ಹೈಲೈಟ್ಸ್:
- ಕಂದಾಯ ಇಲಾಖೆಯಿಂದ 30 ಎಕರೆ ಗೋಮಾಳ ಜಮೀನು ಕೈಮಗ್ಗ ಮತ್ತು ಜವಳಿ ಇಲಾಖೆಗೆ ಹಸ್ತಾಂತರವಾಗಿ ಆರು ತಿಂಗಳು ಕಳೆದರೂ ಯೋಜನೆ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ
- ಜವಳಿ ಪಾರ್ಕ್ ನಿರ್ಮಾಣಕ್ಕೆ ಹೆಚ್ಚಿನ ವೇಗ ದೊರೆತಲ್ಲಿ ಈ ಭಾಗದ ಜನರಿಗೆ ಉದ್ಯೋಗ ದೊರೆಯುವುರ ಜತೆ ತಾಲೂಕಿನ ಅಭಿವೃದ್ಧಿಗೂ ಆಧ್ಯತೆ ನೀಡಿದಂತಾಗುತ್ತದೆ
- ಪಾರ್ಕ್ ಸ್ಥಾಪನೆಗೆ ಈಗಾಗಲೇ ಜವಳಿ ಇಲಾಖೆ ಡಿಡಿ ಸಭೆ ಕರೆದಿದ್ದು, ಸಭೆಯಲ್ಲಿ ಹೆಚ್ಚಿನ ಮಾಹಿತಿ ತಿಳಿಯಲಿದೆ
ಮೊಳಕಾಲ್ಮುರು: ಮೊಳಕಾಲ್ಮೂರು ಅಭಿವೃದ್ಧಿಯಾಗಲಿ ಎಂದು ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ 30 ಎಕರೆ ಗೋಮಾಳ ಜಮೀನನ್ನು ಕೈಮಗ್ಗ ಮತ್ತು ಜವಳಿ ಇಲಾಖೆಗೆ ಹಸ್ತಾಂತರ ಮಾಡಿದ್ದು, ಯೋಜನೆಗೆ ಗ್ರಹಣ ಹಿಡಿದಿದೆ.
ಕಂದಾಯ ಇಲಾಖೆಯಿಂದ 30 ಎಕರೆ ಗೋಮಾಳ ಜಮೀನು ಕೈಮಗ್ಗ ಮತ್ತು ಜವಳಿ ಇಲಾಖೆಗೆ ಹಸ್ತಾಂತರವಾಗಿ ಆರು ತಿಂಗಳು ಕಳೆದರೂ ಯೋಜನೆ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ !. 2011 ನವೆಂಬರ್ 24 ರಂದು ಪಟ್ಟಣಕ್ಕೆ ಆಗಮಿಸಿದ್ದ ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡಗೆ ಮೊಳಕಾಲ್ಮುರು ಕ್ಷೇತ್ರಕ್ಕೆ ಮೂಲ ಸೌಕರ್ಯ ಕಲ್ಪಿಸುವುದರ ಜತೆ ತಾಲೂಕಿನಲ್ಲಿ ಹೆಚ್ಚಿರುವ ಪ.ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದ ಜನರ ಅಭಿವೃದ್ಧಿಗೆ ವಿಶೇಷ ಸ್ಥಾನ ಮಾನ ಮತ್ತು ಹೆಚ್ಚು ಅನುದಾನದ ಪ್ಯಾಕೇಜ್ ನೀಡಿ ಈ ಭಾಗದ ಜನರ ಬಡತನದ ಬವಣೆ ತೀರಿಸುವಂತೆ ಕೊಂಡ್ಲಹಳ್ಳಿ ಗ್ರಾಮಸ್ಥ ಕೆ.ಸಿ.ಮಂಜುನಾಥ್ ಮನವಿ ಪತ್ರ ನೀಡಿ ಜವಳಿ ಪಾರ್ಕ್ ನಿರ್ಮಾಣದ ಕನಸಿಗೆ ನೀರೆರೆದಿದ್ದರು.
