ಬೆಂಗಳೂರು: ಬಿಜೆಪಿಯನ್ನು ಬೆಂಬಲಿಸಲು ಶಾಸಕರಿಗೆ ಲಂಚದ ಆಮಿಷ ಒಡ್ಡಲಾಗಿತ್ತೆಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ವಿಶೇಷ ನ್ಯಾಯಾಲಯ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಸೇರಿ ನಾಲ್ವರ ವಿರುದ್ಧ ಹೊರಡಿಸಿದ್ದ ಸಮನ್ಸ್ ಅನ್ನು ಹೈಕೋರ್ಟ್ ಮಂಗಳವಾರ ರದ್ದುಪಡಿಸಿದೆ.
ಪ್ರಕರಣವನ್ನು ಮತ್ತೆ ವಿಶೇಷ ಕೋರ್ಟ್‌ಗೆ ವರ್ಗಾಯಿಸಿರುವ ನ್ಯಾಯಪೀಠ, ಖಾಸಗಿ ದೂರು ಪರಿಗಣಿಸುವಾಗ ಭ್ರಷ್ಟಾಚಾರ ತಡೆ ಕಾಯಿದೆಯಡಿ ಪ್ರಕ್ರಿಯೆ ಪಾಲಿಸಬೇಕು. ಪೂರ್ವಾನುಮತಿಗೆ ಸಂಬಂಧಿಸಿದ ನಿಯಮ ಪಾಲಿಸಬೇಕು ಎಂದು ಆದೇಶಿಸಿದೆ. ಹಾಗಾಗಿ, ಆ ನಾಲ್ವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ. ಬೆಂಗಳೂರಿನ ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ ರದ್ದು ಕೋರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಶಾಸಕರಾದ ಶ್ರೀನಿವಾಸ ಗೌಡ, ಎಸ್.ಆರ್ ವಿಶ್ವನಾಥ್, ಸಿ.ಪಿ. ಯೋಗೇಶ್ವರ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನಿಲ್‌ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ದಂಪತಿ ಮಧ್ಯೆ ಕೌಟುಂಬಿಕ ವ್ಯಾಜ್ಯ; ಮಗಳ ತಲೆಕೂದಲು ಕತ್ತರಿಸಲು ಹೈಕೋರ್ಟ್‌ನಿಂದ ತಾತ್ಕಾಲಿಕ ತಡೆ ಅಲ್ಲದೆ, ಆರೋಪಿಗಳ ವಿರುದ್ಧ ಸಕ್ಷಮ ಪ್ರಾಕಾರವಾದ ವಿಧಾನಸಭೆ ಸಭಾಧ್ಯಕ್ಷರಿಂದ ಪೂರ್ವಾನುಮತಿ ಪಡೆಯಲು ದೂರುದಾರ ಟಿ.ಜೆ.ಅಬ್ರಹಾಂಗೆ ನಿರ್ದೇಶಿಸಬೇಕು. ಪೂರ್ವಾನುಮತಿ ಸಿಕ್ಕ ಬಳಿಕ ಕಾನೂನು ಪ್ರಕ್ರಿಯೆಗಳನ್ನು ಮುಂದುವರಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ. ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದ ವೇಳೆ ಯಡಿಯೂರಪ್ಪ ಅವರನ್ನು ಸಿಎಂ ಮಾಡಲು ಬಿಜೆಪಿ ನಾಯಕರು ಕೋಲಾರ ಶಾಸಕ ಶ್ರೀನಿವಾಸ್ ಗೌಡ ಅವರಿಗೆ ಪಕ್ಷಾಂತರ ಮಾಡಲು ಆಮಿಷವೊಡ್ಡಿದ್ದರು, 30 ಕೋಟಿ ರೂ. ಆಮಿಷವೊಡ್ಡಿ 5 ಕೋಟಿ ರೂ. ಮುಂಗಡ ಪಾವತಿಸಿದ್ದರು ಎಂದು ಆರೋಪಿಸಿ ಟಿ.ಜೆ.ಅಬ್ರಹಾಂ ವಿಶೇಷ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಿದ್ದರು.