Karnataka news paper

ಫ್ರಾನ್ಸ್‌ನಲ್ಲಿ ಕೊರೊನಾ ವೈರಸ್‌ನ ಮತ್ತೊಂದು ರೂಪಾಂತರ ತಳಿ: 12 ಮಂದಿಗೆ ಸೋಂಕು


ಪ್ಯಾರಿಸ್‌: ಫ್ರೆಂಚ್ ಸಂಶೋಧಕರು ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿಯೊಂದನ್ನು ಪತ್ತೆ ಹಚ್ಚಿದ್ದಾರೆ. ಇದು ಮಧ್ಯ ಆಫ್ರಿಕಾದ ಕ್ಯಾಮರೂನ್‌ನಿಂದ ಬಂದಿರಬಹುದಾದ ಸಾಧ್ಯತೆಗಳಿದ್ದು, ತಾತ್ಕಾಲಿಕವಾಗಿ ‘IHU (ಐಎಚ್‌ಯು)’ ಎಂದು ಹೆಸರಿಸಲಾಗಿದೆ.

‘B.1.640.2 ಹೆಸರಿನ ವಂಶಾವಳಿಯ ಹೊಸ ರೂಪಾಂತರ ತಳಿಯಾಗಿರುವ ‘ಐಎಚ್‌ಯು’ ದೇಶದಲ್ಲಿ 12 ಜನರಿಗೆ ಸೋಂಕು ಉಂಟು ಮಾಡಿದೆ’ ಎಂದು ಫ್ರೆಂಚ್‌ ಸರ್ಕಾರ ಬೆಂಬಲಿತ ಅಧ್ಯಯನ ಹೇಳಿದೆ.

ಈ ತಳಿಯಲ್ಲಿ 46 ರೂಪಾಂತರಗಳು ಕಂಡು ಬಂದಿವೆ. ಅಲ್ಲದೆ, ವಂಶಾವಳಿಯಲ್ಲಿ 37 ಡಿಲಿಟೆಷನ್‌ (ಅಳಿಸುವಿಕೆ) ಆಗಿದೆ ಎಂದು ತಜ್ಞರು ಹೇಳಿದ್ದಾರೆ.

‘ಆಗ್ನೇಯ ಫ್ರಾನ್ಸ್‌ನ ಒಂದೇ ಭೌಗೋಳಿಕ ಪ್ರದೇಶದಲ್ಲಿ ವಾಸಿಸುವ ಹನ್ನೆರಡು ಮಂದಿಗೆ ಈ ಸೋಂಕು ತಗುಲಿದ್ದು, ಅವರೆಲ್ಲರ ಪಿಸಿಆರ್‌ ಪರೀಕ್ಷೆ ನಡೆಸಲಾಗಿದೆ. ತಳಿಯು ವಿಲಕ್ಷಣ ಸಂಯೋಜನೆ ಹೊಂದಿರುವುದು ಪರೀಕ್ಷೆಯಲ್ಲಿ ಬಯಲಾಗಿದೆ’ ಎಂದು ಫ್ರಾನ್ಸ್‌ನ ಮಾರ್ಸಿಲ್ಲೆಯಲ್ಲಿರುವ ವೈದ್ಯಕೀಯ ಅಧ್ಯಯ ಸಂಸ್ಥೆ ‘ಐಎಚ್‌ಯು ಮೆಡಿಟರೇನಿ ಇನ್ಫೆಕ್ಷನ್‌’ನ ಫಿಲಿಪ್ ಕೋಲ್ಸನ್ ಹೇಳಿದ್ದಾರೆ.

ಆದಾರೂ, ‘ಈ 12 ಪ್ರಕರಣಗಳ ಆಧಾರದ ಮೇಲೆ ಈ ಐಎಚ್‌ಯು ರೂಪಾಂತರದ ಪ್ರಸರಣ, ಸಾಂಕ್ರಾಮಿಕಗೊಳ್ಳುವ ಸಾಧ್ಯತೆ ಮತ್ತು ವೈದ್ಯಕೀಯ ವೈಶಿಷ್ಟ್ಯಗಳ ಕುರಿತು ಊಹಿಸಲು ಸಾಧ್ಯವಿಲ್ಲ,” ಎಂದು ಕೋಲ್ಸನ್ ಹೇಳಿದರು.

ಅಧ್ಯಯನದ ಪ್ರಕಾರ, ಈ ತಳಿಯ ಮೊದಲ ಸೋಂಕಿತ ವ್ಯಕ್ತಿ ಲಸಿಕೆ ಪಡೆದ ವಯಸ್ಕರಾಗಿದ್ದು, ಮಧ್ಯ ಆಫ್ರಿಕಾದ ಕ್ಯಾಮರೂನ್‌ಗೆ ಪ್ರವಾಸಕ್ಕೆಂದು ತೆರಳಿ ಫ್ರಾನ್ಸ್‌ಗೆ ಮರಳಿದ್ದರು ಎನ್ನಲಾಗಿದೆ.



Read more from source