ಅಂದು ರೂಪಿತಗೊಂಡಿದ್ದ ಜವಳಿ ಪಾರ್ಕ್ ನಿರ್ಮಾಣದ ಆಶಯ ನಂತರದ ದಿನದಲ್ಲಿ ಅನೇಕರ ಒತ್ತಾಸೆ, ಜನಪ್ರತಿನಿಧಿಗಳ ಶಿಫಾರಸ್ಸು, ಅಪೇಕ್ಷಿತರಿಂದ ಸಂಬಂಧಿಸಿದ ಇಲಾಖೆಗಳಿಗೆ ಸತತ ಓಡಾಟ ಹಾಗೂ ಪರಿಶ್ರಮದಿಂದ ಜವಳಿ ಪಾರ್ಕ್ ನಿರ್ಮಾಣಕ್ಕೆ ಅಧಿಕೃತವಾಗಿ ಭೂಮಿ ಮಂಜೂರಾಯಿತು. ಆ ನಂತರ ಕೈಮಗ್ಗ ಜವಳಿ ಇಲಾಖೆ ಅಧಿಕಾರಿಗಳು ಈ ಪಾರ್ಕ್ ನಲ್ಲಿ ನಾನಾ ನಮೂನೆಯ ಘಟಕಗಳ ನಿರ್ಮಾಣಕ್ಕೆ ಅರ್ಜಿ ಕರೆದಿದ್ದು, 50-60 ಜನ ಅರ್ಜಿ ಸಲ್ಲಿಸಿದ್ದಾರೆ.
ತಾಲೂಕಿನ ನಾನಾ ಗ್ರಾಮಗಳ ಜನರು(ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು) ನೆರೆಯ ಆಂಧ್ರದ ರಾಯದುರ್ಗ, ಕಲ್ಯಾಣದುರ್ಗ, ಅನಂತಪುರದಲ್ಲಿನ ಜೀನ್ಸ್ ಸಿದ್ಧ ಉಡುಪುಗಳ ತಯಾರಿಕೆ ಘಟಕದವರಿಗೆ ದಿನಗೂಲಿ ಹಾಗೂ ಪೀಸ್ ಲೆಕ್ಕದಲ್ಲಿ ಸಿದ್ಧ ಉಡುಪು ತಯಾರಿಸಿ ನೀಡುತ್ತಿದ್ದಾರೆ. ಇಲ್ಲಿ ತಯಾರಾದ ಜೀನ್ಸ್ ಬಟ್ಟೆಗಳು ಆಂಧ್ರ ತಲುಪಿ ಅಲ್ಲಿಂದ ಬಳ್ಳಾರಿಗೆ ತೆರಳಿ ‘ಬಳ್ಳಾರಿ ಜೀನ್ಸ್’ ಎಂದು ಹೆಸರು ಪಡೆದು ಆ ನಂತರ ರಾಜಧಾನಿ ಸೇರುತ್ತಿವೆ.
ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆಗೆ ಈಗಾಗಲೇ ಚಾಲನೆ ದೊರೆತಿದ್ದು, ಸಮೀಪದ ಆಂಧ್ರ ಹಾಗೂ ಬಳ್ಳಾರಿ ಎರಡೂ ಭಾಗಗಳಿಗೂ ಸಾರಿಗೆ ವ್ಯವಸ್ಥೆಗೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಸೌಲಭ್ಯ ದೊರೆತಂತಾಗಿದೆ. ಒಟ್ಟಾರೆ ಜವಳಿ ಪಾರ್ಕ್ ನಿರ್ಮಾಣಕ್ಕೆ ಹೆಚ್ಚಿನ ವೇಗ ದೊರೆತಲ್ಲಿ ಈ ಭಾಗದ ಜನರಿಗೆ ಉದ್ಯೋಗ ದೊರೆಯುವುರ ಜತೆ ತಾಲೂಕಿನ ಅಭಿವೃದ್ಧಿಗೂ ಆಧ್ಯತೆ ನೀಡಿದಂತಾಗುತ್ತದೆ.
