Karnataka news paper

ವಾಟ್ಸ್ಯಾಪ್‌ ಗ್ರೂಪ್ ಅಡ್ಮಿನ್ ಸ್ಥಾನದಿಂದ ಕಿತ್ತುಹಾಕಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ವಜಾ


| Vijaya Karnataka | Updated: Jan 4, 2022, 7:17 AM

ವಾಟ್ಸ್‌ ಆ್ಯಪ್‌ ಅಡ್ಮಿನ್‌ ಸ್ಥಾನದಿಂದ ತೆಗೆದು ಹಾಕಿರುವುದರಿಂದ ಮೂಲಭೂತ ಹಕ್ಕು, ಅದರಲ್ಲೂ ವಾಕ್‌ ಸ್ವಾತಂತ್ರ್ಯದ ಹರಣವಾಗಿದೆ ಎಂದು ಅರ್ಜಿದಾರರು ಹೇಳಿದ್ದರು. ಹಾಗಾಗಿ ಮಾನನಷ್ಟ ಉಂಟು ಮಾಡಿರುವುದಕ್ಕೆ ಪ್ರತಿಯಾಗಿ ನಷ್ಟ ಪರಿಹಾರ ನೀಡಲು ಹಾಗೂ ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಮತ್ತೆ ತನ್ನನ್ನು ಸೇರಿಸಲು ಟ್ರಸ್ಟ್‌ಗೆ ನಿರ್ದೇಶನ ನೀಡಬೇಕೆಂದು ಕೋರಿ ಶರೀಫ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಈ ಅರ್ಜಿಯನ್ನು ಹೈಕೋರ್ಟ್‌ ಸೋಮವಾರ ವಜಾಗೊಳಿಸಿದೆ.

 

Karnataka High Court

ಹೈಲೈಟ್ಸ್‌:

  • ವಾಟ್ಸ್ಯಾಪ್‌ ಗ್ರೂಪ್ ಅಡ್ಮಿನ್ ಸ್ಥಾನದಿಂದ ಕಿತ್ತುಹಾಕಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ
  • ಅರ್ಜಿದಾರರು ಸಿವಿಲ್‌, ಇತರೆ ಕೋರ್ಟ್‌ನಲ್ಲಿ ಪರಿಹಾರ ಕಂಡುಕೊಳ್ಳಲು ಸೂಚನೆ
  • ಸಾರ್ವಜನಿಕ ಕಾನೂನಿನ ಅಂಶ ಹೊಂದಿರದ ಖಾಸಗಿ ಹಕ್ಕಿನ ವಿಚಾರದಲ್ಲಿ ಕೋರ್ಟ್‌ ಯಾವುದೇ ಪರಿಹಾರ ಕಲ್ಪಿಸಲಾಗದು – ಹೈಕೋರ್ಟ್ ಅಭಿಪ್ರಾಯ

ಬೆಂಗಳೂರು: ಖಾಸಗಿ ಟ್ರಸ್ಟ್‌ಗೆ ಸಂಬಂಧಿಸಿದ ವಾಟ್ಸ್‌ ಆ್ಯಪ್‌ ಗ್ರೂಪಿನ ಅಡ್ಮಿನ್‌ ಮತ್ತು ಸದಸ್ಯ ಸ್ಥಾನದಿಂದ ಕಿತ್ತು ಹಾಕಿದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಸೋಮವಾರ ವಜಾಗೊಳಿಸಿದೆ.

