Karnataka news paper

ಹಾರರ್‌ ಸಿನಿಮಾ ಮೂಲಕ ಮತ್ತೆ ಚಂದನವನಕ್ಕೆ ಕಾಲಿಟ್ಟ ಅನುಶ್ರೀ


ಕಿರುತೆರೆ ರಿಯಾಲಿಟಿ ಶೋಗಳು ಹಾಗೂ ಸಿನಿಮಾ ಪ್ರಿರಿಲೀಸ್‌ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಮಿಂಚುತ್ತಿರುವ ನಟಿ ಅನುಶ್ರೀ ನಾಲ್ಕು ವರ್ಷಗಳ ಬಳಿಕ ಮತ್ತೆ ಚಂದನವನಕ್ಕೆ ಹೆಜ್ಜೆ ಇಟ್ಟಿದ್ದಾರೆ.

‘ಬೆಂಕಿಪಟ್ಣ’, ‘ರಿಂಗ್‌ ಮಾಸ್ಟರ್‌’, ‘ಮಾದ ಮತ್ತು ಮಾನಸಿ’, 2017ರಲ್ಲಿ ತೆರೆಕಂಡ ‘ಉಪ್ಪು ಹುಳಿ ಖಾರ’ ಸಿನಿಮಾದ ಬಳಿಕ, ತೆರೆಯ ಮೇಲೆ ನಿರೂಪಕಿಯಾಗಿಯೇ ಅನುಶ್ರೀ ಕಾಣಿಸಿಕೊಂಡಿದ್ದರು. ಇದೀಗ ಹಾರರ್‌ ಸಿನಿಮಾವೊಂದರಲ್ಲಿ ನಟಿಸಲು ಅನುಶ್ರೀ ಸಜ್ಜಾಗಿದ್ದು, ಚಿತ್ರಕಥೆಯ ಪೂಜೆ ಇತ್ತೀಚೆಗೆ ನಡೆದಿದೆ.

ಮಂಗಳವಾರ ಇನ್‌ಸ್ಟಾಗ್ರಾಂನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅನುಶ್ರೀ, ‘ಈ ಹೊಸ ವರ್ಷದ ಒಂದು ಸಿಹಿ ಸುದ್ದಿ ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ. ನಿಮ್ಮ ಆಶೀರ್ವಾದವಿರಲಿ. ಚಿತ್ರವೊಂದಕ್ಕೆ ನನ್ನ ಸೇರ್ಪಡೆ ಆಗಿದೆ. ವಿಭಿನ್ನ ಕಥಾಶೈಲಿಯ ಹಾರರ್‌ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರದ ಶೀರ್ಷಿಕೆಯನ್ನು ಶೀಘ್ರದಲ್ಲೇ ನಿಮ್ಮೊಂದಿಗೆ ಹಂಚಿಕೊಳ್ಳುವೆ’ ಎಂದಿದ್ದಾರೆ.

‘ಮಮ್ಮಿ’ ಮತ್ತು ‘ದೇವಕಿ’ ಚಿತ್ರಗಳನ್ನು ನಿರ್ದೇಶಿಸಿರುವ ಲೋಹಿತ್‌, ಈ ಚಿತ್ರವನ್ನು ಪಾರ್ಥಿಬನ್‌ ಅವರ ಜೊತೆಗೂಡಿ ನಿರ್ಮಿಸುತ್ತಿದ್ದಾರೆ. ಈ ಎರಡೂ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಪ್ರಭಾಕರ್‌ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ.





Read More…Source link