ಬೆಂಗಳೂರು: ಕೇಸರಿ ಧ್ವಜದಿಂದ ಸಿಂಗರಿಸಲ್ಪಟ್ಟ ಬಿಎಂಟಿಸಿ ಬಸ್‌ನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ಅಧಿಕಾರಿಗಳು ಧ್ವಜವನ್ನು ತೆರವುಗೊಳಿಸಿದ ಘಟನೆ ನಡೆದಿದೆ.
ಬಿಎಂಟಿಸಿ ಬಸ್ಸಿನ ಒಳಗಡೆ ಕೇಸರಿ ಧ್ವಜವನ್ನು ಹಾಕಿ ಸಿಂಗರಿಸಲಾಗಿತ್ತು. ಇದನ್ನು ಗಮನಿಸಿದ ಪ್ರಯಾಣಿಕರೊಬ್ಬರು ಫೋಟೋ ತೆಗೆದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿ ಬಿಎಂಟಿಸಿ, ಸಿಎಂ ಮತ್ತು ವಿಪಕ್ಷ ನಾಯಕರುಗಳಿಗೆ ಟ್ಯಾಗ್ ಮಾಡಿದ್ದರು. ಅಲ್ಲದೇ ತನ್ನ ಪೋಸ್ಟ್‌ನಲ್ಲಿ ‘ಬಿಎಂಟಿಸಿ ಬಸ್‌ನಲ್ಲಿ ಕೇಸರೀಕರಣವು ಪ್ರತೀ ವಲಯದಲ್ಲೂ ವ್ಯಾಪಕವಾಗಿ ಹರಡುತ್ತಿದೆ. ಸರ್ಕಾರಿ ವಾಹನಗಳನ್ನು ಕೋಮುವಾದಗೊಳಿಸುವುದರಿಂದ ಇತರ ನಾಗರಿಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ’ ಎಂದು ಬರೆದುಕೊಂಡಿದ್ದರು. ಇದನ್ನು ಗಮನಿಸಿದ ಬಿಎಂಟಿಸಿ ಅಧಿಕಾರಿಗಳು ತಕ್ಷಣ ಬಸ್ ಚಾಲಕ, ನಿರ್ವಾಹಕರಿಗೆ ಸೂಚಿಸಿ ಬಸ್‌ನಲ್ಲಿದ್ದ ಎಲ್ಲ ಧ್ವಜಗಳನ್ನು ತೆರವುಗೊಳಿಸಿದ್ದಾರೆ. ಅಲ್ಲದೇ, ‘ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದ್ದು, ಮಾಹಿತಿಗಾಗಿ ಫೋಟೋ ಹಂಚಿಕೊಂಡಿದ್ದೇವೆ’ ಎಂದು ಅಧಿಕೃತ ಟ್ವಿಟ್ಟರ್ ಖಾತೆಯಿಂದ ಬಿಎಂಟಿಸಿ ಅಧಿಕಾರಿಗಳು ಪ್ರತಿಕ್ರಿಯೆ ನೀಡಿ ಧ್ವಜ ತೆರವುಗೊಳಿಸಿರುವ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.
ಬಿಎಂಟಿಸಿ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಂಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆ ವ್ಯಕ್ತವಾಗಿದ್ದು, ಅದೇ ಪೋಸ್ಟ್‌ನಲ್ಲಿ ಕೆಲವರು ಕಾಮೆಂಟ್ ಮಾಡಿ ತಕ್ಷಣ ಕ್ರಮ ಕೈಗೊಂಡಿರುವುದಕ್ಕೆ ಧನ್ಯವಾದಗಳು. ಅಲ್ಲದೆ ಪ್ರೂಫ್‌ಗಾಗಿ ಫೋಟೋ ಶೇರ್ ಮಾಡಿದ್ದಕ್ಕೆ ಅಭಿನಂದನೆಗಳು ಎಂದು ಕಾಮೆಂಟ್ ಮಾಡಿದ್ದಾರೆ.