Karnataka news paper

202ಕ್ಕೆ ಆಲ್‌ಔಟ್‌ ಆಗಿ ಬೇಸರದಲ್ಲಿದ್ದ ಭಾರತ ತಂಡಕ್ಕೆ ಮತ್ತೊಂದು ಆಘಾತ!


ಹೈಲೈಟ್ಸ್‌:

  • ಬೌಲ್‌ ಮಾಡುವ ವೇಳೆ ಮೊಹಮ್ಮದ್‌ ಸಿರಾಜ್‌ ಕಾಲಿನಲ್ಲಿ ನೋವು ಕಾಣಿಸಿಕೊಂಡಿದೆ.
  • ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್ ಕ್ರಿಕೆಟ್‌ ಸರಣಿ.
  • ಜೊಹಾನ್ಸ್‌ಬರ್ಗ್‌ ಟೆಸ್ಟ್‌ನಲ್ಲಿ 202 ರನ್‌ಗಳಿಗೆ ಟೀಮ್ ಇಂಡಿಯಾ ಆಲ್‌ಔಟ್‌ ಆಗಿದೆ.

ಜೊಹಾನ್ಸ್‌ಬರ್ಗ್‌: ಸೋಮವಾರ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾದ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ತಂಡ ಕಡಿಮೆ ಮೊತ್ತಕ್ಕೆ ಆಲ್‌ಔಟ್‌ ಆಗಿದೆ. ಇದರ ಜೊತೆಗೆ ನಿಯಮಿತ ನಾಯಕ ವಿರಾಟ್‌ ಕೊಹ್ಲಿ ಹಾಗೂ ಶ್ರೇಯಸ್‌ ಅಯ್ಯರ್‌ ಅವರೊಂದಿಗಿನ ಗಾಯದ ಪಟ್ಟಿಗೆ ಇದೀಗ ಮತ್ತೊಬ್ಬ ಆಟಗಾರ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಮೊದಲನೇ ಟೆಸ್ಟ್ ಗೆಲುವಿನ ವಿಶ್ವಾಸದೊಂದಿಗೆ ಇಲ್ಲಿನ ದಿ ವಾಂಡರರ್ಸ್ ಕ್ರೀಡಾಂಗಣದಲ್ಲಿ ಎರಡನೇ ಟೆಸ್ಟ್‌ ಪಂದ್ಯಕ್ಕೆ ಕಣಕ್ಕೆ ಇಳಿದ ಭಾರತ ತಂಡಕ್ಕೆ ಆರಂಭಿಕ ದಿನ ಹಿನ್ನಡೆಯಾಯಿತು. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ 63.1 ಓವರ್‌ಗಳಿಗೆ 202 ರನ್‌ಗಳಿಗೆ ಆಲ್‌ಔಟ್‌ ಆಯಿತು. ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಮೊದಲನೇ ದಿನದಾಟದ ಅಂತ್ಯಕ್ಕೆ 18 ಓವರ್‌ಗಳಿಗೆ ಒಂದು ವಿಕೆಟ್‌ ನಷ್ಟಕ್ಕೆ 35 ರನ್‌ ಗಳಿಸಿದೆ.

ಅಂದಹಾಗೆ ದಕ್ಷಿಣ ಆಫ್ರಿಕಾ ಇನಿಂಗ್ಸ್‌ನಲ್ಲಿ ತಮ್ಮ ನಾಲ್ಕನೇ ಓವರ್‌ನ ಕೊನೆಯ ಎಸೆತದಲ್ಲಿ ಮೊಹಮ್ಮದ್‌ ಸಿರಾಜ್‌ ಅವರ ಕಾಲಿನಲ್ಲಿ ನೋವು ಕಾಣಿಸಿಕೊಂಡಿತು. ಈ ಹಿನ್ನೆಲೆಯಲ್ಲಿ ಅವರು ತಮ್ಮ ನಾಲ್ಕನೇ ಓವರ್‌ ಅನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಈ ವೇಳೆ ತಂಡದ ಫಿಸಿಯೋ ಮೈದಾನಕ್ಕೆ ಆಗಮಿಸಿ ಯುವ ವೇಗಿಯನ್ನು ಡ್ರೆಸ್ಸಿಂಗ್ ಕೊಠಡಿಗೆ ಕರೆದೊಯ್ದರು. ನಂತರ ಕೊನೆಯ ಎಸೆತವನ್ನು ಶಾರ್ದುಲ್‌ ಠಾಕೂರ್‌ ಪೂರ್ಣಗೊಳಿಸಿದರು.

ಭಾರತ 202ಕ್ಕೆ ಆಲ್‌ಔಟ್‌: ಹರಿಣಗಳ ಹಿಡಿತದಲ್ಲಿ ದ್ವಿತೀಯ ಟೆಸ್ಟ್‌!

