ಹೈಲೈಟ್ಸ್:
- ಸಿನಿಮಾರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರ
- ಬಣ್ಣದ ಲೋಕದಲ್ಲಿ ನಟನಾಗಿ ಮಿಂಚಲು ರೆಡಿಯಾ ಜನಾರ್ದನ ರೆಡ್ಡಿ ಪುತ್ರ ಕಿರೀಟಿ
- ಕನ್ನಡ-ತೆಲುಗು ಭಾಷೆಯಲ್ಲಿ ಸಿದ್ಧವಾಗಲಿದೆ ಕಿರೀಟಿ ರೆಡ್ಡಿಯ ಮೊದಲ ಸಿನಿಮಾ
ರಾಧಾಕೃಷ್ಣ ರೆಡ್ಡಿ ನಿರ್ದೇಶನದ ಸಿನಿಮಾವಿದು
ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಬ್ಯಾನರ್‌ನಲ್ಲಿ ‘ಮಾಯಾಬಜಾರ್’ ಸಿನಿಮಾ ಮಾಡಿದ್ದ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಈಗ ಕಿರೀಟಿ ರೆಡ್ಡಿ ಲಾಂಚ್ ಆಗಲಿರುವ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ತೆಲುಗಿನಲ್ಲಿ ‘ಈಗ’, ‘ಲೆಜೆಂಡ್’, ‘ಯುದ್ಧಂ ಶರಣಂ’ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಸಾಯಿ ಕೊರ್ರಪಾಟಿ ಇದರ ನಿರ್ಮಾಣ ಮಾಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ದೊಡ್ಡದಾಗಿ ಈ ಸಿನಿಮಾವನ್ನು ತೆರೆಗೆ ತರುವ ಆಲೋಚನೆ ನಿರ್ಮಾಪಕರಿಗೆ ಇದೆ ಎನ್ನಲಾಗಿದೆ.
ಸಕಲ ಸಿದ್ಧತೆ ಮಾಡಿಕೊಂಡಿರುವ ಕಿರೀಟಿ
ಜನಾರ್ದನ ರೆಡ್ಡಿ ಅವರಿಗೂ ಸಿನಿಮಾರಂಗದಲ್ಲಿ ಆಸಕ್ತಿಯಿದೆ. ಚಿತ್ರರಂಗದ ಹಲವಾರು ಜನರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಇದೀಗ ಮಗನಿಗೆ ಸಕಲ ತಯಾರಿಗಳನ್ನು ನೀಡಿ, ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಯುಕೆಯಲ್ಲಿ ವಿದ್ಯಾಭ್ಯಾಸ ಮಾಡುವಾಗಲೇ ನಟನೆಗೆ ಸಂಬಂಧಿಸಿದ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಸಾಹಸಕ್ಕೆ ಸಂಬಂಧಪಟ್ಟಂತೆ ಮಾರ್ಷಲ್ ಆರ್ಟ್ಸ್ ತರಬೇತಿಯನ್ನು ಅವರು ಪಡೆದುಕೊಂಡಿದ್ದಾರೆ. ಸ್ವಂತವಾಗಿ ಸ್ಟಂಟ್ಸ್‌ಗಳನ್ನು ಮಾಡುವಷ್ಟರ ಮಟ್ಟಿಗೆ ಸಿದ್ಧಗೊಂಡಿದ್ದಾರಂತೆ ಕಿರೀಟಿ. ಪ್ರತಿದಿನ ಜಿಮ್‌ಗೆ ಹೋಗಿ ಬೆವರಿಳಿಸುವ ಅವರು, ಡ್ಯಾನ್ಸ್ ಅಭ್ಯಾಸ ಕೂಡ ಮಾಡುತ್ತಿದ್ದಾರೆ. ಜೊತೆಗೆ ಕ್ಯಾಮೆರಾ ಎದುರಿಸಲು ಬೇಕಾದ ಆತ್ಮವಿಶ್ವಾಸವನ್ನು ಅವರು ಬೆಳೆಸಿಕೊಳ್ಳುತ್ತಿದ್ದಾರೆ.
ಪುನೀತ್ ಜತೆ ಜಾಕಿ ಸಿನಿಮಾ ನೋಡಿದ್ದ ಕಿರೀಟಿ
ಚಿಕ್ಕ ವಯಸ್ಸಿನಲ್ಲೇ ಕಿರೀಟಿ ರೆಡ್ಡಿಗೆ ಸಿನಿಮಾರಂಗದ ಮೇಲೆ ಸೆಳೆತ ಆರಂಭವಾಗಿತ್ತು. ‘ಜಾಕಿ’ ಚಿತ್ರದ ತೆರೆಕಂಡಾಗ ಪುನೀತ್ ರಾಜ್‌ಕುಮಾರ್ ಅವರೊಟ್ಟಿಗೆ ಸಿನಿಮಾ ನೋಡುವ ಅವಕಾಶ ಕಿರೀಟಿಗೆ ಸಿಕ್ಕಿತ್ತಂತೆ. ಪುನೀತ್ ಕೂಡ ಆಗ ಕಿರೀಟಿಗೆ ಸಾಕಷ್ಟು ಸ್ಫೂರ್ತಿದಾಯಕ ಮಾತುಗಳನ್ನಾಡಿದ್ದರಂತೆ. ಸದ್ಯ ಕಿರೀಟಿ ನಟನೆಯ ಸಿನಿಮಾ ಯಾವಾಗ ಶುರುವಾಗಲಿದೆ? ಕಥೆ ಯಾವ ರೀತಿಯಲ್ಲಿ ಇರಲಿದೆ? ಸಿನಿಮಾದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿಲ್ಲ. ಶೀಘ್ರದಲ್ಲೇ ಚಿತ್ರತಂಡ ನೀಡುವ ಸಾಧ್ಯತೆ ಇದೆ.
Read more
[wpas_products keywords=”deal of the day party wear dress for women stylish indian”]