Online Desk
ಬೆಂಗಳೂರು: ಲಾಲ್‍ಬಾಗ್‍ನಲ್ಲಿ ಈ ಜನವರಿಯಲ್ಲಿ ನಡೆಯಬೇಕಿದ್ದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ರದ್ದಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಬಾರಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಸಲು ಲಾಲ್‍ಬಾಗ್‍ನಲ್ಲಿ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ವರನಟ ಡಾ. ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ಗಾಜಿನ ಮನೆಯಲ್ಲಿ ಅವರದೇ ಹೂವಿನ ಪ್ರತಿಕೃತಿಗಳನ್ನು ನಿರ್ಮಿಸಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಅದ್ಧೂರಿಯಾಗಿ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಏಕೆಂದರೆ ಕಳೆದ ಮೂರು ಬಾರಿಯಿಂದ ಪ್ರದರ್ಶನ ನಡೆಸಿರಲಿಲ್ಲ. ಈ ಬಾರಿಯಾದರೂ ಅದ್ಧೂರಿಯಾಗಿ ಮಾಡಿ, ನಷ್ಟವಾಗಿರುವ ಹಣ ತುಂಬಿಸಿಕೊಳ್ಳುವ ಯೋಜನೆಯೂ ಇತ್ತು. ಜತೆಗೆ ಈ ಬಾರಿ 10 ರಿಂದ 12 ದಿನಗಳ ಕಾಲ ಪ್ರದರ್ಶನ ನಡೆಸುವ ಬಗೆಗೂ ಚರ್ಚೆ ನಡೆಸಲಾಗಿತ್ತು.
ನಿರ್ಧರಿಸಿದ 15-20 ದಿನಗಳಲ್ಲೇ ಕೋವಿಡ್ ಓಮಿಕ್ರಾನ್ ಸೋಂಕು ಹೆಚ್ಚಾಗುತ್ತಾ ಹೋಯಿತು. ಪ್ರದರ್ಶನ ನಡೆಸಲು ಸರಕಾರ ಅನುಮತಿ ಕೊಟ್ಟಿದೆ. ಆದರೆ, ಬಿಬಿಎಂಪಿ ಅನುಮತಿ ನೀಡುತ್ತಿಲ್ಲ. ಪ್ರದರ್ಶನ ಮಾಡುವುದಾದರೆ ಒಂದು ಬಾರಿಗೆ ಕೇವಲ 300 ಅಥವಾ 500 ಜನರನ್ನು ಮಾತ್ರ ಒಳ ಬಿಡಬೇಕು ಎಂದು ಪಾಲಿಕೆ ಷರತ್ತು ವಿಧಿಸಿದೆ.
ಇದನ್ನೂ ಓದಿ: ರಾಜ್ಯದಲ್ಲಿ ನಿನ್ನೆ ಒಂದೇ ದಿನ 10 ಓಮಿಕ್ರಾನ್ ಕೇಸ್ ಪತ್ತೆ!
ಇಡೀ ದಿನ ಜನ ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಬರುತ್ತಾರೆ. ಅಷ್ಟು ಜನಸಂದಣಿ ತಡೆಯುವುದು ಕಷ್ಟ. ಒಂದು ವೇಳೆ 500 ಜನರನ್ನು ಬಿಟ್ಟರೆ ಅವರು ಪ್ರದರ್ಶನ ಮತ್ತು ಉದ್ಯಾನ ನೋಡಲು ಕನಿಷ್ಠವೆಂದರೂ 2-3 ಗಂಟೆ ಸಮಯ ತೆಗೆದುಕೊಳ್ಳುತ್ತಾರೆ. ಅಲ್ಲದೆ, ಹಾಗೆ ಬಂದವರು ಕೆಲವರು ಸಂಜೆಯವರೆಗೂ ಉದ್ಯಾನದಲ್ಲೇ ಇರುತ್ತಾರೆ. ಹೀಗಿರುವಾಗ, ನಾವು ಕೋಟಿಗಟ್ಟಲೆ ಹಣ ಖರ್ಚು ಮಾಡಿ ಕಡಿಮೆ ಜನರನ್ನು ಬಿಟ್ಟರೆ ನಮಗೆ ತೀವ್ರ ಪ್ರಮಾಣದಲ್ಲಿ ನಷ್ಟವಾಗುತ್ತದೆ. ಈಗಾಗಲೇ 2019ರಲ್ಲಿ ನಡೆಸಿದ ಪ್ರದರ್ಶನಗಳಿಂದಲೇ 40 ಲಕ್ಷ ರೂ.ಗೂ ಅಧಿಕ ಪ್ರಮಾಣದಲ್ಲಿ ನಷ್ಟ ಮಾಡಿಕೊಂಡಿದ್ದೇವೆ. ಈ ಬಾರಿ ಪ್ರದರ್ಶನ ಮಾಡಿ ಜನ ಬಾರದಿದ್ದರೆ ದೊಡ್ಡ ಮಟ್ಟದಲ್ಲಿ ನಷ್ಟವಾಗುತ್ತದೆ. ಹೀಗಾಗಿ, ಪ್ರದರ್ಶನ ಮಾಡದಿರಲು ತೀರ್ಮಾನಿಸಲಾಗಿದೆ ಎಂದು ಮೈಸೂರು ಉದ್ಯಾನ ಕಲಾಸಂಘದ ನಿರ್ದೇಶಕ ಎಂ. ಕುಪ್ಪುಸ್ವಾಮಿ ತಿಳಿಸಿದರು.
ಪ್ರದರ್ಶನಕ್ಕಾಗಿ ಲಾಲ್‍ಬಾಗ್‍ನಲ್ಲಿ ಹಲವು ಬಗೆಯ ಅಲಂಕಾರಿಕ ಗಿಡಗಳನ್ನು ನೆಟ್ಟು ಬೆಳೆಸಲಾಗಿತ್ತು. ಜತೆಗೆ ಕಬ್ಬನ್‍ಪಾರ್ಕ್, ನಂದಿಬೆಟ್ಟ, ಊಟಿ, ಕೆಮ್ಮಣ್ಣುಗುಂಡಿ ಮತ್ತಿತರ ಭಾಗಗಳಿಂದ ಬಗೆ ಬಗೆಯ ಹೂವಿನ ಸಸಿಗಳನ್ನು ಬೆಳೆಸಿ ಪ್ರದರ್ಶನಕ್ಕೆ ತರಲು ಸಿದ್ಧತೆಗಳನ್ನು ಮಾಡಲಾಗಿತ್ತು. ಆದರೆ, ಇದೀಗ ಇದೆಲ್ಲಕ್ಕೂ ಬ್ರೇಕ್ ಬಿದ್ದಂತಾಗಿದೆ.
ಫಲಪುಷ್ಪ ಪ್ರದರ್ಶನ ನಡೆಸಲು ಅನಾನುಕೂಲವಾಗಿರುವ ವಾಸ್ತವ ಸ್ಥಿತಿಯ ಕುರಿತು ರಾಜ್ಯ ತೋಟಗಾರಿಕೆ ಇಲಾಖೆ ನಿರ್ದೇಶಕ ಕೆ. ನಾಗೇಂದ್ರ ಪ್ರಸಾದ್ ಅವರು ಕೂಡ ಸರಕಾರಕ್ಕೆ ಪತ್ರ ಬರೆದಿರುವ ಬಗ್ಗೆ ತಿಳಿದು ಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಫಲಪುಷ್ಪ ಪ್ರದರ್ಶನ ಮಾಡುವುದು ಕಷ್ಟ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.