Karnataka news paper

30 ಲಕ್ಷ ಮಂದಿಗೆ 3ನೇ ಡೋಸ್?: ಕೇಂದ್ರದ ಅನುಮತಿಗೆ ಕಾಯುತ್ತಿರುವ ರಾಜ್ಯ ಸರ್ಕಾರ


ಬೆಂಗಳೂರು: ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದು ಆರು ತಿಂಗಳಾದವರಿಗೆ ಬೂಸ್ಟರ್ ಡೋಸ್ ನೀಡಲು ರಾಜ್ಯ ಸರ್ಕಾರ ಕಾರ್ಯಯೋಜನೆ ರೂಪಿಸುತ್ತಿದೆ. ಸದ್ಯ 30 ಲಕ್ಷಕ್ಕೂ ಅಧಿಕ ಮಂದಿ ಮೂರನೇ ಡೋಸ್ ಪಡೆಯಲು ಅರ್ಹತೆ ಹೊಂದಿದ್ದಾರೆ. ಈ ಪ್ರಸ್ತಾವಕ್ಕೆ ಕೇಂದ್ರದ ಅನುಮತಿಗಾಗಿ ರಾಜ್ಯ ಸರ್ಕಾರ ಎದುರು ನೋಡುತ್ತಿದೆ.

ಕೊರೊನಾ ವೈರಾಣುವಿನ ರೂಪಾಂತರಿ ಓಮೈಕ್ರಾನ್ ರಾಜ್ಯದಲ್ಲೂ ಕಾಣಿಸಿಕೊಂಡಿದ್ದರಿಂದ ಬೂಸ್ಟರ್‌ ಡೋಸ್ ವಿತರಣೆಗೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಲಸಿಕೆಯ ಎರಡೂ ಡೋಸ್ ಪಡೆದ ಆರು ತಿಂಗಳವರೆಗೆ ಪ್ರತಿಕಾಯ (ಆ್ಯಂಟಿಬಾಡಿ) ಸಕ್ರಿಯವಾಗಿರಲಿದೆ ಎನ್ನುವುದು ಅಧ್ಯಯನಗಳಿಂದ ದೃಢಪಟ್ಟಿದೆ. ಆ ಬಳಿಕ ಕೆಲವರಲ್ಲಿ ಪ್ರತಿಕಾಯ ದುರ್ಬಲವಾಗುವುದರಿಂದ ಬೂಸ್ಟರ್ ಡೋಸ್ ನೀಡುವ ಅಗತ್ಯದ ಬಗ್ಗೆ ವೈದ್ಯಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಹೊಸ ತಳಿಯ ವೈರಾಣುವಿನ ಹರಡುವಿಕೆಯನ್ನು ಹಾಗೂ ರೋಗ ಉಲ್ಬಣಗೊಳ್ಳುವುದನ್ನು ತಡೆಯಲು ಮೂರನೇ ಡೋಸ್ ನೀಡಲು ಸರ್ಕಾರಕ್ಕೆ ತಜ್ಞರು ಸಲಹೆ ನೀಡಿದ್ದಾರೆ. 

ರಾಜ್ಯದಲ್ಲಿ 2021ರ ಜ.16 ರಿಂದ ಕೋವಿಡ್ ಲಸಿಕೆ ವಿತರಣೆ ಪ್ರಾರಂಭವಾಗಿದೆ. ಈವರೆಗೆ 4.65 ಕೋಟಿಗೂ ಹೆಚ್ಚು ಮಂದಿ ಮೊದಲ ಡೋಸ್ ಪಡೆದಿದ್ದಾರೆ.ಅವರಲ್ಲಿ 3.37 ಕೋಟಿಗೂ ಹೆಚ್ಚು ಮಂದಿ ಎರಡೂ ಡೋಸ್‌ಗಳನ್ನು ಹಾಕಿಸಿಕೊಂಡಿದ್ದಾರೆ. ಆರಂಭಿಕ ದಿನಗಳಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕೋವಿಡ್ ಯೋಧರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗಿತ್ತು.

ವರ್ಷಾಂತ್ಯಕ್ಕೆ ಮತ್ತಷ್ಟು ಹೆಚ್ಚಳ: 45 ವರ್ಷಗಳು ಮೇಲ್ಪಟ್ಟವರಲ್ಲಿ 22.92 ಲಕ್ಷ ಮಂದಿ, ಆರೋಗ್ಯ ಕಾರ್ಯಕರ್ತರಲ್ಲಿ 4.81 ಲಕ್ಷ ಮಂದಿ ಹಾಗೂ ಕೋವಿಡ್ ಮುಂಚೂಣಿ ಯೋಧರಲ್ಲಿ 2.25 ಲಕ್ಷ ಮಂದಿ ಎರಡೂ ಡೋಸ್‌ಗಳು ಪಡೆದು ಆರು ತಿಂಗಳುಗಳಾಗಿವೆ.

ಆದ್ಯತೆ ಅನುಸಾರ ವಿತರಣೆ: ಕೋವಿಡ್ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದವರನ್ನು ಆರು ತಿಂಗಳ ಬಳಿಕ ಜಯದೇವ ಹೃದ್ರೋಗ ಆಸ್ಪತ್ರೆಯು ಪ್ರತಿಕಾಯ (ಆ್ಯಂಟಿಬಾಡಿ) ಪರೀಕ್ಷೆಗೆ ಒಳಪಡಿಸಿತ್ತು. ಶೇ 99 ರಷ್ಟು ಮಂದಿಯಲ್ಲಿ ಉತ್ತಮವಾಗಿ ಪ್ರತಿಕಾಯಗಳು (ಆ್ಯಂಟಿಬಾಡಿ) ವೃದ್ಧಿಯಾಗಿರುವುದು ದೃಢಪಟ್ಟಿತ್ತು. ಬೂಸ್ಟರ್ ಡೋಸ್‌ ವಿತರಣೆಗೆ ಸಂಬಂಧಿಸಿದಂತೆ ಕೆಲ ತಜ್ಞರು ಒಂಬತ್ತು ತಿಂಗಳ ಬಳಿಕ ವಿತರಿಸಿದರೆ ಉತ್ತಮ ಎಂಬ ಅಭಿಮತ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಸರ್ಕಾರವು ಈ ಮೊದಲಿನಂತೆ ಆದ್ಯತೆಯ ಅನುಸಾರ ಬೂಸ್ಟರ್ ಡೋಸ್ ವಿತರಣೆಗೆ ಚಿಂತನೆ ನಡೆಸಿದೆ.

ಆರೋಗ್ಯ ಕಾರ್ಯಕರ್ತರಲ್ಲಿ 2.86 ಲಕ್ಷ ಮಂದಿ ಹಾಗೂ ಕೋವಿಡ್ ಮುಂಚೂಣಿ ಯೋಧರಲ್ಲಿ 16 ಸಾವಿರಕ್ಕೂ ಅಧಿಕ ಮಂದಿ ಎರಡೂ ಡೋಸ್‌ಗಳನ್ನು ಪಡೆದು ಒಂಬತ್ತು ತಿಂಗಳುಗಳು ಕಳೆದಿವೆ.  



Read more from source