅಬ್ದುಲ್‌ ಖಾದರ್‌ ಅವರು ಪ್ರಕರಣದ ಕುರಿತು ವಿಚಾರಣೆ ನಡೆಸಿ, ಸಾಕ್ಷ್ಯಾಧಾರಗಳನ್ನು ಪರಿಶೀಲನೆ ನಡೆಸಿ, ಮೂವರು ಆರೋಪಿತರಿಗೆ ಶಿಕ್ಷೆಯ ತೀರ್ಪು ಪ್ರಕಟಿಸಿದ್ದಾರೆ. ಬೀದರ್‌ನ ಜೆಪಿ ನಗರದ ಡಾ. ಬಿರಾದಾರ್‌ ಶೂಶ್ರೂತ ನರ್ಸಿಂಗ್‌ ಹೋಂನ ಡಾ. ರಾಜಶ್ರೀ ಬಿರಾದಾರ್‌, ಡಾ. ವೈಜನಾಥ ಬಿರಾದಾರ್‌,ಸಾಯಿಬಣ್ಣ ಮಾಣಿಕ ಅಂಬಾಟೆ ಹಾಗೂ ಡಾ. ರಾಜಶೇಖರ ಪಾಟೀಲ್‌ ಶಿಕ್ಷೆಗೊಳಗಾದವರು.
ಕೊಡಗಿನ ಹಾಡಿಯಲ್ಲಿ ನವಜಾತ ಶಿಶುಗಳ ಅಕಾಲಿಕ ಮರಣ: ಪೋಷಕರಲ್ಲಿ ಆತಂಕ..!
ಸೆಕ್ಷನ್‌ 304 (ಎ) ಹಾಗೂ ಐಪಿಸಿ 34 ಅಪರಾಧಕ್ಕೆ 2 ವರ್ಷ ಜೈಲು ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ, ದಂಡ ಪಾವತಿ ಮಾಡದೇ ಇದ್ದಲ್ಲಿ6 ತಿಂಗಳ ಸಾದಾ ಕಾರಾಗೃಹ ವಾಸದ ಶಿಕ್ಷೆ ನೀಡಲಾಗಿದೆ. 4ನೇ ಆರೋಪಿ ಡಾ. ರಾಜಶೇಖರ್‌ ಪಾಟೀಲ್‌ ಅವರಿಗೆ ಸೆಕ್ಷನ್‌ 202 ಜತೆ ಐಪಿಸಿ 34 ಅಪರಾಧಕ್ಕೆ 6 ತಿಂಗಳು ಜೈಲು ಶಿಕ್ಷೆ ಹಾಗೂ 5000 ರೂ. ದಂಡ ವಿಧಿಸಲಾಗಿದೆ. ದಂಡ ಭರಿಸಲು ಸಾಧ್ಯವಾಗದೇ ಇದ್ದಲ್ಲಿ 1 ತಿಂಗಳ ಸಾದಾ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದ್ದಾರೆ. ಸರಕಾರಿ ಅಭಿಯೋಜಕರಾದ ಶರಣಗೌಡ ಹಾಗೂ ಸಹಾಯಕ ಸರಕಾರಿ ಅಭಿಯೋಜ ಕರಾದ ಸುನಿಲ್‌ ಕಾಂಬಳೆ ವಾದ ಮಂಡಿಸಿದ್ದರು.
ರಾಜಾಜಿ ನಗರದ ಇಎಸ್‌ಐ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಮೃತರ ಸಂಬಂಧಿಕರ ಆಕ್ರೋಶ
ಘಟನೆಯ ಹಿನ್ನೆಲೆ
ಇಲ್ಲಿನ ಜೆಪಿ ನಗರದಲ್ಲಿರುವ ಡಾ. ಬಿರಾದಾರ್‌ ಶುಶ್ರೂತ ನರ್ಸಿಂಗ್‌ ಹೋಂ ಗೆ 2014ರ ಅ. 12 ರಂದು ಸಂಪಾವತಿ ಘಾಳೆಪ್ಪ ಔರಾದ್‌ಕರ್‌ ಎನ್ನುವವರನ್ನು ಗರ್ಭಕೋಶದ ಶಸ್ತ್ರ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಡಾ. ರಾಜಶ್ರೀ ಬಿರಾದಾರ್‌, ಡಾ. ವೈಜನಾಥ ಬಿರಾದಾರ್‌, ಸಾಯಿಬಣ್ಣ ಅವರು ಸಂಪಾವತಿ ಅವರಿಗೆ 5 ಗಂಟೆ ಕಾಲ ಶಸ್ತ್ರ ಚಿಕಿತ್ಸೆ ಮಾಡಿ, ಕುಟುಂಬಸ್ಥರಿಗೆ ಯಾವುದೇ ಮಾಹಿತಿ ನೀಡಲಿಲ್ಲ. ರಾತ್ರಿ 10ರ ವೇಳೆ, ವೈದ್ಯರು ತಾವೇ ನಿರ್ಧಾರ ಕೈಗೊಂಡು ಬೀದರ್‌ನ ಡಾ. ರಾಜಶೇಖರ ಪಾಟೀಲ್‌ ಅವರ ಆಸ್ಪತ್ರೆಗೆ ಅಂಬ್ಯುಲೆನ್ಸ್‌ ಮೂಲಕ ವರ್ಗಾಯಿಸಿದ್ದರು. ಈ ಕುರಿತು ವೈದ್ಯರಿಗೆ ಕುಟುಂಬಸ್ಥರು ವಿಚಾರಿಸಿದಾಗ, ನಮ್ಮ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಸೌಲಭ್ಯ ಇಲ್ಲದ್ದಕ್ಕೆ ಬೇರೆ ಆಸ್ಪತ್ರೆಗೆ ದಾಖಲಿಸಿದ್ದರು. ವೆಂಟಿಲೇಟರ್‌ ಇಲ್ಲದೆ ಶಸ್ತ್ರ ಚಿಕಿತ್ಸೆ ಮಾಡಿದ್ದರಿಂದ ವೈದ್ಯರ ನಿರ್ಲಕ್ಷದಿಂದ ಸಂಪಾವತಿ ಮೃತಪಟ್ಟಿದ್ದರು. ಬಳಿಕ ವೈದ್ಯ ಡಾ. ರಾಜಶೇಖರ ಪಾಟೀಲ್‌ ಅವರು ಸಂಪಾವತಿ ಮೃತಪಟ್ಟರೂ ಆಕೆಯ ಮರಣವನ್ನು ಮುಚ್ಚಿಟ್ಟು, ಚಿಕಿತ್ಸೆ ಮುಂದುವರೆಸಿದ್ದರು ಎನ್ನುವುದು ಪಿಎಂಇ ಮರಣೋತ್ತರ ಪರೀಕ್ಷೆ ಯಿಂದ ತಿಳಿದು ಬಂದಿದೆ. ಹೀಗಾಗಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಬೀದರ್‌ ನೂತನ ನಗರ ಪೊಲೀಸ್‌ ಠಾಣೆಯ ಸಿಬ್ಬಂದಿ ದೋಷಾರೋಪಣೆ ಸಲ್ಲಿಸಿದ್ದರು.

ಸಮೀಪದ ನಗರಗಳ ಸುದ್ದಿ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ

Web Title : court imposes imprisonment and fine against three doctors over death of a woman patient
Kannada News from Vijaya Karnataka, TIL Network



Read more

[wpas_products keywords=”deal of the day sale today offer all”]