ಜವಳಿ ಪಾರ್ಕ್ ನಿರ್ಮಾಣದ ಉದ್ದೇಶ
ಬಂಡವಾಳ ಹೂಡಿಕೆದಾರರಿಂದ ಸ್ಥಳೀಯರಿಗೆ ನಾನಾ ವಿಭಾಗಗಳಿಂದ ಉದ್ಯೋಗ ಒದಗಿಸಿ ನಿರುದ್ಯೋಗ ಸಮಸ್ಯೆ ನಿವಾರಿಸುವುದು. ಆದಾಯ ಪೂರಕ ಘಟಕಗಳ ನಿರ್ಮಾಣ, ಗುಡಿ ಕೈಗಾರಿಕೆಗಳಿಗೆ ಆದ್ಯತೆ, ಈ ಭಾಗದಲ್ಲಿನ ನೇಕಾರ ವರ್ಗಕ್ಕೆ ಆರ್ಥಿಕವಾಗಿ ನೆರವು ನೀಡುವ ಘಟಕಗಳ ಸ್ಥಾಪನೆ. ಸಿದ್ಧ ಉಡುಪು ತಯಾರಿಕೆ, ಮರದ ಪೀಠೋಪಕರಣ, ಪೇಪರ್ ಕವರ್, ಸಾಬೂನು ತಯಾರಿಕೆ ಸೇರಿದಂತೆ ಇನ್ನಿತರ ಆಸಕ್ತ ಘಟಕಗಳನ್ನು ನಿರ್ಮಿಸಲು ಅವಕಾಶವಿದೆ. ಯುವಜನರಿಗೆ ಹೆಚ್ಚಿನ ಆಧ್ಯತೆ ನೀಡಿ ನಾನಾ ಉತ್ಪಾದನಾ ಘಟಕಗಳ ಸ್ಥಾಪನೆ, ಮಾರ್ಕೆಟಿಂಗ್ ವ್ಯವಸ್ಥೆಗೆ ಅನುಗುಣವಾಗಿ ಉದ್ಯಮಗಳಿಗೆ ಉತ್ತೇಜನ ನೀಡುವುದು.
ನಾನಾ ವಿಧದ ಘಟಕಗಳ ಸ್ಥಾಪನೆ ಮಾಡಲು ಇಚ್ಚಿಸಿದ 50-60 ಅರ್ಜಿಗಳು ಬಂದಿದೆ. ಈ ಅರ್ಜಿದಾರರನ್ನು ಜನವರಿ 5 ರಂದು ಕೊಂಡ್ಲಹಳ್ಳಿ ಸಾಲೇಶ್ವರ ಭವನದಲ್ಲಿ ಸಭೆ ಕರೆದಿದ್ದೇವೆ. ಅಲ್ಲಿ ಚರ್ಚೆ ಮಾಡಲಾಗುವುದು.
ಡಾ.ಶಿವರಾಜ್ ಕುಲಕರ್ಣಿ, ಉಪ ನಿರ್ದೇಶಕ, ಕೈಮಗ್ಗ ಮತ್ತು ಜವಳಿ ಇಲಾಖೆ, ಚಿತ್ರದುರ್ಗ
ಕಳೆದ ಹತ್ತು ವರ್ಷದಿಂದ ಗ್ರಾಮದಲ್ಲಿ ಜವಳಿ ಪಾರ್ಕ್ ನಿರ್ಮಿಸುವಂತೆ ಒತ್ತಾಯಿಸಿ ನಿರಂತರ ಓಡಾಟ ನಡೆಸಿದ್ದೆ. ಈ ಪಾರ್ಕ್ ಸ್ಥಾಪನೆಗೆ ಈಗಾಗಲೇ ಜವಳಿ ಇಲಾಖೆ ಡಿಡಿ ಸಭೆ ಕರೆದಿದ್ದಾರೆ. ಸಭೆಯಲ್ಲಿ ಹೆಚ್ಚಿನ ಮಾಹಿತಿ ತಿಳಿಯಲಿದೆ.
ಕೆ.ಸಿ.ಮಂಜುನಾಥ್, ಜವಳಿ ಪಾರ್ಕ್ ನಿರ್ಮಾಣದ ಆಪೇಕ್ಷಿತ ನಿವಾಸಿ, ಕೊಂಡ್ಲಹಳ್ಳಿ.
Read more
[wpas_products keywords=”deal of the day sale today offer all”]