ಬೆಂಗಳೂರು: ಸಿಖ್ ಕುಟುಂಬಕ್ಕೆ ಸೇರಿದ ಪತಿ–ಪತ್ನಿ ಮಧ್ಯದ ಕೌಟುಂಬಿಕ ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ತಗಾದೆಯಲ್ಲಿ ದಂಪತಿಯ ಮಗುವಿನ (ಸುಮಾರು 11 ವರ್ಷದ ಬಾಲಕಿ) ಕೇಶ ಕತ್ತರಿಸದಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ತಾತ್ಕಾಲಿಕವಾಗಿ ಮಾನ್ಯ ಮಾಡಿದ್ದು, ‘ಮುಂದಿನ ವಿಚಾರಣೆಯ ದಿನದವರೆಗೂ ಬಾಲಕಿಯ ಕೂದಲು ಕತ್ತರಿಸಬಾರದು‘ ಎಂದು ಆದೇಶಿಸಿದೆ.
ಈ ಕುರಿತಂತೆ 44 ವರ್ಷದ ಪತಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ, ಪ್ರತಿವಾದಿಯಾದ 41 ವರ್ಷದ ಪತ್ನಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿತು.
ಪ್ರಕರಣವೇನು?: ಪತಿ ಪತ್ನಿ ಇಬ್ಬರೂ ಅಲ್ಪಸಂಖ್ಯಾತ ಸಿಖ್ ಧರ್ಮಕ್ಕೆ ಸೇರಿದವರು. ಪತಿ ನವದೆಹಲಿಯಲ್ಲಿ ನೆಲೆಸಿದ್ದರೆ, ಪತ್ನಿ ಬೆಂಗಳೂರಿನಲ್ಲೇ ಇದ್ದಾರೆ. ‘ನನ್ನ ಪತಿಯಿಂದ ನನಗೆ ವಿಚ್ಛೇದನ ಬೇಕು‘ ಎಂದು ಕೋರಿ ಪತ್ನಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಈ ದಾವೆ ವಿಚಾರಣೆಯ ಹಂತದಲ್ಲಿದೆ. ಈ ದಂಪತಿಗೆ ಪ್ರೌಢಾವಸ್ಥೆ ಮೀರದ ಬಾಲಕಿಯೊಬ್ಬಳು ಇದ್ದಾಳೆ. ಈಕೆ ತಾಯಿಯ ಪಾಲನೆ–ಪೋಷಣೆಯಲ್ಲಿ ಇದ್ದಾಳೆ.
ಏತನ್ಮಧ್ಯೆ ಮಗುವಿನ ಭೇಟಿಗಾಗಿ ಕೋರಿದ್ದ ಪತಿಯ ‘ಭೇಟಿಯ ಹಕ್ಕಿನ’ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿತ್ತು. ಆದರೆ, ವಾಟ್ಸ್ ಆ್ಯಪ್ ಕಾಲ್‌ನಲ್ಲಿ ಮಾತನಾಡಲು ಅವಕಾಶ ನೀಡಿತ್ತು. ತಂದೆಗೆ ಮೀಸಲಾದ, ‘ಭೇಟಿಯ ಹಕ್ಕು’ ನಿರಾಕರಿಸಿರುವುದನ್ನು ಪ್ರಶ್ನಿಸಿ ಪತಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲಿಸಿದ್ದಾರೆ.
ಏತನ್ಮಧ್ಯೆ, ‘ಮಗು ಇತ್ತೀಚೆಗೆ ಬೈಗುಳಗಳನ್ನು ಕಲಿತಿದೆ ಹಾಗೂ ತಾನು ಕೂದಲು ಕತ್ತರಿಸಿಕೊಳ್ಳಲು ಕ್ಷೌರದ ಅಂಗಡಿಗೆ ಹೋಗುತ್ತೇನೆ ಎಂದು ಹೇಳುತ್ತಿದೆ. ಇದು ನನಗೆ ವಾಟ್ಸ್ ಆ್ಯಪ್ ಕಾಲ್‌ನಲ್ಲಿ ಮಾತನಾಡುವಾಗ ತಿಳಿದು ಬಂದಿದೆ. ಈ ನಡೆ ಸಿಖ್ ಧಾರ್ಮಿಕ ನಿಯಮಗಳಿಗೆ ವಿರುದ್ಧವಾದುದು. ಆದ್ದರಿಂದ, ಮಗು ಕೇಶ ಕತ್ತರಿಸಿಕೊಳ್ಳದಂತೆ ನಿರ್ದೇಶಿಸಬೇಕು’ ಎಂದು ಕೋರಿ ಪತಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.
Read more from source
[wpas_products keywords=”deal of the day sale today kitchen”]