ಈ ತಿಂಗಳ 7, 8, 9ರಂದು ನಡೆಯುವ ಸಭೆಯಲ್ಲಿ ಈ ವಿಚಾರವಾಗಿ ಗಂಭೀರ ಚರ್ಚೆ ನಡೆಯಲಿದೆ. ಈ ಚಿಂತನ ಬೈಠಕ್‌ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಲಿದ್ದಾರೆ. ಕೇಂದ್ರ ಸರಕಾರದ ಅಧಿಕೃತ ಕಾರ್ಯಕ್ರಮದ ನಿಮಿತ್ತ ರಾಜ್ಯಕ್ಕೆ ಬರುತ್ತಿರುವ ಗೃಹ ಸಚಿವ ಅಮಿತ್ ಶಾ ಕೂಡ ಈ ಸಭೆಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಂದಿ ಹಿಲ್ಸ್‌ನ ರೆಸಾರ್ಟ್‌ನಲ್ಲಿ ಈ ಸಭೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಡೆ ಕ್ಷಣದಲ್ಲಿ ಸಭೆ ನಡೆಯುವ ಸ್ಥಳ ಬದಲಾವಣೆಯೂ ಆಗಬಹುದು. ಈ ಉದ್ದೇಶಕ್ಕೆ ಏರ್‌ಪೋರ್ಟ್ ಬಳಿಯ ಹೋಟೆಲ್ ಒಂದನ್ನು ಕೂಡ ಪರಿಗಣಿಸುವ ಬಗ್ಗೆ ಪರಾಮರ್ಶೆ ನಡೆಸಲಾಗುತ್ತಿದೆ ಎಂದು ಬಿಜೆಪಿ ಮೂಲಗಳು ಹೇಳುತ್ತವೆ.
ವರ್ಚಸ್ಸು ತರಲು ಕಸರತ್ತು: ಸರಕಾರದ ವರ್ಚಸ್ಸು ಹೆಚ್ಚಿಸುವುದು ಕೂಡ ಈ ಸಭೆಯಲ್ಲಿ ಚರ್ಚೆಯಾಗುವ ಅಜೆಂಡಾದಲ್ಲಿ ಇದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಗಳು ಎಷ್ಟರ ಮಟ್ಟಿಗೆ ಜನರಿಗೆ ತಲುಪಿವೆ, ಈ ಬಗ್ಗೆ ಜನಾಭಿಪ್ರಾಯ ಏನಿದೆ ಎಂಬ ಬಗ್ಗೆ ಪರಾಮರ್ಶೆ ಕೈಗೊಳ್ಳಲಾಗುತ್ತದೆ. ಜತೆಗೆ ನಾನಾ ಯೋಜನೆಗಳ ಬಗ್ಗೆ ಜನರಲ್ಲಿ ಸದಭಿಪ್ರಾಯ ಮೂಡಿಸುವ ವಿಧಾನದ ಬಗ್ಗೆ ಚರ್ಚೆಯಾಗಲಿದೆ ಎಂದು ತಿಳಿದು ಬಂದಿದೆ.