ಪಂದ್ಯ ಆರಂಭಕ್ಕೂ ಮುನ್ನ ನಿಯಮಿತ ನಾಯಕ ವಿರಾಟ್‌ ಕೊಹ್ಲಿ ಬೆನ್ನು ನೋವಿನಿಂದ ಎರಡನೇ ಟೆಸ್ಟ್‌ನಿಂದ ಹೊರಗುಳಿದಿದ್ದರು. ಇವರ ಜೊತೆ ಹೊಟ್ಟೆ ನೋವಿನ ಸಮಸ್ಯೆಯಿಂದ ಶ್ರೇಯಸ್‌ ಅಯ್ಯರ್‌ ಕೂಡ ಎರಡನೇ ಪಂದ್ಯದ ಆಯ್ಕೆಗೆ ಲಭ್ಯರಿರಲಿಲ್ಲ. ಇದೀಗ ಇವರ ಪಟ್ಟಿಗೆ ಮೊಹಮ್ಮದ್‌ ಸಿರಾಜ್‌ ಸೇರ್ಪಡೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಬಿಸಿಸಿಐ ಮಾಹಿತಿ ನೀಡುವುದು ಬಾಕಿ ಇದೆ.

ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌ ರಾಹುಲ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅಂದಹಾಗೆ ದಕ್ಷಿಣ ಆಫ್ರಿಕಾ ವೇಗಿಗಳ ಮಾರಕ ದಾಳಿಯ ಎದುರು ಭಾರತದ ಬ್ಯಾಟ್ಸ್‌ಮನ್‌ಗಳು ಮಕಾಡೆ ಮಲಗಿದರು. ಕೆ.ಎಲ್‌ ರಾಹುಲ್‌ (50) ಹಾಗೂ ಆರ್‌ ಅಶ್ವಿನ್‌ (46) ಸ್ವಲ್ಪ ಪ್ರತಿರೋದ ಒಡ್ಡಿದರು. ಆದರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಪುಟಿದೇಳುವಲ್ಲಿ ವಿಫಲರಾದರು.

ದಕ್ಷಿಣ ಆಫ್ರಿಕಾ ವಿರುದ್ಧ ಜೊಹಾನ್ಸ್‌ಬರ್ಗ್‌ ಟೆಸ್ಟ್‌ನಲ್ಲಿ ಕನ್ನಡಿಗರದೇ ಹವಾ!

ಇನ್ನು ಕೊಹ್ಲಿ ಅನುಪಸ್ಥಿತಿಯಲ್ಲಿ ಚೇತೇಶ್ವರ್‌ ಪೂಜಾರ ಹಾಗೂ ಅಜಿಂಕ್ಯ ರಹಾನೆ ಮೇಲೆ ಸಾಕಷ್ಟು ಜವಾಬ್ದಾರಿ ಇತ್ತು. ಆದರೆ, ಇವರು ಮಾರ್ಕೊ ಯೆನ್ಸನ್ ಅವರ ಸತತ ಎಸೆತಗಳಿಗೆ ವಿಕೆಟ್‌ ಒಪ್ಪಿಸಿ ನಿರಾಸೆ ಮೂಡಿಸಿದರು. ದ್ವಿತೀಯ ಇನಿಂಗ್ಸ್‌ನಲ್ಲಿಯೂ ಇವರಿಬ್ಬರೂ ವೈಫಲ್ಯ ಅನುಭವಿಸಿದರೆ, ಮೂರನೇ ಹಾಗೂ ಅಂತಿಮ ಟೆಸ್ಟ್‌ಗೆ ಬೆಂಚ್‌ ಕಾಯಬೇಕಾಗಬಹುದು.

ಸಂಕ್ಷಿಪ್ತ ಸ್ಕೋರ್‌(ಎರಡನೇ ದಿನದಾಂತ್ಯಕ್ಕೆ)
ಭಾರತ: ಪ್ರಥಮ ಇನಿಂಗ್ಸ್‌ 63.1 ಓವರ್‌ಗಳಿಗೆ 202/10 (ಕೆ.ಎಲ್‌ ರಾಹುಲ್‌ 50, ಆರ್‌ ಅಶ್ವಿನ್‌ 46, ಮಯಾಂಕ್‌ ಅಗರ್ವಾಲ್‌ 26; ಮಾರ್ಕೊ ಯೆನ್ಸನ್‌ 31 ಕ್ಕೆ 4, ಕಗಿಸೊ ರಬಾಡ 64 ಕ್ಕೆ 3, ಡುವಾನ್ ಓಲಿವಿಯರ್ 64ಕ್ಕೆ 3)

ದಕ್ಷಿಣ ಆಫ್ರಿಕಾ: 18 ಓವರ್‌ಗಳಿಗೆ 35/1 (ಕೀಗನ್‌ ಪೀಟರ್ಸನ್‌ 14*, ಡೀನ್‌ ಎಲ್ಗರ್‌ 11*; ಮೊಹಮ್ಮದ್‌ ಶಮಿ 15 ಕ್ಕೆ 1)



Read more