ಬೆಂಗಳೂರಿನ ಗುರಪ್ಪನಪಾಳ್ಯದ ಮೊಹಮ್ಮದ್‌ ಶರೀಫ್‌ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರರು ಸಿವಿಲ್‌ ಅಥವಾ ಇತರೆ ಕೋರ್ಟ್‌ನಲ್ಲಿ ತಮ್ಮ ಕುಂದು ಕೊರತೆಗೆ ಪರಿಹಾರ ಕಂಡುಕೊಳ್ಳಬಹುದೆಂದು ಸೂಚಿಸಿ ಅರ್ಜಿ ಇತ್ಯರ್ಥಪಡಿಸಿತು. ‘ವಾಟ್ಸ್‌ ಆ್ಯಪ್‌ ಅಡ್ಮಿನ್‌ ಸ್ಥಾನದಿಂದ ತೆಗೆದು ಹಾಕಿರುವುದರಿಂದ ಮೂಲಭೂತ ಹಕ್ಕು, ಅದರಲ್ಲೂ ವಾಕ್‌ ಸ್ವಾತಂತ್ರ್ಯದ ಹರಣವಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ಆದರೆ, ಸುಪ್ರೀಂಕೋರ್ಟ್‌ ತೀರ್ಪಿನ ಪ್ರಕಾರ ಈ ಮನವಿಯನ್ನು ರಿಟ್‌ ನ್ಯಾಯಾಲಯ ಪುರಸ್ಕರಿಸಲಾಗದು. ಸಾರ್ವಜನಿಕ ಕಾನೂನಿನ ಅಂಶ ಹೊಂದಿರದ ಖಾಸಗಿ ಹಕ್ಕಿನ ವಿಚಾರದಲ್ಲಿ ನ್ಯಾಯಾಲಯ ಯಾವುದೇ ಪರಿಹಾರ ಕಲ್ಪಿಸಲಾಗದು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಕೋರ್ಟ್ ಆದೇಶವಿದ್ದರೂ ಸಂತ್ರಸ್ತರಿಗೆ ಪರಿಹಾರ ವಿಳಂಬ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ
‘ದಿ ರಾಬಿನ್‌ ಹುಡ್‌ ಪ್ರಾಜೆಕ್ಟ್ ಟ್ರಸ್ಟ್‌’ ತನ್ನ ಸ್ವಯಂ ಸೇವಕರ ಸದಸ್ಯತ್ವ ಹೊಂದಿದ 10 ವಾಟ್ಸ್‌ ಆ್ಯಪ್‌ ಗ್ರೂಪ್‌ ರಚನೆ ಮಾಡಿಕೊಂಡಿತ್ತು. ಗ್ರೂಪಿನಲ್ಲಿ ಅರ್ಜಿದಾರ 2018ರ ಫೆಬ್ರವರಿಯಿಂದ ಸದಸ್ಯರಾಗಿದ್ದರು. ಎರಡೂವರೆ ವರ್ಷಕ್ಕಿಂತ ಹೆಚ್ಚು ಕಾಲ ಅಡ್ಮಿನ್‌ ಆಗಿದ್ದರು. ಈ ಮಧ್ಯೆ ಟ್ರಸ್ಟ್‌ಗೆ ಸೇರಿದ ಯುನೈಟೆಡ್‌ ಕಿಂಗ್‌ಡಮ್‌ (ಯುಕೆ) ತಂಡವು ವಿಚಾರವೊಂದರ ಸಂಬಂಧ ಅನಿಸಿಕೆ ಹಂಚಿಕೊಂಡಿತ್ತು. ಅದರ ಬಗ್ಗೆ ಮಾತನಾಡಿದ ಕಾರಣಕ್ಕೆ ಅರ್ಜಿದಾರನನ್ನು ಅಡ್ಮಿನ್‌ ಸ್ಥಾನದಿಂದ ತೆಗೆದು ಹಾಕಲಾಗಿತ್ತು. ಸ್ವಲ್ಪ ದಿನದ ನಂತರ ಟ್ರಸ್ಟ್‌ಗೆ ಸಂಬಂಧಿಸಿದ ಯೋಜನೆಯ ಮಾಹಿತಿ ಸಾರ್ವಜನಿಕ ವೇದಿಕೆಯಲ್ಲಿ ಹಂಚಿಕೊಂಡ ಆರೋಪದ ಮೇಲೆ 10 ವಾಟ್ಸ್‌ ಗ್ರೂಪ್‌ನಿಂದಲೂ ಅರ್ಜಿದಾರರನ್ನು ತೆಗೆದು ಹಾಕಲಾಗಿತ್ತು. ಅದನ್ನು ಆಕ್ಷೇಪಿಸಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಟ್ರಸ್ಟ್‌ನ ಸೇವಾ ಕಾರ್ಯಗಳನ್ನು ಬಡ ಹಾಗೂ ನಿರ್ಗತಿಕರ ತಲುಪಿಸುವ ಕೆಲಸದಲ್ಲಿ ತೊಡಿಸಿಕೊಂಡಿದ್ದ ನನ್ನ ಮೇಲೆ ಸುಳ್ಳು ಆರೋಪ ಹೊರಿಸಿ ವಾಟ್ಸ್‌ ಆ್ಯಪ್‌ ಗ್ರೂಪ್‌ನಿಂದ ಹೊರಹಾಕಲಾಗಿದೆ. ಹಾಗಾಗಿ ಮಾನನಷ್ಟ ಉಂಟು ಮಾಡಿರುವುದಕ್ಕೆ ಪ್ರತಿಯಾಗಿ ನಷ್ಟ ಪರಿಹಾರ ನೀಡಲು ಹಾಗೂ ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಮತ್ತೆ ತನ್ನನ್ನು ಸೇರಿಸಲು ಟ್ರಸ್ಟ್‌ಗೆ ನಿರ್ದೇಶನ ನೀಡಬೇಕೆಂದು ಕೋರಿ ಶರೀಫ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಸಮೀಪದ ನಗರಗಳ ಸುದ್ದಿ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ

Web Title : the karnataka high court dismisses a petition challenging its removal from whatsapp group’s admin position
Kannada News from Vijaya Karnataka, TIL Network



Read more